
ಕಡೂರು: ಬರದಸೀಮೆ ಎಂಬ ಹಣೆಪಟ್ಟಿ ಹೊಂದಿದ್ದ ಕಡೂರು ಪಟ್ಟಣ ಇತ್ತೀಚಿನ ದಿನಗಳಲ್ಲಿ ಭದ್ರಾ ನದಿಯ ನೆರವಿನಿಂದ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಯಶಸ್ಸು ಕಂಡಿದ್ದು, ಇದಕ್ಕೆ ಪೂರಕವಾಗಿ ವೇದಾ ನದಿ ಮತ್ತು ಕೊಳವೆ ಬಾವಿಗಳೂ ಜನರ ದಾಹ ತಣಿಸುವಲ್ಲಿ ನಿರತವಾಗಿವೆ.
ದಿವಂಗತ ಕೆ.ಎಂ. ಕೃಷ್ಣಮೂರ್ತಿ ಅವರ ಕನಸಿನಂತೆ 15 ವರ್ಷಗಳ ಹಿಂದಿನಿಂದಲೂ ಭದ್ರಾ ನೀರು ಪೂರೈಕೆಯಾಗುತ್ತಿದೆ. ಕಡೂರು, ಬೀರೂರು ಪಟ್ಟಣಗಳು ಮತ್ತು ಮಧ್ಯೆಯಲ್ಲಿ ಬರುವ 34 ಹಳ್ಳಿಗಳಿಗೆ ಈ ಯೋಜನೆಯಿಂದ ನೀರು ಪೂರೈಕೆಯಾಗಬೇಕು. ಆದರೆ, ಹಳ್ಳಿಗಳನ್ನು ಹೊರತುಪಡಿಸಿ ಕಡೂರು-ಬೀರೂರು ಪಟ್ಟಣಗಳಿಗೆ ನೀರು ಪೂರೈಕೆ ಆಗುತ್ತಿದೆ. ಇದಕ್ಕಾಗಿ ಲಕ್ಕವಳ್ಳಿ ಬಳಿಯ ಹಳಿಯೂರಿನಲ್ಲಿ ಜಲ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ.
ಕಡೂರು ಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು, ಬಹುತೇಕ ಜನವಸತಿ ಪ್ರದೇಶಗಳಲ್ಲಿ ಭದ್ರಾ ನೀರು ಪೂರೈಕೆಯಾಗುತ್ತಿದೆ. ತಾಂತ್ರಿಕ ಸಮಸ್ಯೆಗಳು, ಪೈಪ್‌ಲೈನ್ ದೋಷ, ಯಂತ್ರಗಳು ಹಾಳಾದರೆ ಅನಿವಾರ್ಯ ಸಂದರ್ಭದಲ್ಲಿ ಎಲ್ಲ ವಾರ್ಡ್‌ಗಳಲ್ಲಿಯೂ ಕೊಳವೆ ಬಾವಿಗಳ ಸಂಪರ್ಕವಿದೆ. ಕೆಲವೊಂದು ಜನವಸತಿ ಪ್ರದೇಶದ ಕಡೆಯ ಹಂತದ ಬೆರಳೆಣಿಕೆ ಮನೆಗಳಿಗೆ ಭದ್ರಾ ನೀರು ಪೂರೈಕೆ ಆಗುತ್ತಿಲ್ಲ. ಆದರೆ, ಕೊಳವೆಬಾವಿ ನೀರು ಪೂರೈಕೆ ಆಗುತ್ತಿದೆ.
