ADVERTISEMENT

ಕಾಡಿನೊಳಗೆ ಕೃತಕ ಅರಣ್ಯಕ್ಕೆ ವಿರೋಧ: ಯಂತ್ರಬಳಕೆ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

ಯಂತ್ರ ಬಳಸಿ ಹಣ್ಣಿನ ಗಿಡ ನೆಡಲು ಮುಂದಾಗಿರುವ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:04 IST
Last Updated 13 ಡಿಸೆಂಬರ್ 2025, 4:04 IST
ಬಾಳೆಹೊನ್ನೂರು ಸಮೀಪದ ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ತಾಳು ಕಾಡಲ್ಲಿ ಅರಣ್ಯ ಇಲಾಖೆ ಹಣ್ಣಿನ ಗಿಡ ನಡೆಲು ಮುಂದಾಗಿರುವುದನ್ನು ಸ್ಥಳೀಯರು ವಿರೋದಿಸಿ ಪ್ರತಿಭಟಿಸಿದರು
ಬಾಳೆಹೊನ್ನೂರು ಸಮೀಪದ ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ತಾಳು ಕಾಡಲ್ಲಿ ಅರಣ್ಯ ಇಲಾಖೆ ಹಣ್ಣಿನ ಗಿಡ ನಡೆಲು ಮುಂದಾಗಿರುವುದನ್ನು ಸ್ಥಳೀಯರು ವಿರೋದಿಸಿ ಪ್ರತಿಭಟಿಸಿದರು   

ಬಾಳೆಹೊನ್ನೂರು(ಚಿಕ್ಕಮಗಳೂರು): ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ತಾಳು ಬಳಿ ಗ್ರಾಮಸ್ಥರು, ಜಾನುವಾರುಗಳು, ಹಣ್ಣು, ಹಂಪಲುಗಳಿಂದ ಸಮೃದ್ಧವಾಗಿ ಕೂಡಿದ್ದ ಗುಡ್ಡದ ಕಾಡಲ್ಲಿ ಅರಣ್ಯ ಇಲಾಖೆ ಯಂತ್ರ ಬಳಸಿ ಹೊಂಡ ತೋಡಿ ಹಣ್ಣಿನ ಗಿಡಗಳನ್ನು ನೆಡಲು ಮುಂದಾಗಿದೆ ಎಂದು ಆರೋಪಿಸಿ ಹಾಗಲಗಂಚಿ ಹಾಗೂ ಹುಲ್ತಾಳು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕರ್ನಾಟಕ ಜನಶಕ್ತಿ ಜಿಲ್ಲಾ ಘಟಕದ ಅಧ್ಯಕ್ಷೆ ರಾಧಾ ಹಾಗಲಗಂಚಿ ಮಾತನಾಡಿ, ‘ಮಲೆನಾಡಿನ ಕಾಡಿನಲ್ಲಿ ನೈಸರ್ಗಿಕವಾಗಿ ಮರ– ಗಿಡಗಳು ಬೆಳೆದಿವೆ. ಇದರೊಳಗೆ ಹಣ್ಣಿನ ಗಿಡ ನೆಡುವ ಮೂಲಕ ಕೃತಕ ಅರಣ್ಯ ಸೃಷ್ಟಿಗೆ ಯತ್ನಿಸಲಾಗುತ್ತಿದೆ. ಅದರ ಅವಶ್ಯಕತೆ ಇಲ್ಲ’ ಎಂದರು.

