ADVERTISEMENT

ಹಾಸನದಿಂದ ಧರ್ಮಸ್ಥಳದವರೆಗೆ ಕಸದ ಚೀಲಗಳ ಅಳವಡಿಕೆ: ಬೇರುಭೂಮಿ ತಂಡದ ಪರಿಸರ ಕಾಳಜಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 4:55 IST
Last Updated 12 ಫೆಬ್ರುವರಿ 2026, 4:55 IST
ಮೂಡಿಗೆರೆ ತಾಲ್ಲೂಕಿನಲ್ಲಿ ಹಾಸನದ ‘ಬೇರುಭೂಮಿ’ ತಂಡದ‌ ಯುವಕರು ಪಾದಯಾತ್ರಿಗಳಿಗಾಗಿ ಕಸದ‌ಬುಟ್ಟಿ ಅಳವಡಿಸಿರುವುದು
ಮೂಡಿಗೆರೆ ತಾಲ್ಲೂಕಿನಲ್ಲಿ ಹಾಸನದ ‘ಬೇರುಭೂಮಿ’ ತಂಡದ‌ ಯುವಕರು ಪಾದಯಾತ್ರಿಗಳಿಗಾಗಿ ಕಸದ‌ಬುಟ್ಟಿ ಅಳವಡಿಸಿರುವುದು   

ಮೂಡಿಗೆರೆ: ಮಹಾಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರಿಗಳಿಂದ ಪರಿಸರ ಹಾನಿ ತಡೆಯಲು ನಾಲ್ಕು ಯುವಕರ ತಂಡವೊಂದು ಸದ್ದಿಲ್ಲದೇ ಹಗಲಿರುಳು ಶ್ರಮಿಸುತ್ತಿದೆ.

‘ಬೇರು ಭೂಮಿ’ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ತಂಡವು, ಹಾಸನದಿಂದ ಧರ್ಮಸ್ಥಳದವರೆಗೂ ರಸ್ತೆ ಬದಿ ಕಸ‌ ಸಂಗ್ರಹಕ್ಕಾಗಿ ಚೀಲಗಳ ಜೊತೆಗೆ ಪರಿಸರ ಸಂರಕ್ಷಣೆಯ ಜಾಗೃತಿ ಫಲಕಗಳನ್ನು ಅಳವಡಿಸುತ್ತಿದೆ. ಮೂಲತಃ ಹಾಸನದವರಾದ ರಂಜಿತ್, ಪ್ರವೀಣ್, ಸಚ್ಚಿನ್ ಹಾಗೂ ಯಶಸ್ ಅವರು, ಹಾಸನದಿಂದ ಧರ್ಮಸ್ಥಳದವರೆಗೂ ಪಾದಯಾತ್ರೆಯ ಮೂಲಕ ತೆರಳಿ, ಪ್ರತಿ 200 ಮೀ. ದೂರಕ್ಕೆ ಕಸದ ಚೀಲವನ್ನು ಅಳವಡಿಸುತ್ತಿದ್ದು, ಪಾದಯಾತ್ರಿಗಳು ಕಸದ ಚೀಲಕ್ಕೆ ಕಸ ಹಾಕುವಂತೆ ಮನವಿ ಮಾಡುತ್ತಿದ್ದಾರೆ.

