ADVERTISEMENT

ಚಿಕ್ಕಮಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರ ‘ಕಾರುಬಾರು’

ಸಿ.ಎಸ್.ಅನಿಲ್‌ಕುಮಾರ್
Published 3 ಅಕ್ಟೋಬರ್ 2019, 19:30 IST
Last Updated 3 ಅಕ್ಟೋಬರ್ 2019, 19:30 IST
ಚಿಕ್ಕಮಗಳೂರಿನ ಹಿರೇಮಗಳೂರು–ಪರಲಿಕೆರೆ ಸಂಪರ್ಕ ರಸ್ತೆಯ ಸೇತುವೆ ಮೇಲೆ ಮದ್ಯಸೇವಿಸಿ ಬಿಸಾಡಿರುವ ಬಾಟಲಿಗಳು, ಪ್ಲಾಸ್ಟಿಕ್ ಲೋಟಗಳು.
ಚಿಕ್ಕಮಗಳೂರಿನ ಹಿರೇಮಗಳೂರು–ಪರಲಿಕೆರೆ ಸಂಪರ್ಕ ರಸ್ತೆಯ ಸೇತುವೆ ಮೇಲೆ ಮದ್ಯಸೇವಿಸಿ ಬಿಸಾಡಿರುವ ಬಾಟಲಿಗಳು, ಪ್ಲಾಸ್ಟಿಕ್ ಲೋಟಗಳು.   

ಚಿಕ್ಕಮಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನ ಮಾಡುವ ಪರಿಪಾಠ ಹೆಚ್ಚಾಗಿದ್ದು, ಜನರು ಕಿರಿಕಿರಿ ಅನುಭವಿಸುವಂತಾಗಿದೆ.

ಹಿರೇಮಗಳೂರು ಬಳಿಯ ರೈಲ್ವೆ ಮೇಲ್ಸೇತುವೆ ಕೆಳಗೆ, ಕೋದಂಡ ರಾಮಚಂದ್ರಸ್ವಾಮಿ ದೇಗುಲದ ಸಿದ್ದಪುಷ್ಕರಣಿ ಆವರಣ, ಪಾಳು ಮಂಟಪಗಳು, ರಾಮನಹಳ್ಳಿ ಕುಡಿಯುವ ನೀರು ಶುದ್ಧೀಕರಣ ಘಟಕದ ಆವರಣ, ಗೌಡನಹಳ್ಳಿ ಹೆಲಿಪ್ಯಾಡ್, ಇಂದಾವರದ ಚತ್ರಿ ಮರದ ಜಾಗಗಳು ಪುಂಡಪೋಕರಿಗಳ ಮದ್ಯ ಸೇವನೆ ಅಡ್ಡೆಗಳಾಗಿವೆ.

ರೈಲು ನಿಲ್ದಾಣದ ರಸ್ತೆ, ದೀಪಾ ನರ್ಸಿಂಗ್ ಹೋಂ ಕಡೆಯಿಂದ ಬೈಪಾಸ್ ಸಂಪರ್ಕ ಮಾರ್ಗದಲ್ಲಿನ ವಸ್ತುಪ್ರದರ್ಶನ ಮೈದಾನ, ಎಪಿಎಂಸಿ ಆವರಣದ ಹಿಂಭಾಗ, ಜಿಲ್ಲಾ ಕಾರಗೃಹದ ಹಿಂಭಾಗ, ಕೆಂಪನಹಳ್ಳಿಯ ಚಂದ್ರಕಟ್ಟೆ, ಹಿರೇಕೊಳಲೆ, ಗಿರಿಶ್ರೇಣಿ ಮಾರ್ಗ, ಗಾಲ್ಫ್ ಕ್ಲಬ್ ರಸ್ತೆ, ಕೆಎಸ್‌ಆರ್‌ಟಿಸಿ ತರಬೇತಿ ಕೇಂದ್ರದ ಬಳಿ, ಕಡೂರು–ಮೂಡಿಗೆರೆ ರಸ್ತೆಯಲ್ಲಿನ ಚರ್ಚ್ ಕಾಂಪೌಂಡ್‌ ಪಕ್ಕದ ವಾಹನನಿಲುಗಡೆ ಸ್ಥಳ, ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನ ಹಾಗೂ ಸುತ್ತಲಿನ ರಸ್ತೆ, ಜಯನಗರಕ್ಕೆ ಸಂಪರ್ಕ ರಸ್ತೆಗಳಲ್ಲಿ ಜೀಪು, ಕಾರುಗಳನ್ನು ನಿಲ್ಲಿಸಿಕೊಂಡು ಒಳಗೆ ಮದ್ಯ ಸೇವಿಸುತ್ತಾರೆ.