ಅದರಲ್ಲೂ ಜೆಸಿಬಿ ಬಳಸಿ ಆಳದ ಗುಂಡಿಗಳನ್ನು ತೆಗೆಯಲಾಗುತ್ತಿದೆ. ಹೀಗೆ ಮಾಡುವುದರಿಂದ ಪರಿಸರದಲ್ಲಿನ ಔಷಧೀಯ ಸಸ್ಯಗಳು, ಮೇಲ್ಪದರದಲ್ಲಿ ಇರುವ ಲಕ್ಷಾಂತರ ಸೂಕ್ಷ್ಮಾಣುಗಳು ನಾಶವಾಗುತ್ತದೆ. ಈ ಯೋಜನೆ ಮಲೆನಾಡಿಗೆ ಪೂರಕವಾಗಿಲ್ಲ. ತಕ್ಷಣ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಾರೆಮನೆ, ಹುಲ್ತಾಳು, ಹಾಗಲಗಂಚಿಯಲ್ಲಿ 60ಕ್ಕೂ ಹೆಚ್ಚು ಕುಟುಂಬಗಳು ಅನೇಕ ವರ್ಷಗಳಿಂದ ವಾಸಿಸುತ್ತಿವೆ. ಹೇರಳವಾದ ಜೀವ ವೈವಿಧ್ಯತೆ ಇರುವ ಪರಿಸರದಲ್ಲಿ ಅರಣ್ಯ ಇಲಾಖೆ ಯಾವುದೇ ಸೂಚನೆ ನೀಡದೆ ಗುಂಡಿ ತೆಗೆದು ಗಿಡ ನೆಡಲು ಆರಂಭಿಸಿರುವುದು ಗ್ರಾಮಸ್ಥರಿಗೆ ಮಾಡುತ್ತಿರುವ ಅನ್ಯಾಯ ಎಂದರು.

‘ಇಲ್ಲಸಲ್ಲದ ಕಾನೂನಿನ ನೆಪ ಹೇಳಿ ನಿಧಾನವಾಗಿ ಗ್ರಾಮ ವಾಸಿಗಳನ್ನು ಒಕ್ಕಲೆಬ್ಬಿಸುವ ತಂತ್ರ ಇದಾಗಿದೆ. ಆದಿವಾಸಿ ಗಿರಿಜನರು ಈಗಾಗಲೇ ರೋಸಿ ಹೋಗಿದ್ದಾರೆ. ಈ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕಾಡಿನ ಗಿಡಮೂಲಿಕೆ ಸಸ್ಯಗಳು, ಜಾನುವಾರುಗಳು, ಉತ್ಪನ್ನಗಳನ್ನು ಇಲ್ಲಿನ ಜನ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಮೊದಲು ಬೋಳು ಗುಡ್ಡವಿದ್ದಿದ್ದು, ಇದೀಗ ಸಮೃದ್ಧ ಕಾಡಾಗಿದೆ. ನಾವೇ ಅದನ್ನು ಉಳಿಸಿಕೊಂಡು ಬಂದಿದ್ದು, ಅರಣ್ಯ ಇಲಾಖೆ ಮಧ್ಯ ಪ್ರವೇಶಿಸಿ ಜನರಿಗೆ ತೊಂದರೆ ಮಾಡುತ್ತಿದೆ’ ಎಂದು ದೂರಿದರು.

ಗುರುವಾರದಿಂದ ಆರಂಭವಾಗಿದ್ದು, ಶುಕ್ರವಾರ ಮಧ್ಯಾಹ್ನದ ಬಳಿಕ ಮತ್ತೆ ಹಿಟಾಚಿ ಬಳಸಿ ಗುಂಡಿ ತೋಡಲಾಗುತ್ತಿದೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಹುಲ್ತಾಳಿನ ಕೃಪಾ, ಲೀಲಾವತಿ, ಕೃಷ್ಣೇಗೌಡ, ಸುಲೋಚನಾ, ಜನಾರ್ದನ, ಹಾಗಲಗಂಚಿಯ ಭಾಗ್ಯ, ಮನು, ಜೋಗಿಬೈಲು ರವಿ ಪಾಲ್ಗೊಂಡಿದ್ದರು.

ಕಾನೂನು ಕ್ರಮದ ಎಚ್ಚರಿಕೆ

ಪ್ರತಿಭಟನಾ ಸ್ಥಳಕ್ಕೆ ಬಂದ ಶೃಂಗೇರಿ ವಲಯ ಅರಣ್ಯ ಅಧಿಕಾರಿ ಆರ್‌ಎಫ್‌ಒ ಮಧುಕರ್ ಇಲಾಖೆಯ ಕಾರ್ಯಕ್ಕೆ ಅಡ್ಡಿಪಡಿಸಿದರೆ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆ ತೀವ್ರಗೊಳಿಸಿದ ಸ್ಥಳೀಯರು ಯಾವುದೇ ಕಾರಣಕ್ಕೂ ಕಾಡಲ್ಲಿ ಗಿಡ ನೆಡಲು ಅವಕಾಶ ನೀಡುವುದಿಲ್ಲ. ಕಾನೂನಿನ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.