ADVERTISEMENT

ಸಮಗ್ರ ಕೃಷಿಯಲ್ಲಿ ವನಶ್ರೀ ಖುಷಿ; ‘ಉತ್ತಮ ರೈತ ಮಹಿಳೆ’ ಪ್ರಶಸ್ತಿಯ ಗರಿ

ಅನಿಲ್ ಮೊಂತೆರೊ
Published 17 ನವೆಂಬರ್ 2021, 2:14 IST
Last Updated 17 ನವೆಂಬರ್ 2021, 2:14 IST
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಶುಕ್ರವಾರ ನಡೆದ ಕೃಷಿ ಮೇಳದಲ್ಲಿ ಬಣಕಲ್‍ನ ವನಶ್ರೀ ಲಕ್ಷ್ಮಣ್‍ಗೌಡ ಅವರಿಗೆ ‘ಉತ್ತಮ ರೈತ ಮಹಿಳೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ನಾಯಕ್ ಇದ್ದರು.
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಶುಕ್ರವಾರ ನಡೆದ ಕೃಷಿ ಮೇಳದಲ್ಲಿ ಬಣಕಲ್‍ನ ವನಶ್ರೀ ಲಕ್ಷ್ಮಣ್‍ಗೌಡ ಅವರಿಗೆ ‘ಉತ್ತಮ ರೈತ ಮಹಿಳೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ನಾಯಕ್ ಇದ್ದರು.   

ಕೊಟ್ಟಿಗೆಹಾರ: ‘ಮನಸ್ಸಿದ್ದರೆ ಮಾರ್ಗ’ ಎಂಬುದನ್ನು ಕೃಷಿ ಕ್ಷೇತ್ರಯಲ್ಲಿ ನಿರೂಪಿಸಿದ್ದಾರೆ ಬಣಕಲ್‍ನ ಜಿ.ಆರ್.ವನಶ್ರೀ ಲಕ್ಷ್ಮಣ್‍ಗೌಡ. 20 ವರ್ಷಗಳ ಹಿಂದೆ ಸುಮಾರು 1 ಎಕರೆ ಜಾಗದಲ್ಲಿ ಕೃಷಿ ಪ್ರಯಾಣವನ್ನು ಆರಂಭಿಸಿದ್ದ ಅವರು ಅದನ್ನು 18 ಎಕರೆ ಪ್ರದೇಶಕ್ಕೆ ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಣಕಲ್ ಸಮೀಪ ಅವರ ವಿಶಾಲವಾದ ತೋಟದಲ್ಲಿ ಅಡಿಕೆ, ಕಾಫಿ, ಏಲಕ್ಕಿ, ಕಾಳುಮೆಣಸು, ಅಣಬೆ, ಶುಂಠಿ, ಹಣ್ಣಿನ ಗಿಡ, ತರಕಾರಿಗಳು ನಳನಳಿಸುತ್ತಿವೆ. ಕುಟುಂಬದ ನಿರ್ವಹಣೆ ನಡುವೆ ಕೃಷಿಯತ್ತ ಒಲವು ತೋರಿ ಹಗಲಿರುಳು ಶ್ರಮಿಸಿ ಸಮಗ್ರ ಕೃಷಿ ಮಾಡಿ ಮಹಿಳಾ ಸಬಲೀಕರಣಕ್ಕೆ ಮಾದರಿಯಾಗಿದ್ದಾರೆ.

ದ್ವಿತೀಯ ಪಿಯುಸಿ ಓದಿರುವ ವನಶ್ರೀ ಅವರು 22 ವರ್ಷಗಳ ಹಿಂದೆ ಬ್ಯಾಂಕಿನ ಅಧಿಕಾರಿ ಲಕ್ಷ್ಮಣಗೌಡ ಅವರನ್ನು ವರಿಸಿದ್ದಾರೆ. ಮನೆಯ ಪರಿಸ್ಥಿತಿ ಅವರಲ್ಲಿ ಕೃಷಿಯಲ್ಲಿ ಆಸಕ್ತಿ ಮೂಡುವಂತೆ ಮಾಡಿತು. ಕೃಷಿಯಲ್ಲಿ ಅನುಭವ ಇಲ್ಲದಿದ್ದರೂ ಹಲವು ತಪ್ಪುಗಳಿಂದ ಪಾಠ ಕಲಿತು ಇಂದು ಪ್ರಗತಿಪರ ರೈತ ಮಹಿಳೆಯಾಗಿ ಬೆಳೆದಿದ್ದಾರೆ.

