ADVERTISEMENT

ಅಯ್ಯಪ್ಪಸ್ವಾಮಿ ದೇಗುಲ ಲೋಕಾರ್ಪಣೆ

₹60 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಅತ್ಯಾಕರ್ಷಕವಾಗಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 10:35 IST
Last Updated 23 ಜೂನ್ 2018, 10:35 IST
ನರಸಿಂಹರಾಜಪುರ ತಾಲ್ಲೂಕು ಶೆಟ್ಟಿಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪ ಸ್ವಾಮಿ ದೇವಾಲಯ
ನರಸಿಂಹರಾಜಪುರ ತಾಲ್ಲೂಕು ಶೆಟ್ಟಿಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪ ಸ್ವಾಮಿ ದೇವಾಲಯ   

ನರಸಿಂಹರಾಜಪುರ ತಾಲ್ಲೂಕು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಬೇರೆ ಬೇರೆ ಸ್ಥಳ, ರಾಜ್ಯಗಳಿಂದ ಈ ಭಾಗಕ್ಕೆ ವಲಸೆ ಬಂದವರು ಧಾರ್ಮಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅಂತಹ ಪ್ರಮುಖ ದೇವಾಲಯಗಳಲ್ಲಿ ತಾಲ್ಲೂಕಿನ ಶೆಟ್ಟಿಕೊಪ್ಪದಲ್ಲಿ ಸ್ಥಾಪಿಸಿದ ಅಯ್ಯಪ್ಪಸ್ವಾಮಿ ದೇವಸ್ಥಾನವೂ ಒಂದಾಗಿದೆ.

ಕೇರಳದಿಂದ ಶೆಟ್ಟಿಕೊಪ್ಪ ಗ್ರಾಮಕ್ಕೆ ವಲಸೆ ಬಂದು ಇಲ್ಲಿಯೇ ನೆಲೆ ಕಂಡು ಕೊಂಡ ವಿಶ್ವಕರ್ಮ ಜನಾಂಗ, ಪೂಜಾರರು, ಈಡಿಗರು, ನಾಯರ್, ಪುಲಿಯನ್ ಸಮುದಾಯದವರು ಅಯ್ಯಪ್ಪಸ್ವಾಮಿಯ ಭಕ್ತರಾಗಿದ್ದಾರೆ. 1974ರಿಂದಲೂ ಇವರ ಮನೆಗಳಲ್ಲಿ ಅಯ್ಯಪ್ಪನ ಪೂಜೆ ಹಾಗೂ ಭಜನಾ ಕಾರ್ಯವನ್ನು ನಡೆಸುತ್ತಿದ್ದಾರೆ. ಪ್ರತಿ ಶನಿವಾರ ಒಂದೊಂದು ಮನೆಯಲ್ಲಿ ಸೇರಿ ಅಯ್ಯಪ್ಪನನ್ನು ಪೂಜಿಸುತ್ತಿದ್ದರು.

ಅಂದು ಈ ಸಮುದಾಯದವರಲ್ಲಿ ಹಿರಿಯರಾಗಿದ್ದ ಗೋಪಾಲ ಆಚಾರಿ, ಇ.ಎನ್.ಕುಟ್ಟಪ್ಪ ಆಚಾರ್, ರಾಘವನ್ ಆಚಾರ್, ವೇಲಾಯಧನ್, ಕೆ.ನಾಣು, ಕೆ.ಟಿ.ಕೃಷ್ಣನಾಯರ್, ಪಿ.ಪಿ.ಸುಬ್ರನ್ ಇವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ಪ್ರಾರಂಭಗೊಂಡವು. ನಂತರ 1978ರ ವೇಳೆಗೆ ಶೆಟ್ಟಿಕೊಪ್ಪದ ಕೆ.ನಾಣು ಅವರ ಸ್ವಾಧೀನದಲ್ಲಿದ್ದ 1ಎಕರೆ ಸರ್ಕಾರಿ ಭೂಮಿಯನ್ನು ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಿಸಲು ಬಿಟ್ಟುಕೊಟ್ಟರು. ಈ ಸಮುದಾಯದವರೆಲ್ಲಾ ಸೇರಿ ಅಯ್ಯಪ್ಪಸ್ವಾಮಿ ಭಜನಾ ಮಂಡಳಿ ಎಂಬ ಮಂಡಳಿ ರಚಿಸಿಕೊಂಡು ಒಂದು ಹುಲ್ಲಿನ ಗುಡಿಸಲನ್ನ ಆ ಜಾಗದಲ್ಲಿ ನಿರ್ಮಿಸಿ ಕೊಂಡು ಅಯ್ಯಪ್ಪಸ್ವಾಮಿಯ ಪಟ ಇಟ್ಟು ಪೂಜೆ ಹಾಗೂ ಭಜನೆ ಪ್ರಾರಂಭಿಸಿದರು. ಅಂದಿನಿಂದ ಪ್ರತಿಯೊಂದು ಮನೆಯವರು ಸೇರಿಕೊಂಡು ಪೂಜೆ ನಡೆಸಿಕೊಂಡು ಬಂದಿದ್ದರು.

