ADVERTISEMENT

ರಾಜಾಜಿನಗರ ಬಡಾವಣೆ: ಹೆಸರಿಗೆ ಪ್ರತಿಷ್ಠಿತ, ಮೂಲಸೌಕರ್ಯ ಮರೀಚಿಕೆ

ಆಡಳಿತ ವ್ಯವಸ್ಥೆಯ ವಿರುದ್ಧ ನಿವಾಸಿಗಳ ಕೋಪ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 19:30 IST
Last Updated 27 ಜೂನ್ 2022, 19:30 IST
ಬೀರೂರು ಪಟ್ಟಣದ ರಾಜಾಜಿನಗರ ಬಡಾವಣೆಯ ಹದಗೆಟ್ಟ ರಸ್ತೆ
ಬೀರೂರು ಪಟ್ಟಣದ ರಾಜಾಜಿನಗರ ಬಡಾವಣೆಯ ಹದಗೆಟ್ಟ ರಸ್ತೆ   

ಬೀರೂರು: ಪಟ್ಟಣದ ಪ್ರತಿಷ್ಠಿತ ಬಡಾವಣೆ ಎಂದು ಹೆಸರಾಗಿರುವ ರಾಜಾಜಿನಗರದಲ್ಲಿ ವಾಸ ಮಾಡುವವರಲ್ಲಿ ಸಾಕಷ್ಟು ಸರ್ಕಾರಿ ನೌಕರರು, ಶಿಕ್ಷಕರು ಅಥವಾ ಸುಶಿಕ್ಷಿತರು ಇದ್ದಾರೆ. ಇಲ್ಲಿ ನಿವೇಶನದ ಬೆಲೆಯಂತೂ ಗಗನಮುಖಿ. ಆದರೆ, ಮೂಲಸೌಕರ್ಯಗಳಾದ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ, ಸ್ವಚ್ಛತೆ ಮಾತ್ರ ದೇವರಿಗೇ ಪ್ರೀತಿ. ಸ್ಥಳೀಯ ಸಂಸ್ಥೆಯಾಗಲೀ, ವಾರ್ಡ್ ಸದಸ್ಯರಾಗಲೀ ಇಲ್ಲಿನ ಅವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಕೋಪಕ್ಕೆ ಕಾರಣವಾಗಿದೆ.

ಮೂರು ದಶಕಗಳ ಹಿಂದೆ ಆಶ್ರಯ ಬಡಾವಣೆ ಅಸ್ತಿತ್ವಕ್ಕೆ ಬಂದಿದ್ದು, ಇಲ್ಲಿ ಕೆಲವರು ತಮ್ಮ ಜಮೀನುಗಳನ್ನು ವಾಸದ ಉದ್ದೇಶಕ್ಕೆ ಪರಿವರ್ತಿಸಿ ನಿವೇಶನಗಳನ್ನು ಮಾರಾಟ ಮಾಡಿದ ಬಳಿಕ ಸಾಕಷ್ಟು ಬೆಳವಣಿಗೆ ಆಗಿದೆ. ಬಡಾವಣೆಗೆ ಹೊಂದಿಕೊಂಡಂತೆ ಪೊಲೀಸ್ ನಿವಾಸಗಳು, ಅಲ್ಪಸಂಖ್ಯಾತ ಬಾಲಕರ ಹಾಸ್ಟೆಲ್, ಬಾಲಕಿಯರ ಹಾಸ್ಟೆಲ್, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿನಿಲಯ, ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಎಲ್ಲ ಇದೆ. ಆದರೆ, ಬಡಾವಣೆಯ ಯಾವ ರಸ್ತೆಗಳೂ ಸುಸ್ಥಿತಿಯಲ್ಲಿ ಇಲ್ಲ. ಮಾಲು ಸ್ಲೀಪರ್ಸ್ ಕಡೆಯಿಂದ ಅಥವಾ ಬಾಲಕರ ಹಾಸ್ಟೆಲ್ ಕಡೆಯಿಂದ ಇರುವ ರಸ್ತೆಗಳಂತೂ ಡಾಂಬರು ಕಂಡು ಎಷ್ಟು ವರ್ಷವಾಗಿದೆಯೋ ಗೊತ್ತಿಲ್ಲ.

ಹಾಳುಬಿದ್ದ ರಸ್ತೆಗಳಲ್ಲಿಯೇ ಸಂಚರಿಸುವ ಜನರ ನೆಮ್ಮದಿ ಕಳೆದಿರುವ ಬಡಾವಣೆಯ ಸಾಕಷ್ಟು ಕಡೆ ಚರಂಡಿ ವ್ಯವಸ್ಥೆಯಂತೂ ಅವ್ಯವಸ್ಥೆಯ ಆಗರ. ನೀರು ಸರಾಗವಾಗಿ ಹರಿದುಹೋಗಲು ಚರಂಡಿಗಳಲ್ಲಿ ಬೆಳೆದ ಹುಲುಸು ಕಳೆಯೇ ಅಡ್ಡಿ. ಪೊಲೀಸ್ ವಸತಿಗಳ ಹಿಂಭಾಗದಲ್ಲಿ ಹರಿದು ಹೋಗಬೇಕಾದ ಕೊಳಚೆ ನೀರಿಗೆ ಗಮ್ಯಸ್ಥಾನವೇ ಇಲ್ಲ. ಪುರಸಭೆ ವತಿಯಿಂದ ಒಬ್ಬ ಹೊರಗುತ್ತಿಗೆ ನೌಕರನನ್ನು ನೇಮಿಸಲಾಗಿದ್ದು, ಆತ ಸಮರ್ಪಕವಾಗಿ ಕೆಲಸ ನಿರ್ವಹಿಸಿದ್ದು ಯಾರಿಗೂ ತಿಳಿದಿಲ್ಲ.

ADVERTISEMENT

ಸಮುದಾಯ ಭವನಕ್ಕೆ ಮೀಸಲಾದ ನಿವೇಶನಗಳು ಅತಿಕ್ರಮಣಕ್ಕೆ ಒಳಗಾಗಿವೆ. ಗಣಪತಿ ದೇವಾಲಯದ ಬಳಿ ಇರುವ ಉದ್ಯಾನನಲ್ಲಿ ಅಷ್ಟಿಷ್ಟು ವ್ಯವಸ್ಥೆ ಬಿಟ್ಟರೆ ಬಡಾವಣೆಯ ಕೆಳತುದಿಯಲ್ಲಿ ಇರುವ ಉದ್ಯಾನ ಯಾವಾಗಲೂ ಬಾಗಿಲು ಹಾಕಿರುತ್ತದೆ. ಇಲ್ಲಿ ಸಿಮೆಂಟ್ ನೆಲಹಾಸು ಹೊರತುಪಡಿಸಿ ನಾಗರಿಕರ, ಮಕ್ಕಳ ಉಪಯೋಗಕ್ಕೆ ಬರುವ ಯಾವ ವ್ಯವಸ್ಥೆಯೂ ಇಲ್ಲ. ಈ ವಿಷಯಗಳು ಪುರಸಭೆ ಅಥವಾ ವಾರ್ಡ್ ಪ್ರತಿನಿಧಿಯ ಗಮನದಲ್ಲಿ ಇಲ್ಲ ಎಂದಲ್ಲ, ದಿವ್ಯ ನಿರ್ಲಕ್ಷ್ಯವೇ ಧೋರಣೆಯಾಗಿ ಜನರ ಕೂಗಿಗೆ ಯಾವ ಬೆಲೆಯೂ ಇಲ್ಲ. ಈ ಸ್ಥಿತಿ ಕಂಡು ಬಡಾವಣೆಯ ಮುಖ್ಯರಸ್ತೆಯನ್ನಾದರೂ ದುರಸ್ತಿ ಪಡಿಸಿ ಎನ್ನುವ ಕೂಗು ಇತ್ತೀಚೆಗೆ ಬಲ ಕಳೆದುಕೊಂಡಿದೆ.

