ನರಸಿಂಹರಾಜಪುರ: ತಾಲ್ಲೂಕು ವ್ಯಾಪ್ತಿಯಲ್ಲಿ ಭದ್ರಾನದಿ ಸೇರಿದಂತೆ ಹಲವು ಹಳ್ಳ– ಕೊಳ್ಳಗಳು ಹರಿಯುತ್ತಿದ್ದರೂ, ಕುಡಿಯುವ ನೀರಿಗೆ ಕೊಳವೆ ಬಾವಿಯೇ ಆಸರೆಯಾಗಿದೆ.
ಪಟ್ಟಣದ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಿದ್ದು, 2011ರ ಜನಗಣತಿ ಪ್ರಕಾರ 7,458 ಜನ ವಾಸಿಸುತ್ತಿದ್ದಾರೆ. 1,745 ಮನೆಗಳಿದ್ದು, 1,478 ಮನೆಗಳಿಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ ಇದೆ. ಕೆಲವು ಮನೆಗಳಿಗೆ ಸ್ವಂತ ಕೊಳವೆ ಬಾವಿಗಳಿದ್ದು, ನೀರು ಸರಬರಾಜು ಮಾಡಲು ಪಟ್ಟಣ ಪಂಚಾಯಿತಿ ವತಿಯಿಂದ 39 ಕೊಳವೆ ಬಾವಿ ಕೊರೆಯಲಾಗಿದೆ. 6 ಓವರ್‌ಹೆಡ್ ಟ್ಯಾಂಕ್‌ಗಳ ಮೂಲಕ ಪ್ರತಿನಿತ್ಯ 1 ಎಂಎಲ್‌ಡಿ ನೀರು ಸರಬರಾಜು ಆಗುತ್ತದೆ.
ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಮೆಣಸೂರು ಗ್ರಾಮದ ಹೊಸ ಸೇತುವೆಯ ಬಳಿ ಕಬ್ಬಿನ ಹಳ್ಳಕ್ಕೆ ₹10 ಕೋಟಿಗೂ ಅಧಿಕ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲಾಗಿತ್ತು. ಆದರೆ, ಬ್ಯಾರೇಜ್‌ನಲ್ಲಿ ನಿರೀಕ್ಷಿತ ಪ್ರಮಾಣದ ನೀರು ಶೇಖರಣೆಯಾಗದೆ ಯೋಜನೆ ವಿಫಲವಾಯಿತು. ಇದು ಈವರೆಗೂ ಪಟ್ಟಣ ಪಂಚಾಯಿತಿಗೆ ಹಸ್ತಾಂತರಗೊಂಡಿಲ್ಲ. ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಹೆಬ್ಬೆ ಹತ್ತಿರದ ಭದ್ರಾ ಎಡದಂಡೆಯಿಂದ ಪಟ್ಟಣ ಹಾಗೂ ಮಾರ್ಗ ಮಧ್ಯೆ ಬರುವ 20 ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಯಾರಿಸಿದ್ದ ₹42.70 ಕೋಟಿ ಮೊತ್ತದ ಅಂದಾಜು ಪಟ್ಟಿಯನ್ನು 2016ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಬದಲಾದ ಬೆನ್ನಲ್ಲೇ ಈ ಯೋಜನೆ ನನೆಗುದಿಗೆ ಬಿದ್ದಿದೆ.
ಜಲಜೀವನ್ ಮಿಷನ್ ಯೋಜನೆಯಡಿ ನರಸಿಂಹರಾಜಪುರ ತಾಲ್ಲೂಕು ಮುತ್ತಿನಕೊಪ್ಪ ಮತ್ತು ಇತರೆ 155 ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆ ಯೋಜನೆಯ ಪ್ರಸ್ತಾವನೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಕ್ಕೆ ಪಟ್ಟಣ ಪಂಚಾಯಿತಿಯಿಂದ ಸಲ್ಲಿಸಲಾಗಿತ್ತು. ಮುತ್ತಿನಕೊಪ್ಪ ಸಮೀಪದ ತುಂಗಾ ನದಿಯಿಂದ ನೀರೆತ್ತಿ ಗ್ರಾಮೀಣ ಭಾಗದ ಮನೆಗಳಿಗೆ ನೀರು ಪೂರೈಸುವ ಉದ್ದೇಶ ಹೊಂದಲಾಗಿದೆ. ಪ್ರಸ್ತುತ ಅಮೃತ್ 1.0 ಯೋಜನೆಗೆ ಪಟ್ಟಣ ಪಂಚಾಯಿತಿ ಆಯ್ಕೆಯಾಗಿದೆ.
ಪಟ್ಟಣದ ವ್ಯಾಪ್ತಿಯಲ್ಲಿ ಪ್ರತಿನಿತ್ಯ 1ಗಂಟೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ನೀರಿಗಾಗಿ ಕೊಳವೆ ಬಾವಿಗಳನ್ನೇ ಅವಲಂಬಿಸಿದ್ದೇವೆ. ಅಂತರ್ಜಲ ಉತ್ತಮವಾಗಿದ್ದು, ಏಪ್ರಿಲ್‌ವರೆಗೂ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಮುಂಜಾಗ್ರತಾ ಕ್ರಮವಾಗಿ ಮೋಟರ್ ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಮುತ್ತಿನಕೊಪ್ಪ ಸಮೀಪದ ತುಂಗಾ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಶಾಸಕರು ಮಂಜೂರು ಮಾಡಿಸಿದ್ದು, ಟೆಂಡರ್ ಪ್ರಕ್ರಿಯೆ ಸಹ ನಡೆದಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರತಿನಿತ್ಯ ಒಂದು ಗಂಟೆ ಸಾಕಾಗುವಷ್ಟು ಪ್ರಮಾಣದಲ್ಲಿ ನೀರು ಸರಬರಾಜಾಗುತ್ತಿದ್ದು ನೀರಿನ ಯಾವುದೇ ಸಮಸ್ಯೆಯಿಲ್ಲ.ರಮಾಮಣಿ, 5ನೇ ವಾರ್ಡ್ ನಿವಾಸಿ
ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜಾಗುತ್ತಿದೆ. ಆದರೆ ನೀರು ಪೂರೈಕೆ ಮಾಡುವ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ ನೀರು ಪೂರೈಕೆ ಸ್ಥಗಿತಗೊಳ್ಳುತ್ತಿದೆ. ಇದನ್ನು ಸರಿಪಡಿಸಬೇಕು.ಪುಷ್ಪ, 7ನೇ ವಾರ್ಡ್‌ನ ಅಂಬೇಡ್ಕರ್ ನಗರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.