ADVERTISEMENT

ಬೈರಿಗದ್ದೆಯಲ್ಲಿ ಕಾಡಾನೆ ಪ್ರತ್ಯಕ್ಷ

ಕಾಡಾನೆ ಕಾರ್ಯಾಚರಣೆಗೆ ಬಿಡುವು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:30 IST
Last Updated 5 ಡಿಸೆಂಬರ್ 2022, 4:30 IST

ಮೂಡಿಗೆರೆ: ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಡಾನೆ ಸೆರೆ ಕಾರ್ಯಾಚರಣೆಗೆ ಭಾನುವಾರ ಬಿಡುವು ನೀಡಲಾಗಿತ್ತು.

ಶನಿವಾರ ಬೆಳಗೋಡು ಗ್ರಾಮದಲ್ಲಿ ಸೆರೆ ಸಿಕ್ಕಿದ್ದ ಕಾಡಾನೆಯನ್ನು ಅಭಿಮನ್ಯು, ಹರ್ಷ, ಪ್ರಶಾಂತ್ ಎಂಬ ಸಾಕಾನೆಗಳ ಸುಪರ್ದಿಯಲ್ಲಿ ತಡರಾತ್ರಿ ಮತ್ತಿಗೋಡು ದುಬಾರೆ ಆನೆ ಶಿಬಿರಕ್ಕೆ ಕಳುಹಿಸಿಕೊಡಲಾಯಿತು.

ಕಾರ್ಯಾಚರಣೆಯಲ್ಲಿ ಸಾಕಾನೆಗಳು ಪಾಲ್ಗೊಂಡಿದ್ದರಿಂದ ಅವುಗಳಿಗೆ ವಿಶ್ರಾಂತಿ ಅಗತ್ಯವಾಗಿದ್ದು, ಎರಡು ದಿನಗಳ ಬಳಿಕ ಇನ್ನೊಂದು ಕಾಡಾನೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಮಳೆಯಿಂದ ಸಮಸ್ಯೆ: ಕಾಡಾನೆ ಸೆರೆ ಕಾರ್ಯಾಚರಣೆಗಾಗಿ ಶಿಬಿರ ಹಾಕಿರುವ ದೊಡ್ಡಳ್ಳ ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುರುವಾರ ತಡರಾತ್ರಿ ಮಳೆಯಾಗಿದ್ದರಿಂದ ಶಿಬಿರದಲ್ಲಿ ಉಳಿದುಕೊಳ್ಳಲು ಸಮಸ್ಯೆ ಎದುರಾಯಿತು. ಸಂಜೆ ಕಾರ್ಯಾಚರಣೆ ವೇಳೆಯಲ್ಲಿಯೇ ದಟ್ಟವಾಗಿ ಮೋಡ ಕವಿದಿತ್ತು. ರಾತ್ರಿ 10ರ ಸುಮಾರಿಗೆ ಮಳೆ ಸುರಿಯಿತು. ಮಾವುತರು ತಾತ್ಕಾಲಿಕ ಟೆಂಟ್‌‌ಗಳಲ್ಲಿ ಆಶ್ರಯ ಪಡೆದರೆ ಆನೆಗಳು ಮಳೆಯಲ್ಲಿಯೇ ಇದ್ದವು.

ಬೈರಿಗದ್ದೆಯಲ್ಲಿ ಕಾಡಾನೆ ಪ್ರತ್ಯಕ್ಷ: ಭಾನುವಾರ ನಸುಕಿನಲ್ಲಿ ಒಂದು ಕಾಡಾನೆಯು ಬೈರಿಗದ್ದೆ ಗ್ರಾಮದಲ್ಲಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಕಾಡಾನೆಗಳು ಸಂಚರಿಸುತ್ತಿದ್ದು, 15 ದಿನಗಳ ಹಿಂದೆ ಶೋಭಾ ಎಂಬ ಮಹಿಳೆಯು ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು. ಬಳಿಕ ಸರ್ಕಾರವು ಈ ಭಾಗದಲ್ಲಿರುವ ಮೂರು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲು ಆದೇಶಿಸಿತ್ತು.ಈಗಾಗಲೇ ಎರಡು ಕಾಡಾನೆಗಳನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದು, ಒಂದು ಕಾಡಾನೆಯು ಬೈರಿಗದ್ದೆಯಲ್ಲಿ ಕಾಣಿಸಿಕೊಂಡಿದೆ. ಬೈರಿಗದ್ದೆಯ ಮೂಲಕ ಭಟ್ರಗದ್ದೆ, ಕುಂಡ್ರ ಗ್ರಾಮದತ್ತ ತೆರಳಿರುವ ಹೆಜ್ಜೆ ಗುರುತು ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.