
ಮೂಡಿಗೆರೆ: ಪ್ರತಿ ಕುಟುಂಬವು ನೆಮ್ಮದಿಯಾಗಿರಲು ಆ ಕುಟುಂಬದಲ್ಲಿ ಪ್ರೀತಿ, ಕ್ಷಮೆ ಜೀವಾಳವಾಗುತ್ತದೆ ಎಂದು ಚಿಕ್ಕಮಗಳೂರಿನ ಸಂತ ಜೋಸೆಫರ ಪ್ರಧಾನ ದೇವಾಲಯದ ಧರ್ಮಗುರು ಫಾ.ಆರ್.ಶಾಂತರಾಜ್ ಹೇಳಿದರು.
ತಾಲ್ಲೂಕಿನ ಬಾಳೂರಿನ ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ಸೋಮವಾರ ನಡೆದ ವಾರ್ಷಿಕೋತ್ಸವದಲ್ಲಿ ವಿಶೇಷ ಬಲಿಪೂಜೆ ಅರ್ಪಿಸಿ ಅವರು ಮಾತನಾಡಿದರು.
‘ಯೇಸು ಕ್ರಿಸ್ತ, ಮರಿಯಮ್ಮ ಹಾಗೂ ಜೋಸೆಫರ ಪವಿತ್ರ ಕುಟುಂಬ ನಮ್ಮ ಪ್ರತಿಯೊಂದು ಕುಟುಂಬಕ್ಕೂ ದಾರಿದೀಪವಾಗಿದೆ. ಅವರು ಪ್ರಾರ್ಥನೆ, ತ್ಯಾಗ, ವಿಧೇಯತೆ ಮತ್ತು ಪರಸ್ಪರ ಗೌರವದ ಮೂಲಕ ಕುಟುಂಬ ಜೀವನವನ್ನು ಪಾವನಗೊಳಿಸಿದ್ದಾರೆ. ಇಂದಿನ ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ನಮ್ಮ ಕುಟುಂಬಗಳು ಮತ್ತೆ ಪ್ರಾರ್ಥನಾ ಕೇಂದ್ರಿತವಾಗಬೇಕಾದ ಅಗತ್ಯ ಹೆಚ್ಚಾಗಿದೆ. ಕುಟುಂಬದಲ್ಲಿ ಪ್ರಾರ್ಥನೆ ಇದ್ದರೆ ಶಾಂತಿ, ಪ್ರೀತಿ ಇದ್ದರೆ ಏಕತೆ ವೃದ್ಧಿಸುತ್ತದೆ. ಕುಟುಂಬದ ಸದಸ್ಯರು ಪರಸ್ಪರ ಸಮಯ ನೀಡುತ್ತಾ, ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಪ್ರೀತಿಸಿ ಕ್ಷಮಿಸುವ ಮನಸ್ಸು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಾರ್ಷಿಕೋತ್ಸವದ ಅಂಗವಾಗಿ ಬಾಳೂರು ವೃತ್ತದಿಂದ ಚರ್ಚ್‌ವರೆಗೆ ಕ್ರೈಸ್ತರು ಮೆರವಣಿಗೆ ನಡೆಸಿದರು. ಹಿರೇಬೈಲ್ ಚರ್ಚಿನ ಧರ್ಮಗುರು ಫಾ.ಡೇವಿಡ್ ಪ್ರಕಾಶ್ ಅವರನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು. ಹಬ್ಬದ ಪೂಜೆಯಲ್ಲಿ ಧರ್ಮಗುರುಗಳಾದ ಫಾ.ವಿಲಿಯಂ ಬರ್ನಾರ್ಡ್, ಫಾ.ಸಂತೋಷ್ ಕುಮಾರ್, ಫಾ.ಆದರ್ಶ್, ಫಾ.ಕೀರ್ತಿ ಕಿರಣ್, ಫಾ.ರಾಯಪ್ಪ, ಫಾ.ಅರುಣ್ ಲೋಬೊ, ಫಾ.ಥಾಮಸ್ ಕಲಘಟಗಿ ಹಾಗೂ ಕ್ರೈಸ್ತ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.