ADVERTISEMENT

‘ಮೀಸಲು ಅರಣ್ಯ’ ಘೋಷಿಸಲು ಸಿದ್ಧತೆ: ಡಾ.ಕೆ.ಪಿ.ಅಂಶುಮಂತ್ ಆರೋಪ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 7:58 IST
Last Updated 19 ಮಾರ್ಚ್ 2023, 7:58 IST
ಡಾ.ಕೆ.ಪಿ.ಅಂಶುಮಂತ್
ಡಾ.ಕೆ.ಪಿ.ಅಂಶುಮಂತ್   

ನರಸಿಂಹರಾಜಪುರ: ‘ಸರ್ಕಾರ ಏಕಾಏಕಿ ಪ್ರಸ್ತಾಪಿತ ಅರಣ್ಯ (ಸೆಕ್ಷನ್ 4) ವನ್ನು ಮೀಸಲು ಅರಣ್ಯ (ಸೆಕ್ಷೆನ್ 17) ಎಂದು ಘೋಷಿಸಲು ಸಿದ್ಧತೆ ಮಾಡಿಕೊಂಡಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘2007–08ರಲ್ಲಿ ಜಿಲ್ಲೆಯ ಬಹುತೇಕ ಭಾಗ ನರಸಿಂಹರಾಜಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆ ಹಾಗೂ ಚಿಕ್ಕಮಗಳೂರಿನ ಅನೇಕ ಭಾಗಗಳನ್ನು ಪ್ರಸ್ತಾಪಿತ ಅರಣ್ಯ ಎಂದು ಘೋಷಣೆ ಮಾಡಲಾಗಿದೆ. 2007–12ರವರೆಗೆ ನಕಾಶೆ ತಯಾರಿಸಿದ್ದಾರೆ. ಮೀಸಲು ಅರಣ್ಯ ಘೋಷಣೆ ಮಾಡುವ ಮೊದಲು ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 2019ರಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿಯನ್ನು ನೇಮಿಸಲಾಯಿತು. ಪ್ರತಿಯೊಂದು ತಾಲ್ಲೂಕಿನಲ್ಲಿ ಸಾವಿರಾರೂ ಜನರು ಆಕ್ಷೇಪಣೆ ಸಲ್ಲಿಸಿದ್ದರು. ವಾಸದ ಮನೆ, ಕೃಷಿ ಭೂಮಿ, ಸಾರ್ವಜನಿಕ ಉದ್ದೇಶಕ್ಕೆ ಬೇಕಾಗುವ ಭೂಮಿಯನ್ನು ಹೊರತು ಪಡಿಸಿ ಉಳಿದ ಭೂಮಿಯನ್ನು ಮೀಸಲು ಅರಣ್ಯ ಎಂದು ಘೋಷಿಸಲಾಗುವುದು ಎಂದು ಅರಣ್ಯ ವ್ಯವಸ್ಥಾಪನಾ ಅಧಿಕಾರಿ ಅರ್ಜಿಸಲ್ಲಿಸಿದವರಿಗೆ ಭರವಸೆ ನೀಡಿದ್ದರು’ ಎಂದರು.

‘ಜನರು ಸಲ್ಲಿಸಿರುವ ಆಕ್ಷೇಪಣೆಗಳ ಬಗ್ಗೆ ಸ್ಥಳ ಪರಿಶೀಲಿಸದೆ, ಅರ್ಜಿದಾರರಿಗೆ ನೋಟಿಸ್ ನೀಡದೆ ಮೀಸಲು ಅರಣ್ಯ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ. 2022ರ ಡಿಸೆಂಬರ್ 31ರಂದು ಎಲ್ಲಾ ತಾಲ್ಲೂಕು ಪಂಚಾಯಿತಿ ಇಒಗಳಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದು 1963ರ ಅರಣ್ಯ ಕಾಯ್ದೆ ಪ್ರಕಾರ ಮೀಸಲು ಅರಣ್ಯ ಎಂದು ಅಂತಿಮ ಅಧಿಸೂಚನೆ ಹೊರಡಿಸಲು ಮಾಹಿತಿಯನ್ನು ಕೇಳಿದ್ದಾರೆ’ ಎಂದು ದಾಖಲೆ ಪ್ರದರ್ಶಿಸಿದರು.

ADVERTISEMENT

ಶೃಂಗೇರಿ ಕ್ಷೇತ್ರದ ಬಹುತೇಕ ಕಂದಾಯ ಭೂಮಿ ಮೀಸಲು ಅರಣ್ಯ ಎಂದು ಘೋಷಣೆಯಾಗಲು ಮಾಜಿ ಶಾಸಕ ಡಿ.ಎನ್.ಜೀವರಾಜ್ ಕಾರಣರಾಗಿದ್ದಾರೆ. ಅವರು ಮುಖ್ಯ ಸಚೇತಕರಾಗಿದ್ದ ಕಾಲದಲ್ಲಿ ಸಾಕಷ್ಟು ಕಂದಾಯ ಭೂಮಿಯನ್ನು ಸೆಕ್ಷನ್ 4ಗೆ ಸೇರಿಸಿದ್ದಾರೆ ಎಂದು ಆರೋಪಿಸಿದರು.

‘ಸೆಕ್ಷನ್ 17 ಅಂತಿಮ ಅಧಿಸೂಚನೆಯಾದರೆ ಜಿಲ್ಲೆಯ ಸಾವಿರಾರೂ ಎಕರೆ ಪ್ರದೇಶ ಮೀಸಲು ಅರಣ್ಯವಾಗಲಿದೆ. ನರಸಿಂಹರಾಜಪುರ ತಾಲ್ಲೂಕಿನ ಶಿರಗಳಲೆ ಬ್ಲಾಕ್ 1 ಮತ್ತು 2ರ ಶಿರಗಳಲೆ, ನಾಗಲಾಪುರ ಬಾಳೆಯ 242 ಎಕರೆ, ಬನ್ನೂರು ಗ್ರಾಮ ಪಂಚಾಯಿತಿಯ ಹಲಸೂರಿನ 179 ಎಕರೆ, ಸೀತೂರು ಗ್ರಾಮ ಪಂಚಾಯಿತಿಯ ಕೊನೊಡಿಯ 117 ಎಕರೆ, ನೆರಳೆಕೊಪ್ಪದ 69 ಎಕರೆ, ಮುದುಗುಣಿಯ 45.32 ಎಕರೆ ಪ್ರದೇಶ ಮೀಸಲು ಅರಣ್ಯವಾಗಲಿದೆ’ ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ಈ.ಸಿ.ಜೋಯಿ, ಉಪೇಂದ್ರ, ಪ್ರಶಾಂತ್ ಶೆಟ್ಟಿ, ಜುಬೇದಾ, ಅಬೂಬಕರ್, ಮುಕುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.