ADVERTISEMENT

ಕಳಸ | ನಿಲ್ಲದ ಮಳೆ: ಅಡಿಕೆ ಬೆಳೆಗಾರರು ಕಂಗಾಲು

ಅಡಿಕೆ ಗೊನೆ ಕೀಳುವ, ಔಷಧಿ ಸಿಂಪಡಿಸುವ ಗೊಂದಲದಲ್ಲಿ ಬೆಳೆಗಾರ

ರವಿ ಕೆಳಂಗಡಿ
Published 30 ಅಕ್ಟೋಬರ್ 2025, 5:48 IST
Last Updated 30 ಅಕ್ಟೋಬರ್ 2025, 5:48 IST
ಕಳಸದ ಅಡಿಕೆ ತೋಟದ ಮರದ ಬುಡದಲ್ಲಿ ಹಣ್ಣಾದ ಅಡಿಕೆ ಉದುರಿ ಬಿದ್ದಿರುವುದು
ಕಳಸದ ಅಡಿಕೆ ತೋಟದ ಮರದ ಬುಡದಲ್ಲಿ ಹಣ್ಣಾದ ಅಡಿಕೆ ಉದುರಿ ಬಿದ್ದಿರುವುದು   

ಕಳಸ: ಅಡಿಕೆ ಮರದ ಬುಡದಲ್ಲಿ ಉದುರಿ ಬಿದ್ದಿರುವ ಹಣ್ಣಡಿಕೆಯ ರಾಶಿ. ತೋಟದ ಚರಂಡಿಯಲ್ಲಿ ಈಗಲೂ ಹರಿಯುತ್ತಿರುವ ನೀರಿನ ಒರತೆ. ಮಳೆ ನಿಂತರೆ ಕೊನೆ ತೆಗೆಯುವುದೋ ಅಥವಾ ಔಷಧಿ ಸಿಂಪಡಿಸುವುದೋ ಎಂಬ ಗೊಂದಲ. ಇದು ತಾಲ್ಲೂಕಿನ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸದ್ಯದ ಸಮಸ್ಯೆಯ ಚಿತ್ರಣ.

ಸಾಮಾನ್ಯವಾಗಿ ಅಕ್ಟೋಬರ್ ಮೊದಲ ವಾರ ಮಳೆ ನಿಂತು ಅಡಿಕೆ ಕೊಯ್ಲಿನ ಸಡಗರ ಆರಂಭ ಆಗುತ್ತಿತ್ತು. ವಿಜಯದಶಮಿಗೆ ಕೊನೆ ಮುಹೂರ್ತ ನಡೆಯುವುದು ವಾಡಿಕೆ. ಆದರೆ, ಈಗ ದೀಪಾವಳಿ ಕಳೆದರೂ ಮರ ಹತ್ತಿ ಕೊನೆ ತೆಗೆಯುವ ಸ್ಥಿತಿ ಇಲ್ಲದಿರುವುದು ಬೆಳೆಗಾರರನ್ನು ಕಂಗಾಲು ಮಾಡಿದೆ.

ಕಳಸದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಈಗಾಗಲೇ 35 ಸೆಂ.ಮೀ ಮಳೆ ಆಗಿದೆ. ಇದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚುತ್ತಿದೆ. ಆಗಾಗ ಏರುವ ತಾಪಮಾನ ಮತ್ತು ಹೆಚ್ಚಿದ ಆರ್ದ್ರತೆ ಅಡಿಕೆಗೆ ಕೊಳೆ ರೋಗವನ್ನು ಬಾಧಿಸಬಹುದೇ ಎಂಬ ಭೀತಿ ಮೂಡಿಸುತ್ತಿದೆ.