ADVERTISEMENT

ಆರಂಭದಲ್ಲಿ ನಾಲ್ಕು ಎಕರೆ ಜಮೀನನ್ನು ಗೇಣಿಗೆ ಪಡೆದುಕೊಂಡ ವನಶ್ರೀ ಅವರು ಶುಂಠಿ ಬೆಳೆದು ಅದರಿಂದ ಬಂದ ಆದಾಯದಿಂದ ಕೃಷಿ ಭೂಮಿಯನ್ನು ವಿಸ್ತರಿಸಿಕೊಂಡು ಹೋಗಿದ್ದಾರೆ. ಇಂದು ಸುಮಾರು 12 ಎಕರೆ ಜಮೀನಿನಲ್ಲಿ ಕಾಫಿ ಗಿಡಗಳು ಅವರ ಕೈ ಹಿಡಿದಿವೆ. ತನ್ನ ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಲೇ ಇದ್ದಾರೆ.

ಅಡುಗೆ ಮನೆಗೆ ಬೇಕಾದ ಬದನೆ, ಟೊಮೊಟೊ, ಬಸಳೆ ಸೇರಿದಂತೆ ನಾನಾ ತರಕಾರಿಗಳನ್ನು ಅವರು ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ಅಲ್ಲದೆ, ಬಾಳೆಹಣ್ಣು, ಸೀಬೆ, ಅನನಾಸು, ಸಫೋಟಗಳನ್ನು ಬೆಳೆದಿದ್ದಾರೆ. ಹಣ್ಣುಗಳನ್ನು ಮನೆ ಬಳಕೆಗೆ ಮಾತ್ರವಲ್ಲ ಪ್ರಾಣಿ– ಪಕ್ಷಿಗಳಿಗೆ ಆಹಾರವಾಗುವ ಉದ್ದೇಶದಿಂದ ಬೆಳೆದಿದ್ದಾರೆ. ಜತೆಗೆ ನರ್ಸರಿಯನ್ನು ನಿರ್ವಹಿಸುತ್ತಿದ್ದಾರೆ.

ಅಡುಗೆ ಮನೆಗೆ ಸೀಮಿತವಾಗದ ಅವರು ಕೃಷಿ, ವ್ಯವಹಾರದ ಜೊತೆಗೆ ರಾಜ್ಯ ರೈತ ಮಹಿಳಾ ಸಂಘದ ಉಪಾಧ್ಯಕ್ಷೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಆಸಕ್ತ ರೈತ ಮಹಿಳೆಯರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯ ತರಬೇತಿ ನೀಡುವುದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಇವರ
ಸಮಗ್ರ ಕೃಷಿಯನ್ನು ಕಂಡು ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಇವರ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರಾಜ್ಯ ರೈತ ಮಹಿಳಾ ಸಂಘದ ಮೂಲಕ ನೇಪಾಳಕ್ಕೂ ಭೇಟಿ ನೀಡಿರುವ ಅವರು ಅಲ್ಲಿನ ಕೃಷಿಯ ವಿಶೇಷತೆಯ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಮಾತ್ರವಲ್ಲ, ಅಲ್ಲಿನ ಕೆಲವೊಂದು ಪದ್ಧತಿಯನ್ನು ತಮ್ಮ ಕೃಷಿ ಕ್ಷೇತ್ರದಲ್ಲಿ ಅನುಷ್ಠಾನ ಮಾಡಿಕೊಂಡಿದ್ದಾರೆ. ಅವರ ಎಲ್ಲ ಕೆಲಸಕ್ಕೂ ಪತಿ ಹಾಗೂ ಮಕ್ಕಳು ಸಾಥ್‌ ನೀಡುತ್ತಿದ್ದಾರೆ. ಪ್ರತಿ ಭಾನುವಾರ ನಾಲ್ಕು ಮಂದಿಯೂ ಕೃಷಿ ಜಮೀನಿನಲ್ಲೇ ಕಾಲ ಕಳೆಯುತ್ತಾರೆ.

