ADVERTISEMENT

ಚಿಕ್ಕಮಗಳೂರು | ಬಗರ್ ಹುಕುಂ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 2:54 IST
Last Updated 6 ಫೆಬ್ರುವರಿ 2026, 2:54 IST
ಚಿಕ್ಕಮಗಳೂರಿನಲ್ಲಿ ನಡೆದ ರೈತ ಸಮಾವೇಶದಲ್ಲಿ ಭಾಗವಹಿಸಿರುವ ರೈತರು
ಚಿಕ್ಕಮಗಳೂರಿನಲ್ಲಿ ನಡೆದ ರೈತ ಸಮಾವೇಶದಲ್ಲಿ ಭಾಗವಹಿಸಿರುವ ರೈತರು   

ಚಿಕ್ಕಮಗಳೂರು: ನನೆಗುದಿಗೆ ಬಿದ್ದಿರುವ ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಶಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಗರ್‌ ಹುಕುಂ ಅರ್ಜಿ ಸೇರಿ ಅನೇಕ ಸಮಸ್ಯೆಗಳಿಗೆ ಸರ್ಕಾರ ಕಿವಿಯಾಗುತ್ತಿಲ್ಲ. 19 ಲಕ್ಷ ಬಗರ್ ಹುಕುಂ ಅರ್ಜಿಗಳು ಬಾಕಿ ಇವೆ. ಬಲಾಢ್ಯರಿಗೆ ಸಾವಿರಾರು ಎಕರೆ ಭೂಮಿ ನೀಡುವ ಸರ್ಕಾರ, ಜೀವನ ನಡೆಸಲು ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.

ADVERTISEMENT

1997ರಲ್ಲಿ ಪ್ರೊ.ನಂಜುಂಡಸ್ವಾಮಿ ಅವರ ಹೋರಾಟದ ಫಲವಾಗಿ ಹೆಮ್ಮರವಾಗಿ ಬೆಳೆದಿರುವ ರೈತ ಚಳವಳಿಯಿಂದ ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಿದೆ. ಇತ್ತೀಚಿನ ಸರ್ಕಾರಗಳಿಗೆ ರೈತರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದರು.

ಮಲೆನಾಡು ಭಾಗದಲ್ಲಿ ರೈತರು ಕಾಡಾನೆಗಳ ನಡುವೆ ನರಕ ಸದೃಶ್ಯ ಜೀವನ ನಡೆಸುತ್ತಿದ್ದಾರೆ. ಕಾಡು ಪ್ರಾಣಿಗಳಿಂದ ರೈತ ಮೃತಪಟ್ಟರೆ ₹50 ಲಕ್ಷ ಪರಿಹಾರ ನೀಡಬೇಕು. ಅರಣ್ಯ–ಕಂದಾಯ ಭೂಮಿ, ಬಗರ್‌ ಹುಕುಂ, ನೀರಾವರಿ ಸೇರಿ ಅನೇಕ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ವಸಂತಕುಮಾರ್ ಮಾತನಾಡಿ, ‘ರೈತ ಸಂಘ ಎಲ್ಲ ವರ್ಗ, ಸಮುದಾಯಕ್ಕೂ ಅನ್ವಯಿಸುತ್ತದೆ. ಕೆಲ ರಾಜಕಾರಣಿಗಳು ರೈತ ಚಳವಳಿ ಒಡೆಯಲು ಬಹಳ ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ನಾಡಿನಾದ್ಯಂತ ರೈತರ ಪರವಾಗಿ ಪಾದಯಾತ್ರೆ ನಡೆಸಿದೆ’ ಎಂದು ಹೇಳಿದರು.

