ADVERTISEMENT

‘ಮಹಿಳೆಯರಿಂದಲೇ ಸಂಸ್ಕೃತಿಯ ಉಳಿವು’

ಹಿಂದೂ ಸಮಾಜೋತ್ಸವದ ಪ್ರಯುಕ್ತ ಮಹಿಳೆಯರ ಬೈಕ್‌ ಜಾಥಾಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:22 IST
Last Updated 24 ಜನವರಿ 2026, 7:22 IST
ಬೀರೂರು ಪಟ್ಟಣದಲ್ಲಿ ಶುಕ್ರವಾರ ಸಂಜೆ ಹಿಂದೂ ಸಮಾಜೋತ್ಸವದ ಪ್ರಯುಕ್ತ ನಡೆದ ಮಹಿಳೆಯರ ಬೈಕ್‌ ಜಾಥಾಕ್ಕೆ ರಂಭಾಪುರಿ ಖಾಸಾ ಶಾಖಾಮಠದ ಎದುರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಬೆಳ್ಳಿಪ್ರಕಾಶ್‌ ಭಾಗವಹಿಸಿದ್ದರು
ಬೀರೂರು ಪಟ್ಟಣದಲ್ಲಿ ಶುಕ್ರವಾರ ಸಂಜೆ ಹಿಂದೂ ಸಮಾಜೋತ್ಸವದ ಪ್ರಯುಕ್ತ ನಡೆದ ಮಹಿಳೆಯರ ಬೈಕ್‌ ಜಾಥಾಕ್ಕೆ ರಂಭಾಪುರಿ ಖಾಸಾ ಶಾಖಾಮಠದ ಎದುರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಬೆಳ್ಳಿಪ್ರಕಾಶ್‌ ಭಾಗವಹಿಸಿದ್ದರು   

ಬೀರೂರು(ಕಡೂರು): ‘ಭಾರತೀಯ ಸಂಸ್ಕೃತಿ ಉಳಿಸಲು ಮಹಿಳೆಯರಿಂದ ಸಾಧ್ಯವಿದ್ದು, ಮನೆಯಲ್ಲಿ ನಮ್ಮ ಪರಂಪರೆ, ಆಚಾರ-ವಿಚಾರ, ಹಬ್ಬ-ಹರಿದಿನಗಳ ಆಚರಣೆಯ ಮಹತ್ವವನ್ನು ಮಕ್ಕಳಿಗೆ ಕಲಿಸಿ ಅವರ ಮೂಲಕ ಸನಾತನ ಧರ್ಮವನ್ನು ಎತ್ತಿಹಿಡಿಯಬೇಕು’ ಎಂದು ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಬೀರೂರು ಪಟ್ಟಣದಲ್ಲಿ ಶುಕ್ರವಾರ ಸಂಜೆ ಹಿಂದೂ ಸಮಾಜೋತ್ಸವದ ಪ್ರಯುಕ್ತ ಮಹಿಳೆಯರ ಬೈಕ್‌ ಜಾಥಾಕ್ಕೆ ರಂಭಾಪುರಿ ಖಾಸಾ ಶಾಖಾಮಠದ ಎದುರು ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕತೆ ಹಿಂದೆ ಬಿದ್ದು ನಮ್ಮ ಯುವಜನರು ನಮ್ಮ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ಮೊಬೈಲ್‌ ಫೋನ್‌ ಯುಗದಲ್ಲಿ ಚಿಕ್ಕ ಮಕ್ಕಳಿಗೂ ಕಥೆ ಹೇಳಿ ಅವರಲ್ಲಿ ಸಂಸ್ಕಾರ ಬಿತ್ತಬೇಕಾದ ಪೋಷಕರು ತಾವೇ ಮಕ್ಕಳ ಕೈಗೆ ಮೊಬೈಲ್‌ ಫೋನ್‌ ಕೊಟ್ಟು ಕೂರಿಸುವ ಸ್ಥಿತಿ ತಲುಪಿದ್ದಾರೆ. ಇದು ತಪ್ಪು, ನಮ್ಮ ಧರ್ಮ, ದೇಶವನ್ನು ನಾವು ಕಾಪಾಡಬೇಕಲ್ಲವೇ?. ಜಾತಿ-ಮತಗಳ ಹಂಗು ತೊರೆದು ನಾವೆಲ್ಲರೂ ಒಂದೇ ಎನ್ನುವ ಮನೋಭಾವ ರೂಢಿಸಿಕೊಂಡು, ಸಮಾಜ ಕಟ್ಟಲು ಮುಂದಾಗಿರಿ ಎಂದು ಅವರು ಸಲಹೆ ನೀಡಿದರು.

