ಶೆಟ್ಟಿಕೊಪ್ಪ(ಎನ್.ಆರ್.ಪುರ): ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕೆಂಬುದು ಉದ್ಯಮಿ ಗದ್ದೆಮನೆ ವಿಶ್ವನಾಥ್ ಅವರ ಕನಸಾಗಿದೆ ಎಂದು ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ಪಿ.ಜೆ.ಅಂಟೋಣಿ ಹೇಳಿದರು.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಉದ್ಯಮಿ ಗದ್ದೆಮನೆ ವಿಶ್ವನಾಥ್ (ಶಶಿ) ಅವರು 50 ವಿದ್ಯಾರ್ಥಿಗಳಿಗೆ ಸಮವಸ್ತ್ರಕ್ಕಾಗಿ ನೀಡಿರುವ ₹50 ಸಾವಿರ ದೇಣಿಗೆಯನ್ನು ಎಸ್.ಡಿ.ಎಂ.ಸಿ ಸಮಿತಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಎಸ್.ಡಿ.ಎಂ.ಸಿ ಸಮಿತಿ ಹಾಗೂ ಪೋಷಕರು ಚರ್ಚಿಸಿ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಾಮಗ್ರಿ ಖರೀದಿಸಿ ದಾನಿಗಳ ಉದ್ದೇಶ ಈಡೇರಿಸಬೇಕು. ಸರ್ಕಾರಿ ಶಾಲೆಗಳತ್ತ ಪೋಷಕರು, ವಿದ್ಯಾರ್ಥಿಗಳು ಮುಖ ಮಾಡಬೇಕು. ತಾಲ್ಲೂಕಿನ 10 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಒಬ್ಬ ವಿದ್ಯಾರ್ಥಿಗೆ ತಲಾ ₹1 ಸಾವಿರ ವೆಚ್ಚದಲ್ಲಿ ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ಶಾಲೆಗೆ ದೇಣಿಗೆ ನೀಡಲಾಗಿದೆ. 10 ಶಾಲೆಯ 300 ವಿದ್ಯಾರ್ಥಿಗಳಿಗೆ ₹3 ಲಕ್ಷವನ್ನು ಲಯನ್ಸ್ ಸಂಸ್ಥೆಯ ಉಸ್ತುವಾರಿಯಲ್ಲಿ ವಿತರಿಸಲಾಗಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರವಿಕುಮಾರ್ ಮಾತನಾಡಿ, ‘ಅಳಲಗೆರೆ ಶಾಲೆಗೆ ₹30 ಸಾವಿರ, ಶೀಗುವಾನಿಯ ಶಾಲೆಗೆ ₹17 ಸಾವಿರ, ಬಸ್ತಿಮಠದ ಸರ್ಕಾರಿ ಶಾಲೆಗೆ ₹50 ಸಾವಿರ, ಪ್ರವಾಸಿಮಂದಿರ ಬಳಿಯ ಶಾಲೆಗೆ ₹25 ಸಾವಿರ, ಕಲ್ಲುಗುಡ್ಡೆಯ ಶಾಲೆಗೆ ₹25 ಸಾವಿರ, ಲಿಂಗಾಪುರ ಶಾಲೆಗೆ ₹15 ಸಾವಿರ, ಹೊನ್ನೆಕೂಡಿಗೆಯ ಶಾಲೆಗೆ ₹25 ಸಾವಿರ, ಕುಸುಬೂರು ಶಾಲೆಗೆ ₹25 ಸಾವಿರ, ಶೆಟ್ಟಿಕೊಪ್ಪ ಶಾಲೆಗೆ ₹50 ಸಾವಿರ ಒಟ್ಟು ₹3 ಲಕ್ಷ ದೇಣಿಗೆಯನ್ನು ದಾನಿಗಳು ನೀಡಿದ್ದಾರೆ’ ಎಂದರು.
ಲಯನ್ಸ್ ಕ್ಲಬ್ ಪ್ರಾದೇಶಿಕ ಚೇರ್ಮನ್ ಸಿಜು, ನಿಯೋಜಿತ ಕಾರ್ಯದರ್ಶಿ ಕೆ.ಜೆ.ಎಲ್ದೊ, ಖಜಾಂಚಿ ಈಶ್ವರಾಚಾರ್, ಡಿ.ಸಜಿ, ಕರಗುಂದ ಎಲ್ದೊ, ಸುಭಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಜಗದೀಶ್, ಶಿಕ್ಷಕರಾದ ರಾಧಾಮಣಿ, ಅರುಣ್ ಕುಮಾರ್, ಗಾಯತ್ರಿ, ಮಲ್ಲಿಕಾರ್ಜುನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.