ADVERTISEMENT

ನರಸಿಂಹರಾಜಪುರ: ಅಲೆಮಾರಿ ಸಮುದಾಯದವರಿಗೆ ಸೂರು ನೀಡಲು ಜಾತಿ ಪ್ರಮಾಣಪತ್ರ ಅಡ್ಡಿ

ಕೆ.ವಿ.ನಾಗರಾಜ್
Published 6 ಫೆಬ್ರುವರಿ 2025, 6:28 IST
Last Updated 6 ಫೆಬ್ರುವರಿ 2025, 6:28 IST
ನರಸಿಂಹರಾಜಪುರ ತಾಲ್ಲೂಕು ಬಾಳೆಕೊಪ್ಪ ಗ್ರಾಮದಲ್ಲಿ ಟೆಂಟ್‌ನಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗ
ನರಸಿಂಹರಾಜಪುರ ತಾಲ್ಲೂಕು ಬಾಳೆಕೊಪ್ಪ ಗ್ರಾಮದಲ್ಲಿ ಟೆಂಟ್‌ನಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗ   

ನರಸಿಂಹರಾಜಪುರ: ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದಲ್ಲಿ ಬಾಗಿಲು ಮುಚ್ಚಿರುವ ಸರ್ಕಾರಿ ಶಾಲೆಯ ಆವರಣದಲ್ಲಿ ಟೆಂಟ್‌ನಲ್ಲಿ ವಾಸಿಸುವ ಅಲೆಮಾರಿ ಸಮುದಾಯದವರಿಗೆ ಗುಬ್ಬಿಗಾ ಗ್ರಾ.ಪಂ. ವ್ಯಾಪ್ತಿಯ ಅರಳಿಕೊಪ್ಪದಲ್ಲಿ ನಿವೇಶನ ಮಂಜೂರಾಗಿದ್ದರೂ, ಸೂರು ಕಲ್ಪಿಸಲು ಜಾತಿ ಪ್ರಮಾಣ ಪತ್ರ ಅಡ್ಡಿಯಾಗಿ ಪರಿಣಮಿಸಿದೆ.

ಬಾಳೆ ಗ್ರಾ.ಪಂ. ವ್ಯಾಪ್ತಿಯ ಸೀಗುವಾನಿ ಸರ್ಕಲ್‌ನಲ್ಲಿ ಒಂದೂವರೆ ದಶಕದಿಂದ ವಾಸವಾಗಿದ್ದ ಅಲೆಮಾರಿ ಸಮುದಾಯದವರು 2018ರಲ್ಲಿ ಯಾವುದೋ ಮೂಢನಂಬಿಯಿಂದ ಗ್ರಾಮ ತೊರೆದಿದ್ದರು. ಬೇರೆ ಬೇರೆ ಊರುಗಳಿಗೆ ಹೋಗಿದ್ದ ಸಮುದಾಯದವರನ್ನು ತಾಲ್ಲೂಕು ಆಡಳಿತ ಮತ್ತೆ ತಾಲ್ಲೂಕಿಗೆ ಕರೆತಂದಿತ್ತು. ಕಾಯಂ ನಿವೇಶನ ಕಲ್ಪಿಸುವ ಭರವಸೆ ನೀಡಿ ತಾಲ್ಲೂಕಿನ ಕಡಹಿನಬೈಲು ಗ್ರಾಮ ವ್ಯಾಪ್ತಿಯ ಸರ್ಕಾರಿ ಶಾಲೆಯ ಆವರಣದಲ್ಲಿ ತಾತ್ಕಾಲಿಕ ನೆಲೆ ಒದಗಿಸಿತ್ತು.

ತಾಲ್ಲೂಕು ಆಡಳಿತ ಗುಬ್ಬಿಗಾ ಗ್ರಾ.ಪಂ. ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದ ಸರ್ವೆ ನಂ. 108ರಲ್ಲಿ ಒಂದು ಎಕರೆ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿತು. ಅರಣ್ಯ ಇಲಾಖೆಯವರು ಈ ನಿವೇಶನದಲ್ಲಿದ್ದ ಮರಗಳನ್ನು ತೆರವುಗೊಳಿಸಿ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿತು. ಆದರೆ, ತಾಲ್ಲೂಕು ಆಡಳಿತವು ಹಾವುಗೊಲ್ಲ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ಕೊಡಲು ಸಮಸ್ಯೆಯಿದೆ ಎಂದು ಸಬೂಬು ನೀಡಿ ಮತ್ತೆ ನಿವೇಶನ ಹಂಚಿಕೆ ಮುಂದೂಡಿತು. ಹಾವುಗೊಲ್ಲರ ವಸತಿ ನಿವೇಶನಕ್ಕಾಗಿ ಭೂಮಿ ಕಾಯ್ದಿರಿಸುವುದನ್ನು ಹಾವಾಡಿಗರ ವಸತಿ ನಿವೇಶನಕ್ಕಾಗಿ ಭೂಮಿ ಕಾಯ್ದಿರಿಸುವಿಕೆ ಎಂದು ತಿದ್ದುಪಡಿ ಮಾಡಿ 2023 ಮೇ 5ರಂದು ಜಿಲ್ಲಾಧಿಕಾರಿ ಕಚೇರಿ ಆದೇಶ ಹೊರಡಿಸಿತ್ತು.

