ADVERTISEMENT

ಮೊದಲು ಕುಮಾರಸ್ವಾಮಿ ನಾಲಿಗೆ ಸರಿಯಾಗಿ ಇಟ್ಟುಕೊಳ್ಳಲಿ: ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:38 IST
Last Updated 7 ನವೆಂಬರ್ 2025, 7:38 IST
ಎನ್‌.ಚಲುವರಾಯಸ್ವಾಮಿ 
ಎನ್‌.ಚಲುವರಾಯಸ್ವಾಮಿ    

ಚಿಕ್ಕಮಗಳೂರು: ‘ಮಂಡ್ಯದ ಮೈಷುಗರ್ ಶಾಲೆಗೆ ₹25 ಕೋಟಿ ಠೇವಣಿ ಇಡುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಅವರು ಮೊದಲು ತಮ್ಮ ನಾಲಿಗೆ ಸರಿಯಾಗಿ ಇಟ್ಟುಕೊಂಡು ಬೇರೆಯವರ ಬಗ್ಗೆ ಮಾತನಾಡಲಿ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ವೇತನದ ಹಣವನ್ನು ಶಿಕ್ಷಕರಿಗೆ ಕೊಡುತ್ತಿದ್ದೇನೆ. ಇದು ಪಾಪದ ಹಣವಲ್ಲ. ನಾನೇನು ಕಮಿಷನ್ ತೆಗೆದುಕೊಂಡಿಲ್ಲ. ವರ್ಗಾವಣೆಯಿಂದ ಹೊಡೆದುಕೊಂಡ ಹಣವಲ್ಲ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಕುಮಾರಸ್ವಾಮಿ ಅವರು ಇಡೀ ರಾಷ್ಟ್ರದಲ್ಲಿ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆಯೇ, ಎಷ್ಟು ಕಾರ್ಖಾನೆಗಳಿಂದ ಕಮಿಷನ್ ತೆಗೆದುಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಎಲ್ಲೋ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಹಿಟ್‌ ಆ್ಯಂಡ್ ರನ್‌ ಮಾಡುವುದಲ್ಲ. ಎದುರಿಗೆ ಬಂದು ಮಾತನಾಡಲು ಹೇಳಿ. ದಿನಾಂಕ ನಿಗದಿ ಮಾಡಲು ಹೇಳಿ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ. ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದ್ದಾರೆ, ಕೇಂದ್ರದ ಮಂತ್ರಿಯಾಗಿ ಏನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಾಗಲಿದೆ’ ಎಂದರು.

ADVERTISEMENT

‘ಶಾಲೆಗೆ ₹25 ಕೋಟಿ ಠೇವಣಿ ಇಡುವುದಾಗಿ ಅವರೇ ತಾನೇ ಮಾಧ್ಯಮಗಳಿಗೆ ಹೇಳಿದ್ದು. ಯಾವ ನಾಲಿಗೆಯಲ್ಲಿ ಹೇಳಿದರು, ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೆ ಏಕೆ ಹೇಳಬೇಕಿತ್ತು. ಈಗ ಪಾಪದ ಹಣವಲ್ಲ, ಸಂಬಳದ ಹಣದಲ್ಲಿ ಕೊಡುತ್ತೇನೆ ಎನ್ನುತ್ತಾರೆ. ನಾನು ಅವರ ಜತೆಯಲ್ಲೇ ಇದ್ದವನು, ಯಾವ ಹಣದಲ್ಲಿ ಕೊಡುತ್ತಾರೆ ಎಂಬುದು ನಗಗೆ ಗೊತ್ತಿಲ್ಲವೇ’ ಎಂದು ಪ್ರಶ್ನಿಸಿದರು.

‘ಅವರು ಏನೇನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲವೇ, ನನ್ನ ಬಗ್ಗೆ ಹೇಳಲು ಅವರ ಬಳಿ ಹತ್ತು ವಿಷಯಗಳಿದ್ದರೆ ನನ್ನ ಬಳಿ ಸಾವಿರ ಇವೆ. ಎಚ್.ಡಿ.ದೇವೇಗೌಡರ ಬಳಿ ನಾನೂ ಕಲಿತಿದ್ದೇನೆ. ಅವರ ಮಗ ಕುಮಾರಸ್ವಾಮಿ ಎಂಬ ಕಾರಣಕಷ್ಟೇ ಸುಮ್ಮನಿದ್ದೇನೆ’ ಎಂದರು.

‘ನವೆಂಬರ್‌ನಲ್ಲಿ ರಾಜಕೀಯ ಕ್ರಾಂತಿಯೂ ಇಲ್ಲ, ಏನೂ ಇಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅನೊನ್ಯವಾಗಿದ್ದಾರೆ. ಯಾವುದೇ ತೀರ್ಮಾನವಿದ್ದರೂ ಹೈಕಮಾಂಡ್ ತೆಗೆದುಕೊಳ್ಳುತ್ತದೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.