
ಮೂಡಿಗೆರೆ: ತಾಲ್ಲೂಕಿನ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಗಿ 75 ವರ್ಷಗಳಾದ ಹಿನ್ನೆಲೆಯಲ್ಲಿ ಡಿಸೆಂಬರ್ 27ರಂದು ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಮೃತ ಮಹೋತ್ಸವ ಆಚರಣಾ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಭರದ ಸಿದ್ಧತೆ ನಡೆದಿದೆ.
1950ರಲ್ಲಿ ಅತ್ತಿಗೆರೆ ಗ್ರಾಮದಲ್ಲಿ ಸ್ಥಾಪನೆಯಾದ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ ಕಲಿಕೆಗೆ ಅವಕಾಶವಿದ್ದು, ಸಾವಿರಾರು ಮಂದಿ ಈ ಶಾಲೆಯಿಂದ ಶಿಕ್ಷಣ ಪಡೆದಿದ್ದಾರೆ.
ಎರಡು ಕೊಠಡಿಗಳ ಕಟ್ಟಡದಲ್ಲಿ ಆರಂಭವಾದ ಶಾಲೆಯು, ಸರ್ಕಾರದ ಅನುದಾನ ಹಾಗೂ ದಾನಿಗಳ ನೆರವಿನಿಂದ ಇಂದು ಅಭಿವೃದ್ದಿ ಪಥದತ್ತ ಸಾಗಿದ್ದು, ಹಲವಾರು ನುರಿತ ಶಿಕ್ಷಕರು ವಿದ್ಯೆಯನ್ನು ಧಾರೆ ಎರೆದ ಪರಿಣಾಮ ಹಲವು ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.
ಕೊಟ್ಟಿಗೆಹಾರದ ಸುತ್ತಮುತ್ತಲ ಗ್ರಾಮಗಳಾದ ತರುವೆ, ದೇವನಗೂಲ್, ಅತ್ತಿಗೆರೆ, ಚಕ್ಕೋಡು, ಕೋಗಿಲೆ, ಬಿನ್ನಡಿ, ಬಾಳೂರು, ಆಲೇಖಾನ್ ಹೊರಟ್ಟಿ ಮುಂತಾದ ಗ್ರಾಮಗಳಿಗೆ ಅತ್ತಿಗೆರೆ ಶಾಲೆಯೇ ಕೇಂದ್ರವಾಗಿದ್ದರಿಂದ ದಶಕಗಳ ಹಿಂದಿನವರೆಗೂ 250 ರಿಂದ 300 ವಿದ್ಯಾರ್ಥಿಗಳು ಶಾಲೆಯಲ್ಲಿ ದಾಖಲಾತಿ ಪಡೆದಿದ್ದರು. ಅತ್ತಿಗೆರೆ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಒಬ್ಬರಾದರೂ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿದ್ದಾರೆ ಎಂಬುದೇ ಈ ಶಾಲೆಯು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಯಾಗಿದೆ.
ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದ್ದರೂ ಅಮೃತ ಮಹೋತ್ಸವ ಆಚರಣೆಗೆ ಅತ್ತಿಗೆರೆ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಗಳಲ್ಲೂ ಸಂಭ್ರಮ ಮನೆ ಮಾಡಿದೆ.
ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಎಂಜಿನಿಯರ್, ವೈದ್ಯರು, ವಕೀಲರು, ನ್ಯಾಯಾಧೀಶರು, ಪೊಲೀಸ್, ಉಪನ್ಯಾಸಕರು, ಯೋಧರು, ಚಲನಚಿತ್ರ ನಟ ನಟಿ, ರಾಜಕೀಯ ನಾಯಕರು, ಕೃಷಿ, ಖಾಸಗಿ ಉದ್ಯಮ, ವ್ಯಾಪಾರ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅವರೆಲ್ಲರೂ ಅಮೃತ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಅಮೃತ ಮಹೋತ್ಸವದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರಿಗೆ ಗುರುವಂದನೆ, ಹಳೆ ವಿದ್ಯಾರ್ಥಿ ಸಾಧಕರಿಗೆ ಗೌರವ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅಮೃತ ಮಹೋತ್ಸವದ ನೆನಪಿಗೆ ಸ್ಮರಣಸಂಚಿಕೆ ಬಿಡುಗಡೆ ಮತ್ತಿತರ ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶಾಲೆಯ ಅಮೃತ ಮಹೋತ್ಸವ ಆಚರಣಾ ಸಮಿತಿ, ಎಸ್‌ಡಿಎಂಸಿ, ಹಳೇವಿದ್ಯಾರ್ಥಿಗಳ ಸಂಘ ಸಿದ್ಧತೆಯಲ್ಲಿ ತೊಡಗಿವೆ.
ಕಲಿತ ಶಾಲೆಗಳಿಗೆ ಋಣಿಯಾಗಿರುವುದು ಪುಣ್ಯದ ಕೆಲಸ. ಅಮೃತ ಮಹೋತ್ಸವಕ್ಕೆ ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಹಳೆ ವಿಧ್ಯಾರ್ಥಿಗಳು ಶಿಕ್ಷಣ ಪ್ರೇಮಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕುಸತೀಶ್ ಬಿ.ಎಂ ಅಧ್ಯಕ್ಷ ಅಮೃತ ಮಹೋತ್ಸವ ಆಚರಣಾ ಸಮಿತಿ
ಅಮೃತ ಮಹೋತ್ಸವವನ್ನು ಮನೆಯ ಕಾರ್ಯಕ್ರಮದಂತೆ ಆಚರಿಸಲಾಗುತ್ತಿದ್ದು ಹಳೆಯ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದೇ ಸಂತಸ ತರುತ್ತದೆ.ಟಿ.ಎಂ.ಹರಿಣಿ ಹಳೆ ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.