ರೈತ ಸಂಘದ ಹಿರಿಯ ಮುಖಂಡ ಕೆ.ಕೆ.ಕೃಷ್ಣೇಗೌಡ ಮಾತನಾಡಿ, ನಾಡಿನ ರೈತರು ಮನಸ್ಸು ಮಾಡಿದರೆ ಸರ್ಕಾರ ಉರುಳಿಸುವ ಶಕ್ತಿ ಹೊಂದಿದ್ದಾರೆ. ರೈತರ ಹಕ್ಕಿಗೆ ಚ್ಯುತಿ ಬಾರದಂತೆ ಎಲ್ಲ ಸರ್ಕಾರಗಳು ನಡೆದುಕೊಳ್ಳಬೇಕು. ರೈತರ ಬೆಳೆಗೆ ಸರಿಯಾದ ಬೆಲೆ ನಿಗದಿಗೊಳಿಸದೆ ಅನ್ನದಾತರ ಸಾವಿಗೆ ಸರ್ಕಾರಗಳೇ ಕಾರಣವಾಗುತ್ತಿವೆ. ರೈತರ ಹೋರಾಟ ಎಂದರೆ ಹುಡಗಾಟದ ವಿಚಾರ ಅಲ್ಲ. ಕಡೆಗಣಿಸಿದರೆ ಮುಂದೆ ಪ್ರತಿಫಲವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ ಐದು ಪ್ರಮುಖ ನದಿಗಳು ಉಗಮವಾಗುತ್ತವೆ. ಆದರೆ, ನಮ್ಮ ಜಿಲ್ಲೆಗೆ ನೀರಾವರಿ ವ್ಯವಸ್ಥೆ ಆಗಿಲ್ಲ. ಕೇವಲ 10 ಟಿಎಂಸಿ ಅಡಿ ನೀರನ್ನು ಕೇಳುತ್ತಿದ್ದೇವೆ. ಹೋರಾಟ ನಿರಂತರವಾಗಿ ನಡೆಯುತ್ತಿದ್ದರೂ ಕೆರೆ ತುಂಬಿಸುವ ಯೋಜನೆಗಳು ಸಾಕಾರವಾಗಿಲ್ಲ’ ಎಂದು ಹೇಳಿದರು.

ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳವನ್ನು ರೈತರು ನಿತ್ಯ ಅನುಸರಿಸುತ್ತಿದ್ದಾರೆ. ಬಡವರ ಪರವಾಗಿ ಸರ್ಕಾರ ಕಾಳಜಿ ವಹಿಸುತ್ತಿಲ್ಲ. 50–60 ವರ್ಷಗಳಿಂದ ಸಾಗುವಳಿ ಮಾಡಿದ್ದರೂ ಭೂಮಿಯ ಹಕ್ಕು ನೀಡುತ್ತಿಲ್ಲ. ಎಲ್ಲಾ ತಕರಾರುಗಳನ್ನು ಬದಿಗಿರಿಸಿ ಕನಿಷ್ಠ 5 ಎಕರೆ ಒಳಗಿನ ಬಡವರಿಗೆ ಭೂಮಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಡಿ.ಮಹೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್, ಮುಖಂಡರಾದ ಬಸವರಾಜು, ಕುಮಾರಸ್ವಾಮಿ, ದೇವರಾಜ್, ಬಸವಣ್ಣ, ರಾಜು, ಜಯರಾಮ್ ಭಾಗವಹಿಸಿದ್ದರು.

ಇದೇ ವೇಳೆ ನಗರದ ಹೊರ ವಲಯದ ಇಂದಾವರ ಗ್ರಾಮಸ್ಥರು ಬಡಗಲಪುರ ನಾಗೇಂದ್ರ ಅವರಿಗೆ ಮನವಿ ಸಲ್ಲಿಸಿ, ‘ಬಡಾವಣೆ ನಿರ್ಮಾಣಕ್ಕೆ ಕೃಷಿ ಭೂಮಿ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಿ ನ್ಯಾಯ ಕೊಡಿಸಬೇಕು’ ಎಂದು ಮನವಿ ಮಾಡಿದರು.

ಬಹಿರಂಗ ಸಭೆಗೂ ಮುನ್ನ ನಗರದ ತಾಲ್ಲೂಕು ಕಚೇರಿ ಆವರಣದಿಂದ ಆಜಾದ್ ಪಾರ್ಕ್‌ ತನಕ ರೈತರು ಮೆರವಣಿಗೆ ನಡೆಸಿದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರಿಗೆ ಇಂದಾವರ ಗ್ರಾಮಸ್ಥರು ಮನವಿ ಸಲ್ಲಿಸಿದರು

17 ಬೇಡಿಕೆ: ಈಡೇರದಿದ್ದರೆ ಹೋರಾಟ ಜಿಲ್ಲೆಯ ರೈತರ ಸಮಸ್ಯೆಗಳ ಪರಿಹಾರ ಸಂಬಂಧ 17 ಬೇಡಿಕೆಗಳನ್ನು ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು. ಜಿಲ್ಲೆಯಲ್ಲಿ ಐದು ನದಿಗಳು ಉಗಮವಾಗುತ್ತವೆ. ಆದರೆ ಒಣ ಬೇಸಾಯ ಮಾಡುವ ರೈತರ ಸ್ಥಿತಿ ಗಂಭೀರವಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಚಿಕ್ಕಮಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟವನ್ನು ರೈತ ಸಂಘ ಮಾಡಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.