ADVERTISEMENT

ಆತ್ಮವಿಶ್ವಾಸದಿಂದ ಪರಿಶ್ರಮಪಟ್ಟರೆ ಯಶಸ್ಸು ಖಚಿತ: ಎಚ್.ಸಂತೋಷ್

ಯುಪಿಎಸ್‍ಸಿ 751ನೇ ರ್‍ಯಾಂಕ್

ಎನ್‌.ಸೋಮಶೇಖರ
Published 28 ಸೆಪ್ಟೆಂಬರ್ 2021, 3:58 IST
Last Updated 28 ಸೆಪ್ಟೆಂಬರ್ 2021, 3:58 IST
ಎಚ್.ಸಂತೋಷ್
ಎಚ್.ಸಂತೋಷ್   

ಬೀರೂರು: ‘ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಆತ್ಮವಿಶ್ವಾಸದಿಂದ ಪರಿಶ್ರಮಪಟ್ಟರೆ ಯಶಸ್ಸು ಖಚಿತ’ ಎನ್ನುತ್ತಾರೆ ಈ ಬಾರಿಯ ಯುಪಿಎಸ್‍ಸಿ ಪರೀಕ್ಷೆಗಳಲ್ಲಿ 751ನೇ ರ್‍ಯಾಂಕ್ ಗಳಿಸಿರುವ ಬೀರೂರಿನ ಎಚ್.ಸಂತೋಷ್.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನಾವು ಮಾಡುವ ಕೆಲಸವನ್ನು ಸತತ ಪ್ರಯತ್ನ ಮತ್ತು ಗುರಿ ಸೇರುವ ಅಚಲ ಧ್ಯೇಯದೊಂದಿಗೆ ಅನುಷ್ಠಾನಗೊಳಿಸಲು ಮುಂದಾದಾಗ ಅದರ ಫಲ ನಮ್ಮನ್ನು ಯಶಸ್ಸಿನ ಹಾದಿಗೆ ಕೊಂಡೊಯ್ಯುತ್ತದೆ. ಯಾವುದೇ ಗುರಿ ಇರಲಿ, ಛಲ ಮತ್ತು ವಿಶ್ವಾಸದಿಂದ ಗೆಲುವು ಸಾಧಿಸಬೇಕು’ ಎನ್ನುವುದು ಅವರ ನಿಲುವು.

ಹನುಮಂತಪ್ಪ ಮತ್ತು ಗೀತಾ ದಂಪತಿಯ ಪುತ್ರ ಸಂತೋಷ್ ಐಎಎಸ್ ಅಧಿಕಾರಿಯಾಗುವ ಕನಸು ಕಂಡವರು. ತಾಯಿಯ ತವರು ಅಜ್ಜಂಪುರ ಸಮೀಪದ ಮುದಿಗೆರೆಯಲ್ಲಿ ಪ್ರಾಥಮಿಕ, ಅಜ್ಜಂಪುರದಲ್ಲಿ ಪ್ರೌಢಶಿಕ್ಷಣ ಪಡೆದು ಚಿಕ್ಕಮಗಳೂರಿನಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಪಡೆದ ನಂತರ ಬೆಂಗಳೂರು ಸೇರಿದ ಅವರು, ದೂರಶಿಕ್ಷಣದಲ್ಲಿ ಬಿ.ಎ ವ್ಯಾಸಂಗ ಮುಗಿಸಿದ್ದರು. ಬೆಂಗಳೂರಿನಲ್ಲಿ ಸಹೋದರಿಯ ಮನೆಯಲ್ಲಿಯೇ ಉಳಿದು ತಮ್ಮ ಐಎಎಸ್ ಕನಸಿಗೆ ನೀರೆರೆಯುವ ಜತೆಗೆ ಬ್ಯಾಂಕಿಂಗ್ ಪರೀಕ್ಷೆ ಬರೆದು ಎಸ್‍ಬಿಐನಲ್ಲಿ ಕೆಲಕಾಲ ಕರ್ತವ್ಯ ನಿರ್ವಹಿಸಿದ್ದರು.