‘ಹಿಂದೆ ಅನ್ನಕ್ಕಾಗಿ ಕೃಷಿ ಮಾಡುತ್ತಿದ್ದೆವು. ಆದರೆ, ಇಂದು ಹಣಕ್ಕಾಗಿ ಕೃಷಿ ಮಾಡುವ ಅನಿವಾರ್ಯತೆ ಇದೆ. ಇದು ಸರಿಯಲ್ಲ ಎನ್ನುವುದು ನನ್ನ ಭಾವನೆ. ಮತ್ತೆ ನಾವು ಅನ್ನಕ್ಕಾಗಿ ಕೃಷಿ ಮಾಡುವ ದಿನ ದೂರವಿಲ್ಲ. ಎಲ್ಲರೂ ಕೃಷಿಯತ್ತ ಒಲವು ಬೆಳೆಸಿಕೊಳ್ಳಬೇಕು. ಕೃಷಿಯು ಲಾಭದಾಯಕ ಮಾತ್ರವಲ್ಲ ಆಸಕ್ತಿಯ ಕ್ಷೇತ್ರವೂ ಹೌದು. ನಾವು ಕೃಷಿಯನ್ನೂ ಕೈಹಿಡಿದರೆ ಅದು ನಮ್ಮ ಕೈ ಹಿಡಿಯುತ್ತದೆ’ ಎಂಬುದು ಅವರ ಅನುಭವದ ಮಾತು.

‘ಪ್ರಶಸ್ತಿ ಇತರರಿಗೆ ಸ್ಫೂರ್ತಿಯಾಗಲಿ’

ವನಶ್ರೀ ಲಕ್ಷ್ಮಣ್‍ಗೌಡ ಅವರು ಕೃಷಿಯಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯವು ಶುಕ್ರವಾರ ಆಯೋಜಿಸಿದ್ದ ಕೃಷಿ ಮೇಳದಲ್ಲಿ ವನಶ್ರೀ ಲಕ್ಷ್ಮಣ್‍ಗೌಡ ಅವರಿಗೆ ‘ಉತ್ತಮ ರೈತ ಮಹಿಳೆ ಪ್ರಶಸ್ತಿ’ ನೀಡಿ ಗೌರವಿಸಿದೆ.

‘ಉತ್ತಮ ರೈತ ಮಹಿಳಾ ಪ್ರಶಸ್ತಿ ಬಂದಿರುವುದು ಅತೀವ ಸಂತಸ ತಂದಿದೆ. ಇದು ನಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಭಾವಿಸುತ್ತೇನೆ. ಬೆಳಿಗ್ಗೆ 9ರಿಂದ ರಾತ್ರಿ ತನಕ ಜಮೀನಿನಲ್ಲಿ ಉತ್ಸಾಹದಿಂದ ದುಡಿಯುತ್ತೇನೆ. ಮೂಡಿಗೆರೆ ಕೆವಿಕೆಯವರು ನನಗೆ ಸಮಗ್ರ ಕೃಷಿ ಮಾಡಲು ಪ್ರೇರಣೆ ನೀಡಿದ್ದಾರೆ. ಈ ಸ್ಮರಣೀಯ ಪ್ರಶಸ್ತಿಯೂ ನನಗೆ ಪ್ರೇರಣೆಯಾಗುವ ಜತೆಗೆ ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸಲು ಸ್ಫೂರ್ತಿಯಾಗಲಿ’ ಎನ್ನುತ್ತಾರೆ ವನಶ್ರೀ ಲಕ್ಷ್ಮಣ್‍ಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.