ADVERTISEMENT

ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ: ದಿನವಿಡಿ ರಸ್ತೆ ತಡೆ

ಶಾಸಕರು, ಅಧಿಕಾರಿಗಳಿಗೂ ತಟ್ಟಿದ ಪ್ರತಿಭಟನೆಯ ಬಿಸಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 19:25 IST
Last Updated 22 ಫೆಬ್ರುವರಿ 2026, 19:25 IST
ಕಡಬಗೆರೆಯಲ್ಲಿನ ಚಿಕ್ಕಮಗಳೂರು–ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಮಧ್ಯದಲ್ಲಿ ಶವ ಇಟ್ಟು ಸ್ಥಳೀಯರು ಪ್ರತಿಭಟನೆ ನಡೆಸಿದರು
ಕಡಬಗೆರೆಯಲ್ಲಿನ ಚಿಕ್ಕಮಗಳೂರು–ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಮಧ್ಯದಲ್ಲಿ ಶವ ಇಟ್ಟು ಸ್ಥಳೀಯರು ಪ್ರತಿಭಟನೆ ನಡೆಸಿದರು   

ಚಿಕ್ಕಮಗಳೂರು: ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಹ್ಯಾರಂಬಿಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವಿಜಯನಗರ ಜಿಲ್ಲೆಯ ಕಾರ್ಮಿಕ ಮಹಿಳೆ ಬಲಿಯಾಗಿದ್ದಾರೆ. ಒಂದು ವಾರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಸ್ಥಳೀಯರು ದಿನವಿಡೀ ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಪೊಲೀಸರು ಜನರನ್ನು ಚದುರಿಸಿ ಮೃತದೇಹವನ್ನು ಸ್ಥಳಾಂತರಿಸಿದರು. ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ‌ಗೆದ್ದಲಗಟ್ಟೆ ಕಾಮಯ್ಯನಟ್ಟಿ ಬೋರಮ್ಮ(45) ಮೃತಪಟ್ಟವರು. ನಾಗೇಶ್‌ಗೌಡ ಎಂಬುವರ ತೋಟದಲ್ಲಿ ಕೆಲಸಕ್ಕೆಂದು ಕಾರ್ಮಿಕರು ಭಾನುವಾರ ಬೆಳಿಗ್ಗೆ 9ರ ಸುಮಾರಿನಲ್ಲಿ ಹೋಗಿದ್ದರು. ಬೋರಮ್ಮ ಅವರ ಮೇಲೆ ಆನೆ ದಾಳಿ ನಡೆಸಿದ ಕೂಡಲೇ ಉಳಿದ ಕಾರ್ಮಿಕರು ಅಲ್ಲಿಂದ ಓಡಿ ಹೋಗಿದ್ದಾರೆ.

ಬೋರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ಆಕ್ರೋಶಗೊಂಡ ಸ್ಥಳೀಯರು ಶವವನ್ನು ಕಡಬಗೆರೆಯಲ್ಲಿ ರಸ್ತೆ ಮಧ್ಯ ಇಟ್ಟು ಪ್ರತಿಭಟಿಸಿದ್ದರಿಂದ ಚಿಕ್ಕಮಗಳೂರು– ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಬಂದ ಅಧಿಕಾರಿಗಳು, ಶಾಸಕ ಟಿ.ಡಿ. ರಾಜೇಗೌಡರು ಪ್ರತಿಭಟನಾಕಾರರ ಆಕ್ರೋಶ ಎದುರಿಸಿದರು.

ADVERTISEMENT

‘ನಾಗೇಶಗೌಡ ಅವರ ತೋಟದಲ್ಲಿ ಕಳೆದ ಸೋಮವಾರ ಕಾಡಾನೆ ದಾಳಿ ನಡೆಸಿತ್ತು. ಅಂದು ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಯಲ್ಲಪ್ಪ ಶೇಖಪ್ಪ ಮಾರೇಕ್ಕನವರ ಮೃತಪಟ್ಟಿದ್ದರು. ಮೂರು ದಿನಗಳಿಂದ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ, ಕಾಡಾನೆಗಳು ಬೇರೆ ಕಡೆ ಇವೆ ಎಂದು ಮಾಹಿತಿ ನೀಡಿದ್ದರು. ಆದ್ದರಿಂದ ತೋಟದಲ್ಲಿ ಭಾನುವಾರ ಕೆಲಸ ಆರಂಭಿಸಲಾಗಿತ್ತು. ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದ ಮತ್ತೊಂದು ಜೀವ ಹಾನಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಒಂದು ವರ್ಷದಲ್ಲಿ 9 ಜನ ಸತ್ತಿದ್ದಾರೆ. ಆನೆಗಳ ಕಾಟ ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು. ಅಲ್ಲಿಯ ತನಕ ಪ್ರತಿಭಟನೆ ನಿಲ್ಲದು ಎಂದು ಪಟ್ಟುಹಿಡಿದರು. 

ಕಾಡಾನೆ ಸಮಸ್ಯೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಸಮಾಧಾನಪಡಿಸಲು ಪ್ರಯತ್ನಿಸಿದರೂ ಪ್ರತಿಭಟನೆ ಮುಂದುವರಿಯಿತು. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ದೂರವಾಣಿ ಮೂಲಕವಾದರೂ ಮಾತನಾಡಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದರು.

ಸಂಜೆ ವೇಳೆಗೆ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ಸ್ಥಳಕ್ಕೆ ಬಂದರು. ಅವರ ವಿರುದ್ಧವೂ ಸ್ಥಳೀಯರು ಮುಗಿ ಬಿದ್ದರು. ಇದರ ನಡುವೆ ಮೃತರ ಕುಟುಂಬಕ್ಕೆ ₹20 ಲಕ್ಷ ಪರಿಹಾರ ನೀಡಿದ ಬಳಿಕ ಪೊಲೀಸರು ಆಂಬುಲೆನ್ಸ್‌ನಲ್ಲಿ ಶವ ಸ್ಥಳಾಂತರಿಸಿದರು.

ಇಷ್ಟಾದರೂ ಸ್ಥಳೀಯರು ಪ್ರತಿಭಟನೆ ಮುಂದುವರಿಸಿದ್ದರು. ಬಿಜೆಪಿ ಮುಖಂಡ ಡಿ.ಎನ್. ಜೀವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಸೇರಿ ಕೆಲ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸ್ ವಾಹನವನ್ನೂ ತಡೆಯಲು ಜನರು ಯತ್ನಿಸಿದರು. ಗುಂಪನ್ನು ಪೊಲೀಸರು ಚದುರಿಸಿದರು. ಬಳಿಕ ವಾಹನ ಸಂಚಾರ ಸುಗಮಗೊಂಡಿತು.

ಕಾಡಾನೆ ಸೆರೆ
ಕಡಬಗೆರೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರೆ ಮತ್ತೊಂದೆಡೆ ಆನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಬೆರಣಗೋಡು ಸಮೀಪದ ಕೆರೆಮನೆ ಬಳಿ ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದನ್ನು ವೈದ್ಯರ ತಂಡ ನೀಡಿತು. ಸಾಕಾನೆಗಳ ಮೂಲಕ ಆನೆಯನ್ನು ಲಾರಿಗೆ ಏರಿಸಿ ಸ್ಥಳಾಂತರ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.