ADVERTISEMENT

ಬಸ್ ನಿಲ್ದಾಣದ ಎದುರು ಸುಸಜ್ಜಿತ ಪಾರ್ಕ್‌ ನಿರ್ಮಾಣ: ರವಿಚಂದ್ರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:30 IST
Last Updated 12 ಜನವರಿ 2026, 6:30 IST
ಬಾಳೆಹೊನ್ನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಬಿ.ಕಣಬೂರು ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಪಾರ್ಕ್‌ನಲ್ಲಿ ಗಾಂಧೀಜಿ ಪುತ್ಥಳಿಯನ್ನು ಕ್ರೇನ್ ಮೂಲಕ ಕೂರಿಸಲಾಯಿತು
ಬಾಳೆಹೊನ್ನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಬಿ.ಕಣಬೂರು ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಪಾರ್ಕ್‌ನಲ್ಲಿ ಗಾಂಧೀಜಿ ಪುತ್ಥಳಿಯನ್ನು ಕ್ರೇನ್ ಮೂಲಕ ಕೂರಿಸಲಾಯಿತು   

ಬಾಳೆಹೊನ್ನೂರು: ರಸ್ತೆ ವಿಸ್ತರಣೆ ಆದ ಮೇಲೆ ಪಟ್ಟಣಕ್ಕೆ ಹೊಸ ಮೆರಗು ಬಂದಿದ್ದು, ಬಸ್ ನಿಲ್ದಾಣದ ಎದುರುಗಡೆ ಜಿಲ್ಲೆಯಲ್ಲೇ ವಿಶಿಷ್ಟವಾದ ಪಾರ್ಕ್‌ ನಿರ್ಮಾಣ ಮಾಡಲಾಗುವುದು ಎಂದು ಬಿ.ಕಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಚಂದ್ರ ತಿಳಿಸಿದರು.

ಪಾರ್ಕ್‌ನಲ್ಲಿ ಗಾಂಧೀಜಿ ಪ್ರತಿಮೆಯನ್ನು ಕೂರಿಸುವ ಕಾಮಗಾರಿ ವೀಕ್ಷಿಸಿ ಮಾಹಿತಿ ನೀಡಿದ ಅವರು, ಈ ಹಿಂದೆ ಅಲ್ಲಿ ಅಂಗಡಿ ಮಾಡಲು ಯೋಜಿಸಲಾಗಿತ್ತು. ನಂತರ ಎಲ್ಲರ ಸಲಹೆಯಂತೆ ವಿಶಿಷ್ಟ ಪಾರ್ಕ್‌ ಮಾಡಲು ಪಂಚಾಯಿತಿ ತೀರ್ಮಾನಿಸಿದೆ. ಪಾರ್ಕ್‌ನ ಒಂದು ಭಾಗದಲ್ಲಿ ರೈತನ ಪ್ರತಿಮೆ ಮತ್ತೊಂದು ಭಾಗದಲ್ಲಿ ಗಾಂಧೀಜಿ ಪ್ರತಿಮೆ ಕೂರಿಸಲಾಗುವುದು. ಇದರ ನಡುವೆ ಸಂಘಟನೆಗಳ ಸಹಕಾರದಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಿಸಿ ‘ಐ ಲವ್ ಬಾಳೆಹೊನ್ನೂರು’ ಎಂಬ ಫಲಕವನ್ನು ಅಳವಡಿಸಿ, ಪಾರ್ಕ್‌ ಒಳಗಡೆಯ ಮೆಟ್ಟಿಲಲ್ಲಿ ಹೂವಿನ ಕುಂಡಗಳನ್ನು ಜೋಡಿಸಿಟ್ಟು ನೋಡುಗರಿಗೆ ಮಲೆನಾಡಿನ ಸಂಸ್ಕೃತಿ ಬಿಂಬಿಸುವಂತೆ ಮಾಡಲಾಗುವುದು. ಕಲಾರಂಗ ಕ್ರೀಡಾಂಗಣದ ಸುತ್ತ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಚೆಂಡು ಹೊರಹೋಗದಂತೆ ನೆಲದ ಭಾಗದಲ್ಲಿ, ಸಣ್ಣ ಕಟ್ಟೆ ನಿರ್ಮಿಸಿ ಮೇಲ್ಭಾಗದಲ್ಲಿ ನೆಟ್ ಅಳವಡಿಸಲಾಗಿದೆ’ ಎಂದರು.

ಪಟ್ಟಣದ ಮುಖ್ಯ ರಸ್ತೆಯ ಎರಡೂ ಬದಿಗಳ ವಾಹನ ನಿಲುಗಡೆ ಪ್ರದೇಶದಲ್ಲಿ ನಿರ್ದಿಷ್ಟವಾಗಿ ವಾಹನಗಳನ್ನು ನಿಲ್ಲಿಸಲು ಮಾರ್ಕಿಂಗ್ ಮಾಡಲು ಉದ್ದೇಶಿಸಿದ್ದು, ₹3 ಲಕ್ಷ ವೆಚ್ಚವಾಗಲಿದೆ. ಪಂಚಾಯಿತಿ ಸಹಕಾರ ನೀಡಿದಲ್ಲಿ ಅದನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುವುದು ಎಂದು ಪಿಎಸೈ ರವೀಶ್ ತಿಳಿಸಿದರು.

ADVERTISEMENT

ಫೆಬ್ರವರಿಯಲ್ಲಿ ಪಂಚಾಯಿತಿ ಅಧಿಕಾರ ಕೊನೆಗೊಳ್ಳಲಿದೆ. ಅಧಿಕಾರಾವಧಿಯನ್ನು ಸರ್ಕಾರ ಮುಂದುವರೆಸಿದಲ್ಲಿ ಮಾರ್ಕಿಂಗ್ ಮಾಡಲು ಅನುದಾನ ನೀಡಲು ಸಭೆಯಲ್ಲಿ ವಿಷಯ ಮಂಡಿಸುತ್ತೇನೆ ಎಂದು ರವಿಚಂದ್ರ ತಿಳಿಸಿದರು.

ಪಿಸಿಎಆರ್‌ಡಿ ಬ್ಯಾಂಕ್ ಉಪಾಧ್ಯಕ್ಷ ಕೌಶಿಕ್ ಪಟೇಲ್ ನೇಮನಹಳ್ಳಿ, ಕಾಂಗ್ರೆಸ್ ಮುಖಂಡ ಕಾರ್ತಿಕ್ ಕಾರಗದ್ದೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.