ಚಿಕ್ಕಮಗಳೂರು: ‘ನಾನು ಬಿಜೆಪಿ ಅಧ್ಯಕ್ಷನಾಗಿರುವ ಸಂದರ್ಭದಲ್ಲಿ ವೀರಶೈವ– ಲಿಂಗಾಯತ ಸಮಾವೇಶ ನಡೆಸುವುದು ಪಕ್ಷಕ್ಕೆ ಲಾಭ ತರುವುದಿಲ್ಲ. ಅಧಿವೇಶನ ಮುಗಿದ ಕೂಡಲೇ ಎಲ್ಲರ ಜೊತೆ ಮಾತನಾಡುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬಾಳೆಹೊನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲಾ ತಾರ್ಕಿಕ ಅಂತ್ಯಕ್ಕೆ ಬರುವಾಗ ಸಮಾಜದ ಸಮಾವೇಶ ನಡೆಸುವುದು ಸರಿಯಲ್ಲ. ನೀವು ಪ್ರಶ್ನೆ ಕೇಳುತ್ತಿರುವ ಕಾರಣಕ್ಕೆ ಬೂಟಾಟಿಕೆಗೆ ಈ ಮಾತು ಹೇಳುತ್ತಿಲ್ಲ’ ಎಂದರು.
‘ರಂಭಾಪುರಿ ಮಠದ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ರಂಭಾಪುರಿ ಶ್ರೀಗಳು ಎಲ್ಲಾ ಸಮಯದಲ್ಲೂ ಧ್ವನಿ ಎತ್ತಿದ್ದಾರೆ. ವಿಜಯೇಂದ್ರ ಬಗ್ಗೆಯೂ ಶ್ರೀಗಳಿಗೆ ಸಾಕಷ್ಟು ನಿರೀಕ್ಷೆ, ಅಪೇಕ್ಷೆ ಇದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು ಎಂಬ ಸಂದೇಶ ನೀಡಿದ್ದಾರೆ’ ಎಂದರು.
ರನ್ಯಾ ರಾವ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಯಾರದೊ ಬೆಂಬಲ ಇಲ್ಲದೆ ಇಂತಹ ಗಂಭೀರ ಪ್ರಕರಣ ನಡೆಯಲು ಸಾಧ್ಯವೇ ಇಲ್ಲ. ಐಪಿಎಸ್ ಅಧಿಕಾರಿಯ ಮಗಳು ಒಂದೆಡೆಯಾದರೆ ಸಚಿವರ ಸಂಪರ್ಕ ಇತ್ತು ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸೂಕ್ತ ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.