ADVERTISEMENT

ಜಾಥಾ ಉದ್ಘಾಟನೆಗೆ ಸ್ವಾಮೀಜಿ ಜತೆ ಕೈಗೂಡಿಸಿದ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ ಬೆಳ್ಳಿಪ್ರಕಾಶ್‌, ‘ಸಮಾಜದಲ್ಲಿ ಸಮಾನತೆ ಕಾಣಲು ಮೊದಲು ಎಲ್ಲರೂ ಒಂದಾಗಿ ಮುನ್ನಡೆಯುವ ಗುಣ ಅಳವಡಿಸಿಕೊಳ್ಳಬೇಕು. ಅದರ ಅಂಗವಾಗಿಯೇ ರಾಜ್ಯದಾದ್ಯಂತ ಹಿಂದೂ ಸಮಾಜೋತ್ಸವ ಆರಂಭಗೊಂಡಿದ್ದು, ಶನಿವಾರ (ಜ 24) ಬೆಳಿಗ್ಗೆ ಬೀರೂರಿನಲ್ಲಿ ನಡೆಯುವ ಶೋಭಾಯಾತ್ರೆ ನಂತರ ಗಣಪತಿ ಪೆಂಡಾಲ್‌ನಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ, ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್‌ ಕಲ್ಲಡ್ಕ ದಿಕ್ಸೂಚಿ ಭಾಷಣ ಮಾಡುವರು. ಈ ಕಾರ್ಯಕ್ರಮದಲ್ಲಿ ಕಡೂರು ಮಂಡಲದ ಎಲ್ಲ ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಳ್ಳುವಂತೆ’ ತಿಳಿಸಿದರು.

ಮಹಿಳೆಯರು ಕೇಸರಿ ಶಾಲು, ರುಮಾಲು ಧರಿಸಿ ಬೀರೂರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಭಾರತ್‌ ಮಾತಾ ಕೀ ಜೈ... ವಂದೇ ಮಾತರಂ ಘೋಷಣೆಗಳೊಡನೆ ಬೈಕ್‌, ಸ್ಕೂಟರ್‌ಗಳಲ್ಲಿ ಸಂಚರಿಸಿ ಶೋಭಾಯಾತ್ರೆ ನಡೆಸಿದರು. ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯ ಸವಿತಾ ರಮೇಶ್‌, ಅರೆಕಲ್‌ ಪ್ರಕಾಶ್‌, ಮಾರ್ಗದ ಮಧು, ಬಸವರಾಜ್‌, ಎನ್‌.ಎಂ. ನಾಗರಾಜ್‌, ಮಾಧವರಾವ್‌, ಸ್ವರ್ಣಾ ಗುರುನಾಥ್‌, ಮಂಜುಳಾ, ಸಹನಾ, ಲಲಿತಾ ನಾಗರಾಜ್‌, ವಾಣಿ ತಿಮ್ಮಯ್ಯ, ಬಿಜೆಪಿ ವಕ್ತಾರ ಶಾಮಿಯಾನಾ ಚಂದ್ರು, ಪುರಸಭೆ ಮಾಜಿ ಸದಸ್ಯ ಎಸ್‌.ಎಸ್‌.ದೇವರಾಜ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.