
ಚಿಕ್ಕಮಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ‘ಭಯೋತ್ಪಾದಕರು, ದೇಶದ್ರೋಹಿಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸಕಲ ಸವಲತ್ತು ಪೂರೈಸಿ ರಾಜಾತಿಥ್ಯ ನೀಡುತ್ತಿದೆ. ಈ ಎಲ್ಲಾ ಸವಲತ್ತನ್ನು ಒದಗಿಸುತ್ತಿರುವ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಕಾರಾಗೃಹದಲ್ಲಿ ವಿಕೃತ ಕಾಮಿ ಹಾಗೂ ಭಯೋತ್ಪಾದಕರ ಕೈನಲ್ಲಿ ಸ್ಮಾರ್ಟ್ ಪೋನ್ ದೊರಕುವಂತೆ ಮಾಡಲಾಗಿದೆ. ವಿಡಿಯೊಗಳಿಂದ ಇವು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದರು.
ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ‘ಬಡವರು, ಶೋಷಿತರು, ದಲಿತರು ಹಾಗೂ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ರಾಜ್ಯದ ಜನರಿಗೆ ದ್ರೋಹ ಬಗೆದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ’ ಎಂದು ಹೇಳಿದರು.
ರಾಷ್ಟ್ರದ್ರೋಹಿಗಳ ಜತೆ ಕೈಜೋಡಿಸಿ, ಕೈದಿಗಳು ಐಶರಾಮಿಯಾಗಿ ಬದುಕಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸರ್ಕಾರದ ಈ ನಡೆಯನ್ನು ಜನ ಖಂಡಿಸಬೇಕು ಎಂದರು.
ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್‌ಗೌಡ, ಉಪಾಧ್ಯಕ್ಷೆ ಅಂಕಿತಾ, ಕಾರ್ಯದರ್ಶಿ ರಾಜೇಶ್, ಶಶಿ ಆಲ್ದೂರು, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ನಗರ ಘಟಕದ ಅಧ್ಯಕ್ಷ ಪುಷ್ಪರಾಜ್, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.