
ಬೀರೂರು: ಬೀರೂರು ಪಟ್ಟಣದ ಗ್ರಾಮದೇವತೆ ಅಂತರಘಟ್ಟಮ್ಮ ದೇವಿಯವರ ರಥೋತ್ಸವಕ್ಕೆ ಪಟ್ಟಣದ ಮನೆ ಮನೆಗಳಲ್ಲಿ ಭರ್ಜರಿ ಸಿದ್ಧತೆ ನಡೆದಿದ್ದು, ಶನಿವಾರದಿಂದಲೂ ಗಣಪತಿ ಪೆಂಡಾಲ್ ಮೈದಾನದಲ್ಲಿ ಕುರಿ, ಟಗರುಗಳ ವ್ಯಾಪಾರವು ಭರ್ಜರಿಯಾಗಿ ಸಾಗಿದೆ.
ಕಡೂರು ತಾಲ್ಲೂಕಿನಾದ್ಯಂತ ‘ಅಮ್ಮನ ಹಬ್ಬ’ವನ್ನು ಜಾತಿ, ಮತ ಹೊರತುಪಡಿಸಿ ಎಲ್ಲ ಪಂಗಡದವರೂ ಆಚರಿಸುವ ಹಬ್ಬವಾಗಿದ್ದು, ಸಸ್ಯಾಹಾರಿಗಳು ಹೋಳಿಗೆ ನೈವೇದ್ಯ ಮಾಡಿ, ಪಾನಕ, ಕೋಸಂಬರಿ ಹಂಚಿ ಹಬ್ಬ ಆಚರಿಸಿದರೆ, ‘ತಿಂದುಣ್ಣುವವರು’ ಕುರಿ, ಟಗರು, ಕೋಳಿ ಬಲಿ ನೀಡಿ, ದೇವಾಲಯಕ್ಕೆ ನೈವೇದ್ಯ ಪಾಲು ಸಮರ್ಪಿಸುವುದು ವಾಡಿಕೆ.
ಬೀರೂರಿನಲ್ಲಿ ಮಾಘ ಮಾಸದ ಹುಣ್ಣಿಮೆಗೆ ಮೊದಲು ಬರುವ ಮಂಗಳವಾರ ರಥೋತ್ಸವ ಆಚರಿಸಿದರೆ, ತಾಲ್ಲೂಕಿನ ಗಡಿಗ್ರಾಮ ದೇವಿಯ ಮೂಲಸ್ಥಾನ ಅಂತರಘಟ್ಟೆಯಲ್ಲಿ ನಂತರದ ಶುಕ್ರವಾರ, ಶನಿವಾರ ಬೆಳಿಗ್ಗೆ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಸಹಸ್ರಾರು ಮಂದಿ ಈ ರಥೋತ್ಸವದಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದು ಪಾಲ್ಗೊಂಡು ಹರಕೆ ತೀರಿಸುವುದು ಅನೂಚಾನವಾಗಿ ನಡೆದು ಬಂದಿದೆ.
ಪಟ್ಟಣದಲ್ಲಿ ಮಂಗಳವಾರ ನಡೆಯುವ ಶ್ರೀಅಂತರಘಟ್ಟಮ್ಮ ದೇವಿ ರಥೋತ್ಸವದ ಪ್ರಯುಕ್ತ ಮನೆಗಳು ಸುಣ್ಣ-ಬಣ್ಣಗಳಿಂದ ಅಲಂಕಾರಗೊಳ್ಳುತ್ತಿದ್ದರೆ, ಹಳೇ ಅಜ್ಜಂಪುರ ರಸ್ತೆ, ಕರಗಲ್ ಬೀದಿಯ ದೇವಾಲಯಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಪಟ್ಟಣದ ಮಹಾತ್ಮಗಾಂಧಿ ವೃತ್ತ, ಅಜ್ಜಂಪುರ ರಸ್ತೆ, ಹಳೇ ಅಜ್ಜಂಪುರ ರಸ್ತೆಗಳಲ್ಲಿ ಶುಭಾಷಯ ಕೋರುವ ಕಟೌಟ್‌ಗಳು ರಾರಾಜಿಸುತ್ತಿವೆ. ಸುಗ್ಗಿಕಾಲ ಮುಗಿದು ರೈತರು ಹಬ್ಬವನ್ನು ವಿಶೇಷವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಬೀರೂರಿನಲ್ಲಿ ನಡೆಯುವ ರಥೋತ್ಸವದಲ್ಲಿ ಎತ್ತಿನಗಾಡಿಗಳನ್ನು ಸಿಂಗರಿಸಿ, ಜೋಡೆತ್ತುಗಳನ್ನು ಹೂಡಿ ರಥದ ಮುಂದೆ ಓಡಿಸುವುದು ಪದ್ಧತಿಯಾಗಿದ್ದರೆ, ಕಡೂರಿನಲ್ಲಿ ಎತ್ತಿನ ಗಾಡಿಗಳ ಮೆರವಣಿಗೆ ನಡೆಯುತ್ತದೆ. ಅಂತರಘಟ್ಟೆಗೆ ನೂರಾರು ಹಳ್ಳಿಗಳಿಂದ ಎತ್ತಿನಗಾಡಿಗಳು ಜಾತ್ರೆಗಾಗಿ ಸಾಗುತ್ತವೆ.