ADVERTISEMENT

‘ಈಗಾಗಲೇ ಅಡಿಕೆಗೆ 4 ಸುತ್ತು ಔಷಧಿ ಸಿಂಪಡಣೆ ಮಾಡಿದ್ದೇವೆ. ಮಳೆ ಮುಂದುವರಿದರೆ ಇನ್ನೊಂದು ಸುತ್ತಿನ ಔಷಧಿ ಸಿಂಪಡಣೆ ಮಾಡಬೇಕೇ ಎಂಬ ಗೊಂದಲ ಇದೆ’ ಎಂದು ನೆಲ್ಲಿಬೀಡಿನ ಕೃಷಿಕ ಜಗದೀಶ್ ಬೇಸರದಿಂದ ಹೇಳುತ್ತಾರೆ.

ಹಸಿ ಅಡಿಕೆಗೆ ಕೆ.ಜಿ.ಗೆ ₹ 75 ಗರಿಷ್ಠ ಧಾರಣೆ ಸಿಗುತ್ತಿದೆ. ಆದರೆ, ಮರ ಏರಿ ಅಡಕೆ ಗೊನೆ ತೆಗೆಯಲು ಅವಕಾಶ ನೀಡುತ್ತಿಲ್ಲ ಎಂಬ ನೋವು ಬೆಳೆಗಾರರದ್ದಾಗಿದೆ. ‘ಈ ವರ್ಷ ಏಪ್ರಿಲ್‍ನಿಂದ ಇದುವರೆಗೆ 160 ದಿನ ಮಳೆ ಸುರಿದಿದೆ. ಹವಾಮಾನ ಇದೇ ರೀತಿ ಬದಲಾಗುತ್ತಾ ಹೋದರೆ ತೋಟಕ್ಕೆ ಭವಿಷ್ಯ ಇಲ್ಲ’ ಎಂದು ಸಂಸೆ ಗ್ರಾಮದ ಉಪ್ಪಿನಗದ್ದೆಯ ಸಣ್ಣ ಕೃಷಿಕ ಶ್ರೇಯಾಂಶ ಕುಮಾರ್ ನೋವಿನಿಂದ ಹೇಳುತ್ತಾರೆ.

ಅಕ್ಟೋಬರ್ ತಿಂಗಳಲ್ಲಿ ಮುಂದುವರಿದ ಮಳೆಯು ಈಗಾಗಲೇ ವ್ಯಾಪಿಸುತ್ತಿರುವ ಎಲೆ ಚುಕ್ಕಿ ರೋಗ ಇನ್ನಷ್ಟು ಹರಡಲು ಪೂರಕ ವಾತಾವರಣ ಕಲ್ಪಿಸುತ್ತಿದೆ. ಎಲೆಚುಕ್ಕಿ ರೋಗದಿಂದ ಈಗಾಗಲೇ ಎಳನೀರು, ಗಾಳಿಗಂಡಿ, ಸಂಸೆ ಪ್ರದೇಶದಲ್ಲಿ ತೋಟಗಳು ನಾಶವಾಗುತ್ತಿದೆ. ಈಗಿನ ಹವಾಮಾನ ರೋಗವನ್ನು ಇನ್ನಷ್ಟು ಪ್ರದೇಶಕ್ಕೆ ಹರಡುತ್ತದೆಯೇ ಎಂಬ ಭಯ ಇದೆ.

ಎಲೆಚುಕ್ಕಿ ರೋಗಕ್ಕೂ ಇನ್ನೊಂದು ಸುತ್ತಿನ ಔಷಧಿ ಸಿಂಪಡಣೆ ಮಾಡಬೇಕಾಗುತ್ತದೆ ಎಂಬ ಅಂಶ ಬೆಳೆಗಾರರನ್ನು ಕಂಗೆಡಿಸಿದೆ. ದುಬಾರಿ ಔಷಧಿ ಖರೀದಿಸುವ ಅನಿವಾರ್ಯತೆ ಮತ್ತು ನುರಿತ ಕೂಲಿಯಾಳುಗಳ ಸಮಸ್ಯೆ ಇದ್ದೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.