ADVERTISEMENT

ಚೆಕ್‌ ಅಮಾನ್ಯ ಪ್ರಕರಣ: ಮಾಳವಿಕಾ ಹೆಗ್ಡೆ ಸಹಿತ 8 ಮಂದಿ ಬಂಧನಕ್ಕೆ ಆದೇಶ

ದಿವಂಗತ ಸಿದ್ದಾರ್ಥ ಹೆಗ್ಡೆ ಒಡೆತನದ ಕಾಫಿ ಡೇ ಗ್ಲೋಬಲ್‌ ಘಟಕ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 3:18 IST
Last Updated 5 ನವೆಂಬರ್ 2020, 3:18 IST

ಚಿಕ್ಕಮಗಳೂರು: ಕಾಫಿ ಖರೀದಿಸಿದ ಚೆಕ್‌ ಅಮಾನ್ಯ (ಬೌನ್ಸ್‌) ಪ್ರಕರಣದಲ್ಲಿ ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್‌ ನಿರ್ದೇಶಕಿ ಮಾಳವಿಕಾ ಹೆಗ್ಡೆ ಸಹಿತ ಎಂಟು ಮಂದಿಯ ಬಂಧನಕ್ಕೆ ಜಾಮೀನುರಹಿತ ವಾರಂಟ್‌ ಆದೇಶವನ್ನು ಜಿಲ್ಲೆಯ ಮೂಡಿಗೆರೆ ಜೆಎಂಎಫ್‌ಸಿ ಹೊರಡಿಸಿದೆ.

ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್‌, ವ್ಯವಸ್ಥಾಪಕ ನಿರ್ದೇಶಕ, ಮಾಳವಿಕಾ ಹೆಗ್ಡೆ, ಜಯರಾಜ್‌ ಸಿ. ಹುಬ್ಳಿ, ಸದಾನಂದ ಪೂಜಾರಿ, ನಿತಿನ್‌ ಬಾಗ್ಮನೆ, ಕಿರೀಟಿ ಸಾವಂತ್‌, ಜಾವಿದ್‌ ಪರ್ವಿಜ್‌ ಬಂಧನಕ್ಕೆ ಆದೇಶ ನೀಡಿದೆ.

ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್‌ ನೀಡಿರುವ ಚೆಕ್‌ಗಳು ಅಮಾನ್ಯವಾಗಿವೆ ಎಂದು ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯ ಕಾಫಿ ಬೆಳೆಗಾರ ಕೆ.ನಂದೀಶ್‌ ಅವರು ಕೋರ್ಟ್‌ನಲ್ಲಿ ಜುಲೈ 15ರಂದು ದಾವೆ ಹೂಡಿದ್ದರು.

ADVERTISEMENT

‘ಅ.6ರಂದು ಕೋರ್ಟ್‌ಗೆ ಹಾಜರಾಗುವಂತೆ ಈ ಎಂಟು ಮಂದಿಗೆ ಸಮನ್ಸ್‌ ಜಾರಿಯಾಗಿತ್ತು. ಅವರು ಕೋರ್ಟ್‌ಗೆ ಹಾಜರಾಗಿರಲಿಲ್ಲ’ ಎಂದು ನಂದೀಶ್‌ ಪರ ವಕೀಲ ತೇಜಸ್ವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಫಿ ಡೇಯವರು ಕಾಫಿ ಖರೀದಿಸಿದ ಬಾಬ್ತು ₹ 45 ಲಕ್ಷ ಕೊಡಬೇಕಿತ್ತು. ವಿವಿಧ ಮೊತ್ತದ 10 ಚೆಕ್‌ಗಳನ್ನು ನೀಡಿದ್ದರು. ಅವು ಬೌನ್ಸ್‌ ಆಗಿವೆ. ಕೋರ್ಟ್‌ ಮೆಟ್ಟಿಲು ಏರಿದ್ದೇನೆ’ ಎಂದು ದೂರುದಾರ ನಂದೀಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಾಫಿ ಡೇ ಗ್ಲೋಬಲ್‌ನ ಚೆಕ್‌ ಅಮಾನ್ಯಕ್ಕೆ ಸಂಬಂಧಿಸಿದಂತೆ 12 ದೂರುಗಳು ಮೂಡಿಗೆರೆ ಜೆಎಂಎಫ್‌ಸಿಯಲ್ಲಿ ದಾಖಲಾಗಿವೆ. ಚಿಕ್ಕಮಗಳೂರಿನ ಜೆಎಂಎಫ್‌ಸಿಯಲ್ಲಿ ಐದಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಕಾಫಿ ಡೇ ಗ್ಲೋಬಲ್‌ ಘಟಕದ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ ಅವರು ಕಳೆದ ವರ್ಷ ಜುಲೈ 31ರಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್‌ ಕಾಫಿ ಖರೀದಿಯನ್ನು ಈಚೆಗೆ ಸ್ಥಗಿತಗೊಳಿಸಿತ್ತು. ಕಾಫಿ ಖರೀದಿಸಿದ ಹಣವನ್ನು ಹಲವು ಬೆಳೆಗಾರರಿಗೆ ಪಾವತಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.