ADVERTISEMENT

ಮೆಕ್ಯಾನಿಕಲ್ ಡಿಪ್ಲೊಮಾ ಅನುಭವದ ಆಧಾರದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಅವರನ್ನು ಪದೇ ಪದೇ ಕಾಡುತ್ತಿದ್ದ ಐಎಎಸ್ ಸಾಧನೆಯ ಹಂಬಲ ಡಿಆರ್‌ಡಿಒ ಕೆಲಸಕ್ಕೂ ರಾಜೀನಾಮೆ ಸಲ್ಲಿಸಿ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ನಡೆಸಲು ಕರೆದೊಯ್ಯಿತು.

ದಿನಕ್ಕೆ ಕನಿಷ್ಠ 8 ಗಂಟೆಯ ಓದಿನ ಗುರಿಯೊಂದಿಗೆ ಅಭ್ಯಾಸ ಮುಂದುವರಿಸಿದ ಸಂತೋಷ್ ಐಎಎಸ್ ಪರೀಕ್ಷೆಗಳಲ್ಲಿ ಆಯ್ದುಕೊಂಡದ್ದು ಕನ್ನಡ ಸಾಹಿತ್ಯ ವಿಷಯ. ನಿರಂತರ ಓದಿಗಾಗಿ ಪ್ರಶಾಂತ ತಾಣ ಅರಸಿದವರಿಗೆ ನೆರವಾದದ್ದು ಗ್ರಂಥಾಲಯಗಳು. ಮೊದಲ ಪ್ರಯತ್ನದಲ್ಲಿ ಪ್ರಾಥಮಿಕ ಹಂತದಲ್ಲಿ ಹೊರಬಿದ್ದ ಅವರಿಗೆ ಮೂರನೇ ಯತ್ನದಲ್ಲಿ 753ನೇ ರ‍್ಯಾಂಕ್ ದೊರೆತರೂ ಅದು ಸಾಲದು ಎಂದು ಮತ್ತೆ ಪರೀಕ್ಷೆ ಬರೆದವರಿಗೆ ಈ ಬಾರಿ 751ನೇ ರ್‍ಯಾಂಕ್ ಒಲಿದಿದೆ. ಇದು ಅವರ ನಿರೀಕ್ಷೆಯ ಫಲಿತಾಂಶ ಅಲ್ಲ ಎನ್ನುವ ಅಸಮಾಧಾನ ಅವರನ್ನು ಕಾಡುತ್ತಿದೆ.

‘ನನ್ನ ಯಶಸ್ಸಿನಲ್ಲಿ ಇನ್‍ಸೈಟ್ ಅಕಾಡೆಮಿಯ ಪಾತ್ರವನ್ನು ಮರೆಯುವಂತಿಲ್ಲ. ಬೆಂಬಲವಾಗಿ ನಿಂತ ಸಹೋದರಿಯ ಕುಟುಂಬ ಹಾಗೂ ಪೋಷಕರಿಗೂ ಅದರ ಪಾಲು ಸಲ್ಲುತ್ತದೆ. ಕಂದಾಯ ಅಥವಾ ಅರಣ್ಯ ಇಲಾಖೆಯ ಅವಕಾಶದ ನಿರೀಕ್ಷೆ ಇದೆ. ಐಎಎಸ್ ಅಥವಾ ವಿದೇಶಾಂಗ ಇಲಾಖೆಯ ಹುದ್ದೆ ದೊರೆತರೆ ಮತ್ತೆ ಪರೀಕ್ಷೆ ಬರೆಯುವಂತಿಲ್ಲ. ಇನ್ನುಳಿದ ಯಾವುದೇ ವಿಭಾಗ ಸೇರಿದರೂ ಮತ್ತೆ ಪರೀಕ್ಷೆ ಬರೆಯುವ ಅವಕಾಶ ಮತ್ತು ಉದ್ದೇಶವಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.