ಚಿಕ್ಕಮಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಸಹಾಯಧನ ಕಡಿತ ಖಂಡಿಸಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ತಾಲ್ಲೂಕು ಘಟಕದ ವತಿಯಿಂದ ಕಾರ್ಮಿಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಆಜಾದ್ ಪಾರ್ಕ್ ವೃತ್ತದಲ್ಲಿ ವಿವಿಧ ಗ್ರಾಮಗಳ ಕಟ್ಟಡ ಕಾರ್ಮಿಕರು ಸೇರಿ ಘೋಷಣೆ ಕೂಗುತ್ತಾ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಸಿ.ವಸಂತ್‍ಕುಮಾರ್ ಮಾತನಾಡಿ, ‘ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಆದರೆ, ಈಗ ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ₹1 ಸಾವಿರ, ಪದವಿ ವಿದ್ಯಾರ್ಥಿಗಳಿಗೆ ₹6 ಸಾವಿರ, ಸ್ನಾತಕೋತ್ತರಕ್ಕೆ ₹10 ಸಾವಿರ ಹಾಗೂ ಇತರೆ ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ₹11 ರಿಂದ ₹12 ಸಾವಿರ ನೀಡುವ ಮೂಲಕ ಅಧಿಕ ಮೊತ್ತವನ್ನು ಕಡಿತಗೊಳಿಸಿರುವುದು ಸರಿಯಲ್ಲ. ಹಿಂದೆ ನೀಡುತ್ತಿದ್ದ ಮಾದರಿಯಲ್ಲಿಯೇ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ನೀಡಬೇಕು’ ಎಂದು ಒತ್ತಾಯಿಸಿದರು.
ಕಾರ್ಮಿಕ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರಿಗೆ ನೀಡಿರುವ ಸಲಕರಣೆ, ಸಾಮಾಗ್ರಿಗಳು ಕಳಪೆಯಾಗಿದ್ದು, ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಅನುಮಾನವಿದೆ. ಬಹುತೇಕ ಅರ್ಹ ಫಲಾನುಭವಿ ಕಾರ್ಮಿಕರಿಗೆ ಸಾಮಾಗ್ರಿಗಳು ದೊರೆಯದೆ ಅನ್ಯರ ಪಾಲಾಗಿವೆ ಎಂದು ದೂರಿದರು.
‘ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡಿರುವ ಲ್ಯಾಪ್‌ಟಾಪ್ ಜಿಲ್ಲೆಯಲ್ಲಿ ಸಮರ್ಪಕವಾಗಿ ವಿತರಣೆಯಾಗಿಲ್ಲ. ಕಳಪೆ ಗುಣಮಟ್ಟದಾಗಿದ್ದು, ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡಲಿದ್ದಾರೆ’ ಎಂದು ಆಪಾದಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ. ರಘು ಮಾತನಾಡಿ, ‘ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಳಪೆ ಗುಣಮಟ್ಟದ ಸಾಮಾಗ್ರಿಗಳ ವಿತರಣೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ರಾಜ್ಯದಲ್ಲಿ ನಕಲಿ ಕಾರ್ಡ್‌ಗಳನ್ನು ತಡೆಗಟ್ಟುವುದರ ಜತೆಗೆ ಮಂಡಳಿ ಸಂಗ್ರಹಿಸುವ ಸೆಸ್ ಹಣವನ್ನು ಕಾರ್ಮಿಕರ ಕಲ್ಯಾಣಕ್ಕೆ ಮಾತ್ರ ವಿನಿಯೋಗಿಸಬೇಕು’ ಎಂದು ಒತ್ತಾಯಿಸಿದರು.
60 ವರ್ಷ ತುಂಬಿದ ಕಾರ್ಮಿಕ ಫಲಾನುಭವಿಗಳಿಗೆ ಪಿಂಚಣಿಗೆ ಅರ್ಜಿ ಸಲ್ಲಿಸಲು ಕನಿಷ್ಠ ಒಂದು ವರ್ಷ ಅವಕಾಶ ಕಲ್ಪಿಸಬೇಕು. ಕಳಪೆ ಸಲಕರಣೆ ವಿತರಣೆ ಬದಲು ಖರೀದಿಸಲು ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸುವಂತೆ ಕೋರಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಕುಮಾರ್, ತಾಲ್ಲೂಕು ಉಪಾಧ್ಯಕ್ಷ ಸಿ.ಸಿ.ಮಂಜೇಗೌಡ, ಮುಖಂಡರಾದ ರಾಧಾಸುಂದರೇಶ್, ಮಂಜಯ್ಯ, ಸಲೀಂ, ಶ್ರೀಧರ್, ದಯಾಕ್ಷಿ, ಗೌರಮ್ಮ, ಸುಶೀಲಮ್ಮ, ಜಾನಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.