
ಚಿಕ್ಕಮಗಳೂರು: ಗರ್ಭಕೋಶದ ಕ್ಯಾನ್ಸರ್ ನಿಯಂತ್ರಣಕ್ಕೆ ಹೊಸದಾಗಿ ಲಸಿಕೆ ಕಂಡು ಹಿಡಿಯಲಾಗಿದೆ. ವೈದ್ಯರ ಸಲಹೆ ಪಡೆದು 9 ರಿಂದ 12 ವರ್ಷದೊಳಗಿನ ಹೆಣ್ಣು ಮಕ್ಕಳು ಈ ಲಸಿಕೆ ಪಡೆಯಬೇಕು ಎಂದು ಎಂದು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಂದ್ರಶೇಖರ ಸಾಲಿಮಠ್ ತಿಳಿಸಿದರು.
ಅಖಿಲ ಭಾರತ ತೇರಾಪಂಥ್ ಮಹಿಳಾ ಮಂಡಳದ ಚಿಕ್ಕಮಗಳೂರು ಘಟಕದಿಂದ ನಗರದ ತೇರಾಪಂಥ್ ಸಭಾ ಭವನದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಕೇವಲ ಎರಡು ಡೋಸ್ ಲಸಿಕೆ ಪಡೆದರೆ ಸಾಕಾಗುತ್ತದೆ. 9ರಿಂದ 12ವರ್ಷದೊಳಗೆ ಲಸಿಕೆ ಪಡೆಯಲಾಗದಿದ್ದರೆ ಯುವತಿಯರು 15 ವರ್ಷದ ನಂತರವೂ ಲಸಿಕೆ ಪಡೆಯಬಹುದು. ಆದರೆ, ಅವರು ಹೆಚ್ಚುವರಿಯಾಗಿ 2 ಡೋಸ್ ಲಸಿಕೆ ಪಡೆಯಬೇಕಾಗುತ್ತದೆ. ಇದರಿಂದ ಲಾಭ ಹೆಚ್ಚು ಎಂದು ಹೇಳಿದರು.
40 ರಿಂದ 45 ವರ್ಷ ವಯೋಮಾನದ ಮಹಿಳೆಯರಲ್ಲಿ ಹಾರ್ಮೋನ್ ವ್ಯತ್ಯಾಸವಾಗುವ ಕಾರಣ ಕಡ್ಡಾಯವಾಗಿ ವರ್ಷಕ್ಕೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಸಂಸ್ಕರಿಸಿದ ಆಹಾರಗಳಿಂದ ದೇಹದಲ್ಲಿ ಬೇರೆ ಬೇರೆ ಸಮಸ್ಯೆಗಳು ಕಾಣಿಸಿಕೊಂಡು ಕ್ಯಾನ್ಸರ್‌ಆಗಿ ಪರಿಣಮಿಸಬಹುದು. ಶ್ರಮ ರಹಿತ ಜೀವನ ಶೈಲಿಯಿಂದಲೂ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದರು.
ತೇರಾಪಂಥ್ ಸಭಾ ಅಧ್ಯಕ್ಷ ಮಹೇಂದ್ರಡೋಶಿ ಮಾತನಾಡಿ, ಕ್ಯಾನ್ಸರ್‌ನಿಂದ ಮುಕ್ತರನ್ನಾಗಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದರು.
ಡಾ.ಪಾಂಡುರಂಗ, ಡಾ.ಸೌಮ್ಯ, ತೇರಾಪಂಥ್ ಮಹಿಳಾ ಮಂಡಲ ಅಧ್ಯಕ್ಷೆ ಸಂತೋಷ್ ಗಾದಿಯಾ, ಉಪಾಧ್ಯಕ್ಷರಾದ ನರಿತಾ ಗಾದಿಯಾ, ಲಲಿತಾ ಡೋಸಿ, ಶೋಭಾ ಗಾದಿಯಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.