ಕಡೂರು: ದೇಶದಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿದ್ದು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮಾದಕ ಪದಾರ್ಥಗಳ ಸೇವನೆಯಿಂದ ದೂರ ಇದ್ದರೆ ಭವಿಷ್ಯ ಸದೃಢವಾಗಲು ಸಾಧ್ಯ ಎಂದು ಕಡೂರು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಇರ್ಫಾನ್ ತಿಳಿಸಿದರು.
ವಿಶ್ವ ಮಾದಕ ದ್ರವ್ಯ ಸೇವನೆ ಹಾಗೂ ಅಕ್ರಮಸಾಗಾಟ ವಿರೋಧಿ ದಿನಾಚರಣೆಯ ಅಂಗವಾಗಿ ಕಡೂರು ಪೊಲೀಸ್, ಪಿಟಿಎಸ್ ತರಬೇತಿ ಸಂಸ್ಥೆ ಕಡೂರು, ಕಾನೂನು ಸೇವಾ ಪ್ರಾಧಿಕಾರ ಹಾಗೂ ಶಾಲಾ ಮಕ್ಕಳು ಮಾದಕ ದ್ರವ್ಯಗಳ ವಿರೋಧವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಗುರುವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಿಂದ ಆರಂಭಿಸಿದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಡೂರು ಪೊಲೀಸ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳು ಕರ್ತವ್ಯದ ಸ್ಥಳಗಳಿಗೆ ತೆರಳಿದ ನಂತರ ಮಾದಕ ವಸ್ತು ಮಾರಾಟ ಮಾಡುವವರಿಗೆ ಕಾನೂನು ಮೂಲಕ ಶಿಕ್ಷೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಕಡೂರು ಸಿಪಿಐ ಎಂ.ರಫೀಕ್ ಪ್ರತಿಜ್ಞಾ ವಿಧಿ ಬೋಧಿಸಿದರು.
1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಚ್.ಸವಿತಾರಾಣಿ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ತಹಾ ಖಲೀಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಡೂರು ಪೊಲೀಸ್ ತರಬೇತಿ ಶಾಲೆಯ ಅಧೀಕ್ಷಕ ಪಾಪಣ್ಣ, ಕಡೂರು ಪಿಎಸ್‌ಐ ಸಜಿತ್ ಕುಮಾರ್, ಪಂಚನಹಳ್ಳಿಯ ಪಿಎಸ್‌ಐ ಶಾಹಿದ್ ಅಫ್ರಿದಿ, ಗೀತಾ, ಸಿಂಗಟಗೆರೆಯ ಪಿಎಸ್‌ಐ ರಂಗನಾಥ್, ಧನಂಜಯ್, ಲೀಲಾವತಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಎಚ್.ಆರ್.ರೇಖಾ, ಪಿಟಿಎಸ್‌ನ 450 ಪೊಲೀಸ್ ಕಾನ್‌ಸ್ಟೆಬಲ್‌ಗಳು, ಶಾಲಾ ಮಕ್ಕಳು, ಶಿಕ್ಷಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.