ADVERTISEMENT

ಅಲ್ಲದೆ, ಪ್ರತಿ ವರ್ಷ ಡಿಸೆಂಬರ್ 26ರಂದು ಅಯ್ಯಪ್ಪಸ್ವಾಮಿಯ ದೀಪೋತ್ಸವ ಆಚರಿಸಿಕೊಂಡು ಬಂದಿದ್ದಾರೆ. ಗಾಂಧಿ ಗ್ರಾಮದ ಗುರುಸ್ವಾಮಿಗಳಾದ ನಾರಾಯಣಸ್ವಾಮಿ ಅವರು 15 ವರ್ಷಗಳ ಕಾಲ ಸರ್ವವನ್ನು ತ್ಯಜಿಸಿ ದೇವಾಲಯ ಕುಟೀರದಲ್ಲೇ ವಾಸವಾಗಿ ಪೂಜಿಸಿಕೊಂಡು ಬಂದಿದ್ದರು. ಈ ದೇವಾಲಯ ಸಮಿತಿಯ ಅಧ್ಯಕ್ಷರಾಗಿ ಟಿ.ಜಿ.ಗೋಪಿನಾಥ್ ಆಚಾರ್, ಕೆ.ಕೆ.ಕೇಶವನ್ ಆಚಾರ್, ಟಿ.ಜಿ.ಪಿತಾಂಬರಾಚಾರ್, ಜಿ.ಡಿ.ಸೋಮಣ್ಣ, ಕೆ.ವಿ.ಸತ್ಯನಾರಾಯಣಸ್ವಾಮಿ, ಎ.ಬಿ. ಚಂದ್ರಶೇಖರ್, ಎ.ಎಲ್,ಮಹೇಶ್, ಎಂ.ಟಿ.ಕುಮಾರ್, ಡಾ.ಮೋಹನ್. ಪಿ.ರಾಮೇಂದ್ರ ಸೇವೆ ಸಲ್ಲಿಸಿದ್ದಾರೆ.

2007ರಲ್ಲಿ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಅವರು ಊರಿನ ಭಕ್ತರ, ವಿಶ್ವಕರ್ಮ ಜನಾಂಗದವರ ಹಾಗೂ ಭಕ್ತರ ಸಲಹೆ ಪಡೆದು ದೇವಾಲಯ ನಿರ್ಮಾಣ ಮಾಡಲು ಮುಂದಾದರು. ದೇವಾಲಯ ನಿರ್ಮಾಣದ ಪ್ರಾರಂಭದ ಅವಧಿಯಲ್ಲಿ ಬಿ.ಎನ್.ಸುರೇಶ್ , ನಂತರದ ಅವಧಿಯಲ್ಲಿ ಬಿ.ಕೆ.ಉದಯಗಗಕರ್ ಸಂಘದ ಅಧ್ಯಕ್ಷರಾಗಿ ಸುಂದರವಾದ ದೇವಾಲಯ ನಿರ್ಮಾಣ ಮಾಡಿ ಜೂನ್ 22, 2018ರಂದು ಲೋಕಾರ್ಪಣೆ ಮಾಡಲಾಯಿತು. ಇಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯವನ್ನು ಸಂಪೂರ್ಣವಾಗಿ ಕೇರಳದಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದ ಮೂಲ ಸ್ವರೂಪದಲ್ಲಿಯೇ ಸುಮಾರು ₹60ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಅತ್ಯಾಕರ್ಷಕವಾಗಿ ನಿರ್ಮಾಣ ಮಾಡಲಾಗಿದೆ.

ದೇವಾಲಯ ಇದೇ ಮಾದರಿಯಲ್ಲಿರಬೇಕೆಂಬ ಬಗ್ಗೆ ನರಸಿಂಹರಾಜಪುರದ ಅರವಿಂದ ಆಚಾರ್ ನೀಲಿ ನಕ್ಷೆ ತಯಾರಿಸಿಕೊಟ್ಟರು. ದೇವಾಲಯದ ಆವರಣದಲ್ಲಿ ಪರಿವಾರ ದೇವತೆಗಳಾದ ಗಣಪತಿ, ಸುಬ್ರಹ್ಮಣ್ಯ, ಮಾಳಿಗೆ ಪುರುತ್ತಮೆ, ನಾಗದೇವರು ಹಾಗೂ ಕ್ಷೇತ್ರ ಪಾಲಕ ದೇವತೆಗಳ ದೇವಾಲಯವನ್ನು ಸಹ ನಿರ್ಮಾಣ ಮಾಡಲಾಗಿದೆ. ದೇವಾಲಯ ಲೋಕಾರ್ಪಣೆ ಕಾರ್ಯವನ್ನು ಶುಕ್ರವಾರ ಬೆಜ್ಜವಳ್ಳಿ ಅಯ್ಯಪ್ಪಸ್ವಾಮಿ ದೇವಾಲಯದ ವಿಶ್ವಸಂತೋಷ ಭಾರತಿ ಸ್ವಾಮೀಜಿ ಹಾಗೂ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ನೆರವೇರಿಸಿದರು.

ದೇವಾಲಯದ ಆವರಣದಲ್ಲಿ ಸಾಕಷ್ಟು ಜಾಗವಿರುವುದರಿಂದ ಮುಂದಿನ ದಿನಗಳಲ್ಲಿ ಸಮುದಾಯ ಭವನ ಹಾಗೂ ಆದಾಯ ಬರುವ ನಿಟ್ಟಿನಲ್ಲಿ ವಾಣಿಜ್ಯ ಸಂಕಿರಣ ನಿರ್ಮಿಸುವ ಉದ್ದೇಶವಿದೆ ಎನ್ನುತ್ತಾರೆ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಕೆ.ಉದಯಕರ್, ಕಾರ್ಯದರ್ಶಿ ಎಂ.ಮಹೇಶ್.

ದೇವಸ್ಥಾನದ ಉಳಿದಿರುವ ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡ ಬಯಸುವವರು ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಂ. ಮಹೇಶ ಅವರನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ 9980061681

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.