ಬೀರೂರು ಮತ್ತು ಸುತ್ತಮುತ್ತಲ ಯರೇಹಳ್ಳಿ, ಹುಲ್ಲೇಹಳ್ಳಿ, ದೊಡ್ಡಘಟ್ಟ, ಹೋರಿತಿಮ್ಮನಹಳ್ಳಿ, ಜೋಡಿತಿಮ್ಮಾಪುರ, ಇಂಗ್ಲಾರನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಅಲ್ಲದೆ ಚಿತ್ರದುರ್ಗ, ಹೊಸದುರ್ಗ, ಭದ್ರಾವತಿ, ಕಡೂರು, ಸಖರಾಯಪಟ್ಟಣಗಳಿಂದ ಕುರಿ, ಟಗರುಗಳನ್ನು ಸಾಕಿದವರು ವ್ಯಾಪಾರಕ್ಕಾಗಿ ತಂದಿದ್ದರು. ಕನಿಷ್ಠ ₹20 ಸಾವಿರದಿಂದ ₹45 ಸಾವಿರದವರೆಗೆ ಟಗರುಗಳ ಬೆಲೆ ಇದ್ದು ವ್ಯಾಪಾರ ಜೋರಾಗಿಯೇ ನಡೆಯಿತು.
ಮನೆಗಳಲ್ಲಿ ಹೆಣ್ಣುಮಕ್ಕಳು ಅಡಿಕೆ ಸುಲಿದು ತಾವು ಸಂಪಾದಿಸಿದ ಹಣದಲ್ಲಿ ಚಿಕ್ಕಪುಟ್ಟ ಒಡವೆ, ಹೊಸಬಟ್ಟೆ, ಮಕ್ಕಳಿಗೆ ಬಟ್ಟೆ ಖರೀದಿ ನಡೆಸುವ ಜತೆಗೆ ಹಬ್ಬಕ್ಕೆ ಬರುವ ನೆಂಟರಿಷ್ಟರಿಗೆ ಆತಿಥ್ಯ ನೀಡಲು ತಯಾರಿ ನಡೆಸಿದ್ದರೆ, ಪುರುಷರು ಮನೆಯನ್ನು ಸಿಂಗರಿಸುವ, ಸಂಬಂಧಿಕರಿಗೆ ಆಮಂತ್ರಣ ನೀಡುವ, ಎತ್ತು-ಗಾಡಿಗಳನ್ನು ಸಿದ್ಧಗೊಳಿಸುವ ಜತೆಗೆ ಕುರಿ ತರುವ ಅಥವಾ ಪಾಲಿನಲ್ಲಿ ಮಾಂಸವನ್ನು ಹಂಚಿಕೆ ಮಾಡುವ ಬಗ್ಗೆ ವಿಚಾರ ನಡೆಸಿದ್ದರು.
28ಕ್ಕೆ ಓಕಳಿ ಉತ್ಸವ
ಮುಖಾರ್ಚನೆ ಸಂಜೆ ರಥೋತ್ಸವ ದೇವಾಲಯದಲ್ಲಿ (ಶುಕ್ರವಾರದಂದು) ರಥವನ್ನು ಹೊರಕ್ಕೆ ತೆಗೆದು ಪೂಜೆ ಸಲ್ಲಿಸಲಾಗಿದೆ. ಭಾನುವಾರ (ಜ.25) ಧ್ವಜಾರೋಹಣ ಮತ್ತು ತವರು ಮನೆಯಲ್ಲಿ ಕಂಕಣಧಾರಣೆ ನೆರವೇರಿಸಿ ಸೋಮವಾರ (ಜ. 26) ಗಣಂಗಳ ಸೇವೆಯ ನಂತರ ಅಮ್ಮನವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ದುಗ್ಗಳ ಸೇವೆ ಮತ್ತು ಬ್ರಹ್ಮರಥೋತ್ಸವ ಜರುಗಲಿದೆ. ಮಂಗಳವಾರ (ಜ.27) ಬೆಳಿಗ್ಗೆ ದೇವಾಲಯದ ಆವರಣದಲ್ಲಿ ಬೇವಿನ ಸೀರೆ ಸೇವೆ ಹಾಗೂ ರಥೋತ್ಸವ ನಡೆಯಲಿದೆ. ರಥವನ್ನು ಹಳೇಪೇಟೆಯ ಶ್ರೀಆಂಜನೇಯ ಸ್ವಾಮಿ ದೇವಾಲಯದ ಬಳಿ ಸ್ಥಾಪಿಸಿದ ನಂತರ ಪಾನಕದ ಬಂಡಿಗಳ ಓಟದ ಸೇವೆ ನೆರವೇರಲಿದೆ. ಬುಧವಾರ (ಜ.28) ಓಕಳಿ ಉತ್ಸವ ಮುಖಾರ್ಚನೆ ಸಂಜೆ ಪ್ರಮುಖ ಬೀದಿಗಳಲ್ಲಿ ಉತ್ಸವದೊಂದಿಗೆ ರಥೋತ್ಸವ ಮುಕ್ತಾಯಗೊಳ್ಳಲಿದ್ದು ಭಕ್ತರು ಶುಕ್ರವಾರ (ಜ.30) ಅಂತರಘಟ್ಟೆಗೆ ತೆರಳಲು ಸಿದ್ಧತೆ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.