ADVERTISEMENT

ಈ ನಡುವೆ, ತಾಲ್ಲೂಕು ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ₹3ಲಕ್ಷ ವೆಚ್ಚದಲ್ಲಿ ಭೂಮಟ್ಟ ಹಾಗೂ ರಸ್ತೆ, ಚರಂಡಿಗೆ ₹1ಲಕ್ಷ ವೆಚ್ಚ ಮಾಡಿದ್ದು 24 ನಿವೇಶನಗಳನ್ನು ಗುರುತು ಮಾಡಲಾಗಿದೆ. ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ನಿವೇಶನ ಹಂಚಿಕೆ ಮಾತ್ರ ಬಾಕಿ ಉಳಿದಿದೆ.

ಅಲೆಮಾರಿ ಜನಾಂಗದವರು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರ ಕುಟುಂಬದ ಕೆಲವರು ಚನ್ನರಾಯಪಟ್ಟಣದಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಅದರ ಆಧಾರದ ಮೇಲೆ ಇಲ್ಲಿ ನೆಲೆಸಿರುವವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ನೈಜತೆಯ ಪತ್ರ ನೀಡುವಂತೆ ಚನ್ನರಾಯಪಟ್ಟಣದ ತಹಶೀಲ್ದಾರ್‌ರಿಗೆ ಪತ್ರ ಬರೆಯಲಾಗಿದ್ದು, ನೈಜತೆಯ ಪ್ರಮಾಣ ಪತ್ರ ತಲುಪಿದ ಕೂಡಲೇ ನಿವೇಶನದ ಹಕ್ಕುಪತ್ರ ನೀಡಲಾಗುವುದು ಎಂದು ತಹಶೀಲ್ದಾರ್ ತನುಜಾ ಟಿ. ಸವದತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಲೆಮಾರಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ನೀಡಿದ ಕೂಡಲೇ ವಸತಿ ಸಚಿವರು ಮನೆ ನೀಡುವ ಭರವಸೆ ನೀಡಿದ್ದು, ಮನೆನಿರ್ಮಿಸಿ ಹಸ್ತಾಂತರ ಮಾಡಲಾಗುವುದು ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.

ತಾಲ್ಲೂಕು ಆಡಳಿತ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿ, ಮನೆ ನೀಡಿದರೆ ಅರಳಿಕೊಪ್ಪ ಗ್ರಾಮಕ್ಕೆ ಹೋಗಿ ನೆಲೆಸಲು ಸಿದ್ಧರಿದ್ದೇವೆ ಎಂದು ಅಲೆಮಾರಿ ಜನಾಂಗದ ವೆಂಕಟೇಶ್ ತಿಳಿಸಿದರು.

ಹಲವು ವರ್ಷಗಳಿಂದ ಟೆಂಟ್‌ನಲ್ಲಿ ವಾಸವಾಗಿದ್ದು, ಸರ್ಕಾರ ಶಾಶ್ವತ ಸೂರು ಒದಗಿಸಿಕೊಡಬೇಕು ಎಂದು ಅಲೆಮಾರಿ ಜನಾಂಗದ ಒತ್ತಾಯವಾಗಿದೆ.

ನರಸಿಂಹರಾಜಪುರ ತಾಲ್ಲೂಕು ಅರಳಿಕೊಪ್ಪ ಗ್ರಾಮದಲ್ಲಿ ಅಲೆಮಾರಿ ಜನಾಂಗಕ್ಕೆ ಮೀಸಲಿರಿಸಿರುವ ಜಾಗದಲ್ಲಿ ಕಾಮಗಾರಿ ಕೈಗೊಂಡಿರುವುದು
ನರಸಿಂಹರಾಜಪುರ ತಾಲ್ಲೂಕು ಅರಳಿಕೊಪ್ಪ ಗ್ರಾಮದಲ್ಲಿ ಅಲೆಮಾರಿ ಜನಾಂಗಕ್ಕೆ ಮೀಸಲಿರಿಸಿರುವ ಜಾಗದಲ್ಲಿ ಸಮುದಾಯ ಶೌಚಾಲಯ ನಿರ್ಮಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.