ADVERTISEMENT

ಮದ್ಯಪಾನ ಮಾಡಿ ಟೆಟ್ರಾ ಪ್ಯಾಕ್, ಬಾಟಲಿಗಳು, ಆಹಾರದ ತ್ಯಾಜ್ಯಗಳನ್ನು ಅಲ್ಲಿಯೇ ಬಿಸಾಡುತ್ತಾರೆ. ಈ ಸ್ಥಳಗಳಲ್ಲಿ ಪೊಲೀಸ್ ಗಸ್ತು ಇದ್ದರೂ ಮದ್ಯವ್ಯಸನಿಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ.

‘ಹಿರೇಮಗಳೂರಿನ ಹಳೆಯ ಮತ್ತು ಹೊಸ ಸೇತುವೆ ಹಲವಾರು ಗ್ರಾಮಗಳಿಗೆ ಸಂಪರ್ಕ ಮಾರ್ಗವಾಗಿದೆ. ಈ ಸೇತುವೆಗಳ ಮೇಲೆ ಮಧ್ಯಾಹ್ನ ಹೊತ್ತಿನಲ್ಲಿ ವಾಹನ ನಿಲ್ಲಿಸಿಕೊಂಡು ಮದ್ಯ ಸೇವಿಸುತ್ತಾರೆ. ಬಾಟಲಿಗಳನ್ನು ಸೇತುವೆ ತಡೆಗೋಡೆಗೆ ಒಡೆದು ವಿಕೃತವಾಗಿ ವರ್ತಿಸುತ್ತಾರೆ. ಮಹಿಳೆಯರು, ವೃದ್ಧರ ಸಹಿತ ಈ ರಸ್ತೆಗಳಲ್ಲಿ ಓಡಾಡುವವರು ಕಿರಿಕಿರಿ ಅನುಭವಿಸುವಂತಾಗಿದೆ’ಎಂದು ಸ್ಥಳೀಯ ಪುಟ್ಟಸ್ವಾಮಿ ಹೇಳುತ್ತಾರೆ.

‘ದೀಪಾ ನರ್ಸಿಂಗ್ ಹೋಂ–ಬೈಪಾಸ್ ರಸ್ತೆ ನಡುವಿನ ವಸ್ತು ಪ್ರದರ್ಶನದ ಜಾಗ ಪುಡಾರಿಗಳ ಅಡ್ಡೆಯಾಗಿದೆ. ಈ ಜಾಗದಲ್ಲಿ ಹಗಲು, ರಾತ್ರಿ ಕುಡುಕರದ್ದೇ ಹಾವಳಿ. ರಾತ್ರಿ 8 ಗಂಟೆ ನಂತರ ಈ ರಸ್ತೆಯಲ್ಲಿ ಓಡಾಡಲು ಭಯವಾಗುತ್ತದೆ. ಪೊಲೀಸರು ಗಸ್ತನ್ನು ಹೆಚ್ಚಿಸಬೇಕು’ ಎಂದು ಕಲ್ಯಾಣನಗರ ನಿವಾಸಿ ಗಾಯತ್ರಿ ಒತ್ತಾಯಿಸುತ್ತಾರೆ.

‘ಜಿಲ್ಲಾ ಕಾರಗೃಹದ ಹಿಂಭಾಗದ ಜಾಗದಲ್ಲಿ ಕುಡುಕರು, ಪುಂಡರ ಕಾಟ ಹೆಚ್ಚು. ಈ ಬಗ್ಗೆ ಪೊಲೀಸರಿಗೆ ಹಲವಾರು ಬಾರಿ ದೂರು ಸಲ್ಲಿಸಲಾಗಿದೆ. ಆದರೂ ಕಡಿವಾಣ ಬಿದ್ದಿಲ್ಲ. ಜಮೀನಿನ ಮಾಲೀಕರು ಪೊದೆಗಳನ್ನು ತೆರವುಗೊಳಿಸಬೇಕು. ಸುತ್ತ ಬೇಲಿ ಹಾಕಿಸಬೇಕು’ ಎಂದು ರಾಮನಹಳ್ಳಿಯ ಸುಧೀರ್ ಹೇಳುತ್ತಾರೆ.

*
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಧೂಮಪಾನ ಮಾಡುವುದು ಅಪರಾಧ. ಪೊಲೀಸ್ ಗಸ್ತು ಮತ್ತಷ್ಟು ಹೆಚ್ಚಿಸಿ, ಕಡಿವಾಣ ಹಾಕಲು ಕ್ರಮ ವಹಿಸಲಾಗುವುದು.
-ಬಸಪ್ಪಅಂಗಡಿ, ಡಿವೈಎಸ್ಪಿ, ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.