‘ನಾವು ನಾಲ್ಕು ವರ್ಷದಿಂದ ಪಾದಯಾತ್ರೆ ಮಾಡುತ್ತಿದ್ದು, ರಸ್ತೆ ಬದಿ ಬೀಳುವ ಪ್ಲಾಸ್ಟಿಕ್ ಕಸ ಪರಿಸರಕ್ಕೆ ಸೇರದಂತೆ ತಡೆಯಬೇಕೆಂಬ ನಿಟ್ಟಿನಲ್ಲಿ ಕಸದ ಚೀಲ ಅಳವಡಿಸುವ ಯೋಜನೆ ಹಾಕಿಕೊಳ್ಳಲಾಯಿತು. 150 ಕಿ.ಮೀ. ದೂರದ ವ್ಯಾಪ್ತಿಗೆ 900 ಕಸದ ಚೀಲದ ಮಾದರಿಗಳನ್ನು ಪಡೆದು, ಅಳವಡಿಸಿದ್ದೇವೆ. ರಸ್ತೆ ಬದಿ ಕಸದ ಚೀಲವಿದ್ದರೂ ಅದಕ್ಕೆ ಹಾಕದೇ, ರಸ್ತೆ ಬದಿಗೆ ಎಸೆಯುವ ಹಲವರಿಗೆ ಜಾಗೃತಿ ಮೂಡಿಸಲಾಗಿದೆ. ಕಸದ ಚೀಲ ಅಳವಡಿಸಿರುವುದರಿಂದ, ಸಂಗ್ರಹವಾಗಿರುವ ಕಸವನ್ನು ವಿಲೇ ಮಾಡಲು ಗ್ರಾಮ ಪಂಚಾಯಿತಿಗಳಿಗೆ ಅನುಕೂಲವಾಗುತ್ತದೆ. ಎರಡು ದಿನಗಳಲ್ಲಿ ಧರ್ಮಸ್ಥಳ ತಲುಪಲಾಗುವುದು. ಶಿವರಾತ್ರಿಯವರೆಗೂ ಅಲ್ಲಿಯೇ ಇದ್ದು, ಶಿವರಾತ್ರಿಯ ಬಳಿಕ ಕಸದ ಚೀಲ ಅಳವಡಿಸಿರುವ ಪ್ರದೇಶದಲ್ಲಿಯೇ ಹಿಂತಿರುಗಿ ಕಸ ಸಂಗ್ರಹ ತೆರವಾಗದಿದ್ದರೆ ನಾವೇ ತೆರವು ಮಾಡುತ್ತೇವೆ’ ಎಂದು ತಂಡದ ರಂಜಿತ್ ಮಾಹಿತಿ ನೀಡಿದರು.

ADVERTISEMENT

‘ಪಶ್ಚಿಮ ಘಟ್ಟದ ಪರಿಸರ ಕಲುಷಿತವಾಗದಂತೆ ತಡೆಯುವುದು ನಮ್ಮೆಲ್ಲರ ಹೊಣೆಯಾಗಿದೆ. ಉಚಿತವಾಗಿ ನೀಡುವ ಪ್ಲಾಸ್ಟಿಕ್ ನೀರಿನ ಬಾಟಲಿ, ಪ್ಲಾಸ್ಟಿಕ್ ಐಸ್ ಕ್ರೀಂ ಕಪ್ ಸೇರಿದಂತೆ ಹಲವು ಬಗೆಯ ಪ್ಲಾಸ್ಟಿಕ್ ತ್ಯಾಜ್ಯಗಳು ಪಾದಯಾತ್ರಿಗಳಿಂದ ಸುಲಭವಾಗಿ ಪರಿಸರವನ್ನು ಸೇರುತ್ತಿವೆ. ಅದನ್ನು ತಡೆಯುವುದು ಅಗತ್ಯ ಕಾರ್ಯವಾಗಿದೆ. ಆದ್ದರಿಂದ ನಮ್ಮ ತಂಡವು ತ್ಯಾಜ್ಯ ಸಂಗ್ರಹಕ್ಕೆ ಮುಂದಾಗಿದ್ದು, ಭವಿಷ್ಯದಲ್ಲಿ ಪ್ರತ್ಯೇಕ ಯೋಜನೆ ರೂಪಿಸಲಾಗುವುದು’ ಎಂದು ಪ್ರವೀಣ್ ಹೇಳಿದರು.

ಪಾದಯಾತ್ರೆಯು ಮಲೆನಾಡನ್ನು ಕಸದ ಕೂಪವನ್ನಾಗಿಸುತ್ತಿದ್ದು, ಸರ್ಕಾರ, ಸಂಘ–ಸಂಸ್ಥೆಗಳು ಜಾಗೃತಿ ಮೂಡಿಸಿದರೂ ರಸ್ತೆ ಬದಿ ಕಸ ಬೀಳುತ್ತಿರುವುದು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಪರಿಸರ ಸಂರಕ್ಷಣೆಗೆ ಬೇರು ಭೂಮಿ ತಂಡವು ಮಾಡುತ್ತಿರುವ ಅಳಿಲು ಸೇವೆಯು ಶ್ಲಾಘನೀಯವಾಗಿದೆ.

ಮೂಡಿಗೆರೆ ತಾಲ್ಲೂಕಿನಲ್ಲಿ ಹಾಸನದ ಬೇರುಭೂಮಿ ತಂಡದ‌ ಯುವಕರು ಪಾದಯಾತ್ರಿಗಳಿಗಾಗಿ ಕಸದ‌ಬುಟ್ಟಿ ಅಳವಡಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.