ADVERTISEMENT

ಚಾರ್ಮಾಡಿ ಘಾಟ್‌: ವಾರಾಂತ್ಯದಲ್ಲಿ ವಾಹನ ದಟ್ಟಣೆ ಕಿರಿಕಿರಿ

ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರ ಮೋಜಿಗೆ ಕಡಿವಾಣ ಹಾಕಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 5:07 IST
Last Updated 26 ಜುಲೈ 2022, 5:07 IST
ಚಾರ್ಮಾಡಿಯ ಕಣಿವೆ ದೃಶ್ಯದಲ್ಲಿ ಪ್ರವಾಸಿಗರ ವಾಹನಗಳು ನಿಂತಿರುವುದು
ಚಾರ್ಮಾಡಿಯ ಕಣಿವೆ ದೃಶ್ಯದಲ್ಲಿ ಪ್ರವಾಸಿಗರ ವಾಹನಗಳು ನಿಂತಿರುವುದು   

ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಶನಿವಾರ, ಭಾನುವಾರದ ರಜಾ ದಿನಗಳಲ್ಲಿ ಪ್ರವಾಸಿಗರ ಮೋಜು ಮಸ್ತಿ ಎಲ್ಲೆ ಮೀರಿದೆ. ಕಣಿವೆ ಜಲಪಾತ ದೃಶ್ಯಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಮಾಡಲಾಗುತ್ತಿದೆ. ಇಂತಹ ಘಟನೆಗಳಿಗೆ ಕಡಿವಾಣ ಅಗತ್ಯ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಚಾರ್ಮಾಡಿ ಘಾಟ್‌ನಲ್ಲಿ ಹಲವು ತೊರೆಗಳು, ಜಲಪಾತಗಳು, ಮೈನವಿರೇಳಿಸುವ ಕಣಿವೆ ನೋಡಲು ವಾರಾಂತ್ಯದಲ್ಲಿ ಜನರ ದಂಡೇ ಚಾರ್ಮಾಡಿ ಮಾರ್ಗದಲ್ಲಿ ಸಾಗುತ್ತದೆ. ಅಲ್ಲದೇ ಶಿರಾಡಿ ರಸ್ತೆ ಸರಿಯಿಲ್ಲ ಎಂಬ ಕಾರಣಕ್ಕೆ ಹಲವು ಪ್ರವಾಸಿಗರು ಚಾರ್ಮಾಡಿ ರಸ್ತೆಯನ್ನೇ ಅವಲಂಬಿಸಿರುವುದು ಕೂಡ ವಾಹನ ದಟ್ಟಣೆಗೆ ಮತ್ತೊಂದು ಕಾರಣವಾಗಿದೆ.

ವಾರಾಂತ್ಯದಲ್ಲಿ ಪ್ರವಾಸಿಗರ ಮೋಜು ಮಸ್ತಿ, ರಸ್ತೆಯಲ್ಲೇ ಸೆಲ್ಫಿ ನೃತ್ಯಗಳು ಸಾಮಾನ್ಯವಾಗುತ್ತಿದೆ. ಅಪಾಯದ ನೀರಿನ ಬಂಡೆ ಮೇಲೆ ಏರಿ ಸಾಹಸ ಮಾಡುವುದು, ಕಣಿವೆ ದೃಶ್ಯದ ತಡೆಗೋಡೆ ಮೇಲೆ ನಿಂತು ಸೆಲ್ಫಿ ತೆಗೆಯುವ ಗೀಳಿನಿಂದ ಜೀವಕ್ಕೆ ಕುತ್ತು ತಂದಿರುವ ಘಟನೆಗಳು ನಡೆದಿವೆ. ಇಂತಹ ಮೋಜು ಮಸ್ತಿಯಿಂದ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಆಸ್ಪತ್ರೆಗೆ ಸಾಗುವ ಪ್ರಯಾಣಿಕರಿಗಂತೂ ತೀರಾ ಅನನುಕೂಲವಾಗುತ್ತಿದೆ.

ADVERTISEMENT

ಚಾರ್ಮಾಡಿಯಲ್ಲಿ ವಾರಾಂತ್ಯದಲ್ಲಿ ಸೋಮನ ಕಾಡು ಕಣಿವೆ ಜಲಪಾತ ದೃಶ್ಯದ ಬಳಿ ಪೊಲೀಸ್ ಗಸ್ತು ವಾಹನ ಬೆಳಿಗ್ಗೆಯಿಂದ ಸಂಜೆವರೆಗೂ ಮೊಕ್ಕಾಂ ಹೂಡಿ ಸಂಚಾರ ನಿಯಂತ್ರಿಸುವ ಅಗತ್ಯವಿದೆ ಎನ್ನುತ್ತಾರೆ ಶೌರ್ಯ ರಾಷ್ಟ್ರೀಯ ವಿಪತ್ತು ತಂಡದ ಸಂಯೋಜಕ ಪ್ರವೀಣ್ ಪೂಜಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.