ADVERTISEMENT

ಚಿಕ್ಕಮಗಳೂರು: ಹೊಲದಲ್ಲೇ ಬೆಳೆ ಮಣ್ಣುಪಾಲು

ಕೊರೊನಾ ತಲ್ಲಣ, ಎಳೆಕೋಸಿಗೆ ಮಾರುಕಟ್ಟೆಯಲ್ಲಿ ದುಗ್ಗಾಣಿ ದರ

ಬಿ.ಜೆ.ಧನ್ಯಪ್ರಸಾದ್
Published 12 ಜುಲೈ 2020, 16:01 IST
Last Updated 12 ಜುಲೈ 2020, 16:01 IST
ಚಿಕ್ಕಮಗಳೂರು ತಾಲ್ಲೂಕಿನ ಅಯ್ಯನಹಳ್ಳಿಯ ಹೊಲದಲ್ಲಿನ ಎಲೆಕೋಸನ್ನು ರೊಟವೇಟರ್‌ ಬಳಸಿ ಮಣ್ಣುಪಾಲು ಮಾಡಿದರು.
ಚಿಕ್ಕಮಗಳೂರು ತಾಲ್ಲೂಕಿನ ಅಯ್ಯನಹಳ್ಳಿಯ ಹೊಲದಲ್ಲಿನ ಎಲೆಕೋಸನ್ನು ರೊಟವೇಟರ್‌ ಬಳಸಿ ಮಣ್ಣುಪಾಲು ಮಾಡಿದರು.   

ಚಿಕ್ಕಮಗಳೂರು: ಎಲೆಕೋಸಿನ ಬೆಲೆ ನೆಲಕಚ್ಚಿ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳೆಯನ್ನು ಹೊಲದಲ್ಲೇ ಮಣ್ಣುಪಾಲು ಮಾಡಬೇಕಾದ ಸ್ಥಿತಿ ಬಂದೊದಗಿದೆ.

ತಾಲ್ಲೂಕಿನ ಕರ್ಕಿಪೇಟೆ, ಬಾಳೆಹಳ್ಳಿ, ಅಯ್ಯನಹಳ್ಳಿ, ಹುಳಿಯಾರಹಳ್ಳಿ ಇತರ ಕಡೆಗಳಲ್ಲಿ ಎಲೆಕೋಸು ಬೆಳೆಯಲಾಗಿದೆ. ಈ ತರಕಾರಿಯ ಬೆಲೆ ವಿಪರೀತ ಕುಸಿದಿದೆ, ವರ್ತಕರು ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಮಾರುಕಟ್ಟೆಯಲ್ಲಿ ದುಗ್ಗಾಣಿ ದರಕ್ಕೆ ಕೇಳುತ್ತಾರೆ, ಸಾಗಣೆ ವೆಚ್ಚವೂ ಸಿಗಲ್ಲ ಎಂಬುದು ರೈತರು ಅಳಲು.

ಕೋವಿಡ್‌ ತಲ್ಲಣವು ಎಲ್ಲರನ್ನೂ ಹೈರಾಣಾಗಿಸಿದೆ. ಬೆಳೆದ ಬೆಳೆಗೆ ಬೆಲೆ ಸಿಗದಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ADVERTISEMENT

ನೂರಾರು ಎಕರೆಯಲ್ಲಿ ಈ ತರಕಾರಿ ಬೆಳೆದಿದ್ದಾರೆ. ಎಲ್ಲರೂ ಸಣ್ಣ ರೈತರೇ. ಎಲೆ ಕೋಸು ಮೂರು ತಿಂಗಳ ಬೆಳೆ. ಇಳುವರಿಯೂ ಚೆನ್ನಾಗಿ ಬಂದಿದೆ. ಬೆಳೆ ಈಗ ಕಟಾವಿನ ಹಂತದಲ್ಲಿದೆ.

ಈ ಬೆಳೆ ಬೆಳೆಯಲು ಸಸಿ, ಗೊಬ್ಬರ, ಔಷಧ, ಕಳೆ ತೆಗೆಸುವುದು ಎಲ್ಲ ಸೇರಿ ಎಕರೆಗೆ ₹ 25 ಸಾವಿರಕ್ಕೂ ಹೆಚ್ಚು ವೆಚ್ಚ ತಗಲುತ್ತದೆ. ಖರೀದಿಸಲು ಬರುವುದಾಗಿ ಹೇಳಿದ್ದ ವರ್ತಕರು ಪತ್ತೆ ಇಲ್ಲ. ಈ ಬಾರಿ ಬೆಳೆಗೆ ಮಾಡಿರುವ ಖರ್ಚೂ ಸಿಗದಂತಾ ಗಿದೆ ಎಂಬುದು ಬೆಳೆಗಾರರ ನೋವು.

‘ಒಂದು ಎಕರೆಯಲ್ಲಿ ಎಲೆಕೋಸು ಬೆಳೆದಿದ್ದೇನೆ. ಫಸಲು ಚೆನ್ನಾಗಿದೆ, ಕೇಳುವವರೇ ಇಲ್ಲ. ₹ 25 ಸಾವಿರ ವೆಚ್ಚ ಮಾಡಿದ್ದೇನೆ. ಒಂದು ಚೀಲ (60 ಕೆ.ಜಿ) ಎಲೆಕೋಸಿಗೆ ₹70 ರಿಂದ ₹ 80 ಕ್ಕೆ ಕೇಳುತ್ತಾರೆ. ದಿಕ್ಕೇ ತೋಚುತ್ತಿಲ್ಲ’ ಎಂದು ಅಯ್ಯನಹಳ್ಳಿಯ ಬೆಳೆಗಾರ ಪಂಚಾಕ್ಷರಿ ಗೋಳು ತೋಡಿಕೊಂಡರು.

‘ಬೆಳೆಯನ್ನು ಹೊಲದಲ್ಲಿ ಇಟ್ಟು ಕೊಂಡರೆ ಉಪಯೋಗ ಇಲ್ಲ. ರೊಟವೇಟರ್‌ನಲ್ಲಿ ಬೆಳೆಯನ್ನು ಹೊಲದಲ್ಲೇ ಮಣ್ಣುಪಾಲು ಮಾಡಿದ್ದೇನೆ. ಬೇರೆ ದಾರಿಯೇ ಇಲ್ಲ’ ಎಂದರು.

‘ಲಾಕ್‌ಡೌನ್‌ ಆದಾಗಿನಿಂದ ಎಲ್ಲ ವಹಿವಾಟಿನಲ್ಲೂ ಏರುಪೇರು ಆಗಿದೆ. ಎಲೆಕೋಸು ಮಾರುಕಟ್ಟೆಗೆ ಜಾಸ್ತಿ ಬರುತ್ತಿದೆ. ಸ್ಥಳೀಯವಾಗಿ ಸಂಗ್ರಹಿಸಿಡುವುದಕ್ಕೂ ವ್ಯವಸ್ಥೆ ಇಲ್ಲ. ಹೊರಗಡೆಗೆ ಕಳಿಸುವುದು ಕಷ್ಟ ಆಗಿದೆ. ಹೀಗಾಗಿ ಖರೀದಿದಾರರು ಸ್ವಲ್ಪ ಹಿಂದೇಟು ಹಾಕುತ್ತಾರೆ’ ಎಂದು ವರ್ತಕರೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.