ಸರ್ಕಾರದ ನಿರ್ದೇಶನದಂತೆ ಕಳೆದ ವರ್ಷದ ಪುರಸಭೆಯ ನಿಧಿಯಲ್ಲಿ ಇದೇ ವಾರದಲ್ಲಿ ಪಟ್ಟಣದ 1, 2, 8, 9ನೇ ವಾರ್ಡ್‌ಗಳಲ್ಲಿ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಿದ್ದು, ಉತ್ತಮ ನೀರು ಲಭಿಸಿದೆ. ಭದ್ರಾ ನೀರು ಸಂಗ್ರಹಣೆಗೆ ಸಂಬಂಧಿಸಿದಂತೆ 7 ಓವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿದ್ದು, ಪೈಪ್‌ಲೈನ್ ಮೂಲಕ ಹರಿಸುವ ನೀರನ್ನು ಅಲ್ಲಿ ಸಂಗ್ರಹಿಸಿ, ನಂತರ ವಾರ್ಡ್‌ಗಳಿಗೆ ಪೂರೈಸಲಾಗುತ್ತಿದೆ ಎನ್ನುತ್ತವೆ ಪುರಸಭೆ ಮೂಲಗಳು.
ಭದ್ರಾ ನದಿ ಮತ್ತು ಕೊಳವೆ ಬಾವಿಗಳನ್ನು ಹೊರತುಪಡಿಸಿ ವೇದಾ ನದಿಯೂ ಕಡೂರು ಪಟ್ಟಣದ ಕುಡಿಯುವ ನೀರಿನ ದಾಹ ತಣಿಸುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ. ಮಳೆಗಾಲದಲ್ಲಿ ಚಿಕ್ಕಮಗಳೂರು, ಸಖರಾಯಪಟ್ಟಣ ಭಾಗಗಳಲ್ಲಿ ಉತ್ತಮ ಮಳೆಯಾದರೆ ತುಂಬಿ ಹರಿಯುವ ವೇದಾ ಹಳ್ಳದ ಮೂಲಕ ಆಗಸ್ಟ್‌ನಿಂದ ನವೆಂಬರ್ ತನಕ ಕುಡಿಯುವ ನೀರು ಪೂರೈಸಲು ಪುರಸಭೆ ವ್ಯವಸ್ಥೆ ಮಾಡಿದೆ. ಹೆದ್ದಾರಿ 206ರ ಬಳಿ ಅರಸೀಕೆರೆ ಕಡೆ ತೆರಳುವ ರಸ್ತೆಯಲ್ಲಿರುವ ವೇದಾ ಪಾರ್ಕ್ ಬಳಿಯಲ್ಲಿಯೇ ಜಲ ಶುದ್ಧೀಕರಣ ಘಟಕ ಸ್ಥಾಪಿಸಿದ್ದು, ಪಟ್ಟಣವನ್ನು ನೀರಿನ ಸಮಸ್ಯೆ ಕಾಡದಂತೆ ಕಾರ್ಯನಿರ್ವಹಿಸಲಾಗುತ್ತಿದೆ.
‘ಕಡೂರು ಪಟ್ಟಣಕ್ಕೆ ಭದ್ರಾ ಕುಡಿಯುವ ನೀರು ಪೂರೈಕೆಯ ದೋಷಗಳ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಬಿಳಿಯಾನೆಯಾಗಿ ಪರಿಣಮಿಸಬಹುದು. ಇದಕ್ಕೆ ಪರ್ಯಾಯವಾಗಿ ಭದ್ರಾ ಉಪಕಣಿವೆಯ ಕೆರೆ ತುಂಬಿಸುವ ಯೋಜನೆಯಲ್ಲಿ ಕಡೂರಿಗೆ ಸಮೀಪ ಇರುವ ಮದಗದ ಕೆರೆಯ ಮೂಲಕ ವೇದಾ ಪಂಪ್‌ಹೌಸ್‌ಗೆ ಸಂಪರ್ಕ ಕಲ್ಪಿಸಿ ದಿನದ 24 ಗಂಟೆ ನಿರಂತರ ಹಾಗೂ ಶಾಶ್ವತ ನೀರಿನ ಮೂಲ ರೂಪಿಸಲು ಯೋಜನೆ ರೂಪಿಸಿದ್ದೆವು. ಇದನ್ನು ಶಾಸಕರ ಗಮನಕ್ಕೂ ತಂದಿದ್ದು, ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಿರೀಕ್ಷೆಗೂ ಮೀರಿ ಹಿಗ್ಗುತ್ತಿರುವ ಪಟ್ಟಣವನ್ನು ಗಮನದಲ್ಲಿ ಇರಿಸಿಕೊಂಡು ಕುಡಿಯುವ ನೀರು ಪೂರೈಕೆಗೆ ಯೋಜನೆ ರೂಪಿಸಬೇಕಿದೆ’ ಎಂದು ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಅಮೃತ್ ಯೋಜನೆ: ಕಾಯಬೇಕು
ಇನ್ನೂ ವರ್ಷ ಕಡೂರು ಪಟ್ಟಣದಲ್ಲಿ ಅಮೃತ್ 2.0 ಯೋಜನೆ ಕೂಡ ಅನುಷ್ಠಾನಗೊಳ್ಳುತ್ತಿದೆ. ಇದರಲ್ಲಿ ಈಗಾಗಲೇ ಪಟ್ಟಣದ ಬಹುತೇಕ ಭಾಗಗಳಲ್ಲಿ ಪೈಪ್‌ಲೈನ್ ಅಳವಡಿಕೆ ಕಾರ್ಯ ಮುಕ್ತಾಯಗೊಂಡಿದೆ. ಆದರೆ 2024ರ ಮಾರ್ಚ್‌ನಲ್ಲಿ ಪ್ರಾರಂಭವಾಗಬೇಕಿದ್ದ ಯೋಜನೆಯ ಕಾಮಗಾರಿ 2025ರ ಫೆಬ್ರುವರಿಯಲ್ಲಿ ಬಹುತೇಕ 1 ವರ್ಷ ವಿಳಂಬವಾಗಿ ಆರಂಭಗೊಂಡಿದೆ. 2026ರ ಜೂನ್ ವೇಳೆಗೆ ಮುಗಿಯಬೇಕಿದ್ದ ಕೆಲಸಗಳು 2027ರ ಹೊತ್ತಿಗೆ ಮುಗಿಯಬಹುದು ಎನ್ನುವುದು ಪುರಸಭೆಯ ಅಧಿಕಾರಿಗಳ ಅಭಿಪ್ರಾಯ. ಶೇ 60ರಷ್ಟು ಮನೆಗಳಿಗೆ ಈಗಾಗಲೇ ಸಂಪರ್ಕ ಒದಗಿಸಿದ್ದು ಮೀಟರ್ ಅಳವಡಿಕೆ ನೀರು ಪೂರೈಕೆ ಬಾಕಿ ಇದೆ. ವಾರ್ಡ್ 12 ಮತ್ತು 13ರಲ್ಲಿ ಮೀಟರ್ ಅಳವಡಿಕೆ ಕಾರ್ಯವೂ ಮುಗಿದಿದೆ. ಇದರಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ಅನುದಾನ ಒದಗಿಸಿದರೆ ಪುರಸಭೆಯು ಬಹುತೇಕ ಶೇ 15ರಷ್ಟು ವೆಚ್ಚ ಭರಿಸಬೇಕಿದೆ. ಅಮೃತ್ ಯೋಜನೆಯಲ್ಲಿ ಕಡೂರು ಹೊಸಳ್ಳಿ ಬಳಿ 15 ಲಕ್ಷ ಲೀಟರ್ ಸಾಮರ್ಥ್ಯದ ಒವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಈ ಯೋಜನೆಗೂ ಭದ್ರಾ ನದಿಯ ನೀರೇ ಆಸರೆ. ಅಮೃತ್ 2.0 ಯೋಜನೆ ಜಾರಿಯಾದರೆ ನೀರಿನ ಸೋರಿಕೆ ಕಂದಾಯದ ಕೊರತೆ ಅನಧಿಕೃತ ಸಂಪರ್ಕಗಳ ಹಾವಳಿಗೆ ಕಡಿವಾಣ ಬೀಳಲಿದೆ. ಎಲ್ಲ ಮನೆಗಳಿಗೂ ನೀರು ಪೂರೈಸಲು ನೆರವಾಗಲಿದೆ. ಜತೆಗೆ ಪುರಸಭೆಯ ಆದಾಯ ಕೂಡ ಗಣನೀಯ ಏರಿಕೆಯಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಪುರಸಭೆಯ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.