ತರೀಕೆರೆ: ‘ಹೋದಿರಾಯನ ಹಳ್ಳ ಪತ ಪರಿವರ್ತನಾ ಯೋಜನೆಗೆ ಅನೇಕ ವಿಘ್ನಗಳು ಎದುರಾದರೂ ಸಹ ಧೃತಿಗೆಡದೆ ಯೋಜನೆಯನ್ನು ಪೂರ್ಣಗೊಳಿಸುವ ಮೂಲಕ ಜಂಬದಹಳ್ಳ ಅಚ್ಚುಕಟ್ಟುದಾರ ನೀರಿನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದು ಶಾಸಕ ಜಿಎಸ್ ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ದುಗ್ಲಾಪುರ ಬಳಿ ಇರುವ ಜಂಬದಹಳ್ಳ ಜಲಾಶಯಕ್ಕೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಜಲಾಶಯದ ಕೋಡಿ ಕಟ್ಟಡವನ್ನು 5 ಅಡಿ ಎತ್ತರಿಸುವ ಬಗ್ಗೆ ರೈತರು ಹಾಗೂ ಸಾರ್ವಜನಿಕರು ಒತ್ತಾಯ ಮಾಡಿದ್ದು, ಈ ಬಗ್ಗೆ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.
ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು. ಫಾರೂಕ್ ಮಾತನಾಡಿದರು.
ಪುರಸಭಾ ಮಾಜಿ ಅಧ್ಯಕ್ಷ ವರ್ಮ ಪ್ರಕಾಶ್ ಮಾತನಾಡಿ, 1985ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈ ಯೋಜನೆ ಪೂರ್ಣಗೊಂಡಿರಲಿಲ್ಲ. ಅನೇಕ ಶಾಸಕರ ಪ್ರಯತ್ನದಿಂದ ಈ ಯೋಜನೆ ಮಂದಗತಿಯಲ್ಲಿ ಸಾಗಿ, ಕೊನೆಗೆ ಶ್ರೀನಿವಾಸ್ ಅವರ ಅವಧಿಯಲ್ಲಿ ಪೂರ್ಣಗೊಂಡು ಸಾವಿರಾರು ರೈತರ ಬದುಕಿಗೆ ಆಸರೆಯಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಎಚ್. ವಿಶ್ವನಾಥ ಮಾತನಾಡಿ, ಜನರ ಜೀವನಾಡಿ ಜಂಬದಹಳ್ಳ ಜಲಾಶಯ ತುಂಬಿರುವುದು ಜನತೆಯಲ್ಲಿ ಸಂತಸ ತಂದಿದೆ ಎಂದರು.
ಸಿದ್ದರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾಪತಿ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಗುರುಮೂರ್ತಿ, ಅಧ್ಯಕ್ಷೆ ಪಾಪತಿ ಮಂಜುನಾಥ್, ಸದಸ್ಯರಾದ ಲೀಲಾಬಾಯಿ, ಅನುಪಮಾ, ವೀರಮಣಿ, ಲಕ್ಕವಳ್ಳಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಶಿವನಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಕಲ್ಲೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರವಿಕುಮಾರ್, ಶಿವ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಉಮಾಪತಿ, ಕೆ.ಟಿ, ರವಿಕುಮಾರ್, ಕಾಂಗ್ರೆಸ್ ಸೇವಾದಳದ ತಾಲ್ಲೂಕು ಅಧ್ಯಕ್ಷ ಟಿ.ಎನ್. ಜಗದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.