ಪೊಲೀಸ್
(ಸಾಂದರ್ಭಿಕ ಚಿತ್ರ)
ಬಾಳೆಹೊನ್ನೂರು: ‘ಪಟ್ಟಣ ಸುತ್ತಮುತ್ತ ಮುಖ್ಯ ರಸ್ತೆಯ ಬದಿಯಲ್ಲಿ ರಾತ್ರಿ ಠಿಕಾಣಿ ಹೂಡುವ ಬೀಡಾಡಿ ದನಗಳು ಅಕ್ರಮ ಗೋ ಸಾಗಾಣಿಕೆ ಜಾಲಕ್ಕೆ ಸಿಲುಕಿ ರಾತ್ರೋರಾತ್ರಿ ಕಟುಕರ ಪಾಲಾಗುತ್ತಿವೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿನ ರೈತರು ಗಂಡು ಕರುಗಳನ್ನು ಬೀದಿಗೆ ಬಿಡುತ್ತಾರೆ. ತಡರಾತ್ರಿ, ಬೆಳಗಿನ ಜಾವ ಐಷಾರಾಮಿ ವಾಹನಗಳಲ್ಲಿ ಬರುವ ಜಾನುವಾರು ಕಳ್ಳರು, ರಸ್ತೆ ಬದಿಯಲ್ಲಿ ಮಲಗಿರುವ ಹಸುಗಳ ಕೈಕಾಲು ಕಟ್ಟಿ, ವಾಹನಕ್ಕೆ ತುಂಬಿಸಿಕೊಂಡು ಪರಾರಿಯಾಗುತ್ತಿ ದ್ದಾರೆ. ಪಟ್ಟಣದ ಸಮೀಪದ ಭದ್ರಾ ಕಾಫಿ ಶಾಫ್, ಬೈರೇಗುಡ್ಡ, ಬಸ್ ನಿಲ್ದಾಣ, ಪೆಟ್ರೋಲ್ ಬಂಕ್ ಸಮೀಪ ಗುಂಪಾಗಿ ರಾತ್ರಿ ಮಲಗುತ್ತಿದ್ದ ಹಸುಗಳಲ್ಲಿ ಇತ್ತೀಚೆಗೆ ಒಂದೂ ಕಾಣಲು ಸಿಗುತ್ತಿಲ್ಲ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇತ್ತೀಚೆಗೆ ಪಟ್ಟಣದ ಪೈ ವಸತಿಗೃಹದ ಸಮೀಪದಲ್ಲಿ ಮಲಗಿದ್ದ ಹಸುಗಳನ್ನು ಕಳ್ಳರು ವಾಹನಕ್ಕೆ ತುಂಬಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
‘ರಾತ್ರಿ ರಸ್ತೆಯಲ್ಲಿ ಮಲಗುವ ಬೀಡಾಡಿ ದನಗಳು ವಾಹನ ಅಪಘಾತದಿಂದ ಸಾಯುವುದನ್ನು ತಪ್ಪಿಸುವ ಉದ್ದೇಶದಿಂದ ದಾನಿಗಳ ನೆರವಿನಿಂದ, ಅವುಗಳ ಕುತ್ತಿಗೆಗೆ ರಿಫ್ಲೆಕ್ಟರ್ ಅಳವಡಿಸಲಾಗಿತ್ತು. ಸುಮಾರು 200ಕ್ಕೂ ಹೆಚ್ಚು ಹಸುಗಳಿಗೆ ಈ ರೀತಿ ರಿಫ್ಲೆಕ್ಟರ್ ಕಟ್ಟಿದ್ದೇವೆ. ಆದರೆ, ಆತಂಕಕಾರಿ ಸಂಗತಿ ಎಂದರೆ, ಈ ಬಾರಿ ರಿಫ್ಲೆಕ್ಟರ್ ಕಟ್ಟಲು ಮುಂದಾದಾಗ, ಕಳೆದ ವರ್ಷ ರಿಫ್ಲೆಕ್ಟರ್ ಕಟ್ಟಿದ ಒಂದೂ ಹಸುವೂ ಕಾಣಸಿಗಲಿಲ್ಲ. ಎಲ್ಲವೂ ಕಟುಕರ ಪಾಲಾಗಿರಬಹುದು’ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಜೆ. ಜೀವನ್ ಅನುಮಾನ ವ್ಯಕ್ತಪಡಿಸಿದರು.
ರಾತ್ರಿ ತಪಾಸಣೆ ಇಲ್ಲ: ಪಟ್ಟಣದಲ್ಲಿ ರಾತ್ರಿ ಜಾನುವಾರು ಕಳ್ಳತನ ಹೆಚ್ಚಿದ್ದರೂ ರೋಟರಿ ವೃತ್ತ, ನರಸಿಂಹರಾಜಪುರ ರಸ್ತೆ, ಜಯಪುರ ರಸ್ತೆಗಳಂತಹ ಸ್ಥಳದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿಲ್ಲ. ಕೊಟ್ಟಿಗೆಹಾರ, ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಮೂಲಕ ಜಾನುವಾರುಗಳನ್ನು ವಾಹನದಲ್ಲಿ ಹೊರ ಜಿಲ್ಲೆಗೆ ಸಾಗಿಸಲಾಗುತ್ತಿದೆ. ಆದರೆ, ಚೆಕ್‌ಪೋಸ್ಟ್‌ನಲ್ಲಿ ಇದುವರೆಗೂ ಜಾನುವಾರು ಕಳ್ಳತನ ಪ್ರಕರಣ ಪತ್ತೆಹಚ್ಚಿದ ಉದಾಹರಣೆ ಇಲ್ಲ ಎಂದು ಸ್ಥಳೀಯರು ದೂರುತ್ತಾರೆ.
‘ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯ ಕಾರ್ಯಕರ್ತರು ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಕಾವಲು ನಿಲ್ಲುತ್ತೇವೆ. ಗೋಕಳ್ಳರನ್ನು ಹಿಡಿದು ನ್ಯಾಯಾಂಗಕ್ಕೆ ಒಪ್ಪಿಸಲು ಕೈ ಜೋಡಿಸುತ್ತೇವೆ. ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾದಲ್ಲಿ ನಾವು ಜವಾಬ್ದಾರರಲ್ಲ’ ಎಂದು ಬಜರಂಗದಳದ ಮುಖಂಡ ಶಶಾಂಕ್ ಗೌಡ ಹೇಳಿದರು.
‘ರೌಡಿಶೀಟ್ ತೆರೆಯಬೇಕು’
‘ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೊಲೀಸರು ಕೂಡ ಆರೋಪಿಗಳೊಂದಿಗೆ ಶಾಮೀಲಾಗಿ, ಕೃತ್ಯದ ಬೆನ್ನು ಹತ್ತುವವರಿಗೆ ನಿಮಗ್ಯಾಕೆ ಈ ಉಸಾಬರಿ ಎನ್ನುತ್ತಿದ್ದಾರೆ. ಈ ದಂಧೆಯಲ್ಲಿ ತೊಡಗಿರುವವರ ವಿರುದ್ಧ ರೌಡಿಶೀಟ್ ತೆರೆಯಬೇಕು’ ಎಂದು ಹೇರೂರು ಗ್ರಾಮ ಕೆಮ್ಮಣ್ಣುವಿನ ಕಾಮಧೇನು ಗೋ ಸೇವಾ ಕೇಂದ್ರದ ನಾಗೇಶ್ ಅಂಗೀರಸ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.