ಬಡಾವಣೆಗೆ ಹೊಂದಿಕೊಂಡಂತೆ ಕುಡಿಯುವ ನೀರು ಪೂರೈಸುವ ಟ್ಯಾಂಕ್ ನಿರ್ಮಾಣ ಭರದಿಂದ ಸಾಗಿದೆ. ಆದರೆ ನಂತರ ನೀರು ಪೂರೈಕೆಯಲ್ಲಿ ಸುಧಾರಣೆ ಆಗುವುದೇ ಎನ್ನುವುದು ತಿಳಿದಿಲ್ಲ. ಎಷ್ಟೋ ಬಾರಿ ಜನರಿಗೆ ಟ್ಯಾಂಕರ್ ನೀರೇ ಆಸರೆಯಾಗಿದೆ. ಅದೂ ಅವರೇ ಹಣ ತೆತ್ತು ಹಾಕಿಸಿಕೊಳ್ಳಬೇಕಿದೆ. ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಯಾರೂ ಇತ್ತ ತಲೆ ಹಾಕುವುದಿಲ್ಲ, ನಮ್ಮ ಕಷ್ಟ-ಸುಖಗಳಿಗೆ ಸ್ಪಂದಿಸುವುದಿಲ್ಲ ಎನ್ನುವುದು ಸ್ಥಳೀಯರ ನೋವು.

‘ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆ ಮನಸ್ಸು ಮಾಡುತ್ತಿಲ್ಲ. ರಾತ್ರಿವೇಳೆ ಬೀದಿ ದೀಪ ಆರಿಸುವ ಪುಂಡರು ಜನರ ನೆಮ್ಮದಿಗೆ ಭಂಗ ತರುತ್ತಿದ್ದಾರೆ. ಪೊಲೀಸ್ ಬೀಟ್ ಸಮರ್ಪಕವಾಗಿಲ್ಲ, ಇತ್ತೀಚೆಗಷ್ಟೇ ಬಡಾವಣೆಯ ಮನೆ ಒಂದರಲ್ಲಿ ದರೋಡೆ ನಡೆದು ನಿವಾಸಿಗಳ ನಿದ್ದೆ ಕೆಡಿಸಿದೆ. ರೈಲ್ವೆ ನಿಲ್ದಾಣ ಸಮೀಪದಲ್ಲಿಯೇ ಇದ್ದು ಅಪರಿಚಿತರು ಯಾರೇ ಬಂದು ಹೋದರೂ ತಿಳಿಯುವುದಿಲ್ಲ’ ಎನ್ನುತ್ತಾರೆ ಚಂದ್ರಶೇಖರಯ್ಯ ಮತ್ತು ವಿನಯ್ ಕುಮಾರ್.

‘ಸಾಕಷ್ಟು ಮಕ್ಕಳು ತೆರಳುವ ಶಾಲಾ ಬಸ್‍ಗಳೂ ಗುಂಡಿಬಿದ್ದ ರಸ್ತೆಯಲ್ಲಿಯೇ ಹಾದು ಹೋಗಬೇಕು. ಇಲ್ಲಿನ ಅವ್ಯವಸ್ಥೆ ಸರಿಪಡಿಸುವವರು ಯಾರು ಎನ್ನುವುದೇ ತಿಳಿಯದಾಗಿದೆ. ಪುರಸಭೆ ಅಧಿಕಾರಿ, ಸಿಬ್ಬಂದಿ ಇಲ್ಲಿ ಭೇಟಿ ನೀಡಿ ಜನರಿಂದ ಸಮಸ್ಯೆ ಆಲಿಸಿ ಬಗೆಹರಿಸಲು ಯತ್ನಿಸಿದರೆ ಒಳಿತು. ವಾರ್ಡ್ ಪ್ರತಿನಿಧಿಗೆ ಇತ್ತ ತಲೆಹಾಕಲೂ ಪುರುಸೊತ್ತು ಇಲ್ಲದೇ ಇರುವದರಿಂದ ಅವರನ್ನು ಏನಾದರೂ ಕೇಳುವುದನ್ನೇ ನಿಲ್ಲಿಸಿದ್ದೇವೆ’ ಎಂದು ಆಕ್ರೋಶ ಹೊರಹಾಕುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.