ಕೊಪ್ಪದ ಮೊರಾರ್ಜಿ ಶಾಲೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ವಿದ್ಯಾರ್ಥಿನಿ ಸಾವಿನ ತನಿಖೆಗೆ ಒತ್ತಾಯಿಸಿ ಹಕ್ಕೊತ್ತಾಯ ಪತ್ರವನ್ನು ಕರ್ನಾಟಕ ವಿದ್ಯಾರ್ಥಿ ಪರಿಷತ್‌ನಿಂದ ಬಾಳೆಹೊನ್ನೂರಿನಲ್ಲಿ ಬಿಡುಗಡೆಗೊಳಿಸಲಾಯಿತು
ಬಾಳೆಹೊನ್ನೂರು: ಕೊಪ್ಪದ ಮೊರಾರ್ಜಿ ಶಾಲೆಯಲ್ಲಿ ನಡೆದ ವಿದ್ಯಾರ್ಥಿನಿ ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ವಿವಿಧ ಜನಪರ ಸಂಘಟನೆಗಳ ಸಹಯೋಗದಲ್ಲಿ ಜುಲೈ 7ರಂದು ಕೊಪ್ಪದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ವಿದ್ಯಾರ್ಥಿ ಪರಿಷತ್ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಜಯೇಂದ್ರ ಉತ್ತಮೇಶ್ವರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿ ಸಾವಿನ ಬಗ್ಗೆ ಹಲವು ಅನುಮಾನ ಮೂಡಿವೆ. ಸರಣಿ ಸಾವು ತಡೆಯುವಲ್ಲಿ ವಿಫಲರಾದ ರಾತ್ರಿ ವೇಳೆ ಕರ್ತವ್ಯ ನಿರತ ಸಿಬ್ಬಂದಿ ಹಾಗೂ ಪ್ರಾಂಶುಪಾಲ ರನ್ನು ಅಮಾನತುಗೊಳಿಸಿ ಉತ್ತಮ ಸಿಬ್ಬಂದಿಯನ್ನು ನೇಮಿಸಬೇಕು. ವಸತಿ ಶಾಲೆಗಳ ಅವ್ಯವಸ್ಥೆಗ ಳನ್ನು ಸರಿಪಡಿಸಬೇಕು. ಮೇಗುಂದಾ ಹೋಬಳಿಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಿಸಲು ₹26 ಕೋಟಿ ಮಂಜೂರಾಗಿದ್ದು, ಅದನ್ನು ನಿಗದಿಪಡಿಸಿದ ಹೋಬಳಿಯಲ್ಲೇ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಸುರೇಶ್ ಗಡಿಕಲ್ ಮಾತನಾಡಿ, ಸೋಮವಾರ ಬೆಳಿಗ್ಗೆ ಕೊಪ್ಪದ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಹೊರಟು ಟೌನ್ ಹಾಲ್ ಬಳಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಜನಶಕ್ತಿ ಸಂಘಟನೆಯೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಆಶೋಕ್ ತಿಳಿಸಿದ್ದಾರೆ.
ಕೆ.ವಿ.ಎಸ್.ಸಂಘಟನೆಯ ಕಾರ್ಯದರ್ಶಿ ಸುಮನ ಉತ್ತಮೇಶ್ವರ, ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಜೀವಿತ್, ಅನಂತಕುಮಾರ್, ಎಚ್.ಎಲ್.ಪುನೀತ್, ಸುರೇಶ್ ಭಾಗವಹಿಸಿದ್ದರು.
ನರಸಿಂಹರಾಜಪುರ: ಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈಚೆಗೆ ಬಾಲಕಿ ಸಾವನ್ನಪ್ಪಿರುವ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಆಗ್ರಹಿಸಿದರು.
ಬಾಲಕಿಯ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಪ್ರಕರಣದ ತನಿಖೆಗೆ ಉನ್ನತ ಮಟ್ಟದ ತಂಡ ರಚಿಸಬೇಕು ಎಂದು ಒತ್ತಾಯಿಸಿದರು.
ವಸತಿ ಶಾಲೆಯ ಪ್ರಮುಖ ಸ್ಥಳಗಳಲ್ಲಿ ಸಿಸಿಟಿ.ವಿ ಕ್ಯಾಮೆರಾ ಅಳವಡಿಸಬೇಕು. ಘಟನೆಗಳು ಪುನರಾವರ್ತನೆಯಾಗದಂತೆ ವಸತಿ ಶಾಲೆಯ ಮೇಲಧಿಕಾರಿಗಳು ಆಗಾಗ ಭೇಟಿ ನೀಡಿ, ಮೇಲ್ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.