
ಚಿಕ್ಕಮಗಳೂರು: ಗಣರಾಜ್ಯೋತ್ಸವ ಅಂಗವಾಗಿ ಜ.26ರಿಂದ 28ರವರೆಗೆ ನಗರದ ಸುಭಾಷ್‌ಚಂದ್ರ ಜಿಲ್ಲಾ ಆಟದ ಮೈದಾನದಲ್ಲಿ ನಡೆಯುವ ಚೈತ್ರೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ.
ಪ್ರದರ್ಶನದಲ್ಲಿ ಭದ್ರಬಾಲ್ಯ ಯೋಜನೆ, ನಾದಲೋಕ ಸೇರಿದಂತೆ ಬಣ್ಣಬಣ್ಣದ ಪುಷ್ಪ ಕಲಾಕೃತಿಗಳ ಅನಾವರಣಕ್ಕೆ ಸಿದ್ಧತೆ ನಡೆಯುತ್ತಿದೆ. ಜ.26ರಂದು ಬೆಳಿಗ್ಗೆ 10 ಗಂಟೆಗೆ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸುವರು.
ಪ್ರವಾಸಿಗರನ್ನ ಸೆಳೆಯಲು ಮುಖ್ಯ ದ್ವಾರದಲ್ಲಿ ಕಾಫಿ ಹಣ್ಣು, ಕಾಫಿ ಹೂ, ಕಾಫಿ ಎಲೆ ಸ್ವಾಗತ ಕೋರುವಂತೆ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಲವ್ ಚಿಕ್ಕಮಗಳೂರು ಎಂದು ಬೃಹತ್ ನಾಮಫಲಕ, ತೆಂಗಿನ ಗರಿಗಳನ್ನು ಬಳಕೆ ಮಾಡಿ ಜಾನೂರು ಆರ್ಟ್ ಬಳಕೆ ಮಾಡಿರುವ ಕಲಾಕೃತಿ ಗಮನ ಸೆಳೆಯುತ್ತಿವೆ.
ವಿವಿಧ ಬಣ್ಣಗಳ ಸುಮಾರು 8 ಸಾವಿರ ಹೂಕುಂಡಗಳ ಜೋಡಣೆ, ಇಕೇಬಾನ ಮಾದರಿಯ ಹೂವಿನ ಜೋಡಣೆ, ಸೇವಂತಿಗೆ, ಗುಲಾಬಿ ಸೇರಿದಂತೆ ಬಣ್ಣ ಬಣ್ಣದ ಹೂವುಗಳಿಂದ ಕಲಾಕೃತಿ ನಿರ್ಮಾಣ ಸಾಗಿದೆ.
ಪಿಯಾನೊ, ಗಿಟಾರ್, ವಯಲಿನ್, ವೀಣೆ, ಬೃಹತ್ ಡಾಲ್ಫಿನ್ ಮೀನು, ಟಾಮ್ಜ ಅಂಡ್ ಜೆರಿ, ಬಣ್ಣ ಬಣ್ಣದ ಚಿಟ್ಟೆಗಳ ಪ್ರತಿರೂಪಗಳು ಹೂವುಗಳಲ್ಲಿ ಸಿದ್ಧಗೊಳ್ಳುತ್ತಿವೆ.
ಸಿರಿಧಾನ್ಯಗಳಿಂದ ಶಾರದಾಂಬೆ ಮೂರ್ತಿ, ಸಾಲುಮರದ ತಿಮ್ಮಕ್ಕ ಹಾಗೂ ಕರ್ನಾಟಕ ನಕ್ಷೆ ಅನಾವರಣಗೊಳ್ಳಲಿದೆ. ಪುರಾತನ ಕಾಲದಲ್ಲಿ ಬಳಸಿದ ಕರಾವಳಿ ಭಾಗದ ಸಾಮಗ್ರಿಗಳ ಪ್ರದರ್ಶನ, ರೈತರು ಬಳಕೆ ಮಾಡುವ ನೇಗಿಲು, ಕೂರಿಗೆ, ನೊಗ ಸೇರಿದಂತೆ ವಿವಿಧ ಕೃಷಿ ಬಳಕೆಯ ವಸ್ತುಗಳನ್ನು ಪ್ರದರ್ಶದಲ್ಲಿ ಇಡಲಾಗುವುದು.
ತರಕಾರಿಗಳಲ್ಲಿ ಪ್ರಾಣಿ-ಪಕ್ಷಿಗಳ ಕೆತ್ತನೆಯ ಕಲಾಕೃತಿಗಳು, ಬುದ್ಧ, ಬಸವಣ್ಣ, ಗಾಂಧಿಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರು, ಮಹಿಳಾ ಸಾಧಕಿಯರು, ಕ್ರೀಡಾ ಸಾಧಕರು ಸೇರಿದಂತೆ ಹಲವು ಕಲಾಕೃತಿಗಳ ರಚನೆ ನಡೆಯುತ್ತಿದೆ.
ಫಲಪುಷ್ಪ ಪ್ರದರ್ಶನದಲ್ಲಿ ವಿದೇಶಿ ಹಣ್ಣು, ತರಕಾರಿಗಳು, ವಿವಿಧ ಖಾದ್ಯಗಳು, ಇಳಕಲ್, ಮೊಳಕಾಲ್ಮುರು, ಕಂಚಿಯ ಸೀರೆ ಹಾಗೂ ಇತರ ವಸ್ತುಗಳ ಮಳಿಗೆಗಳಿಗೆ ಅವಕಾಶ ನೀಡಲಾಗಿದ್ದು ಮಾರಾಟ ಹಾಗೂ ಪ್ರದರ್ಶನಕ್ಕೆ ಮಳಿಗೆಗಳು ಸಿದ್ಧವಾಗಿವೆ.
ಆರೋಗ್ಯ ಇಲಾಖೆ, ಕೃಷಿಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ, ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳುವಿನ ಜೀವನ ಚಕ್ರದ ಪ್ರಾತ್ಯಕ್ಷಿಕೆ, ಕಾಫಿ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ನಡೆಯಲಿದೆ.
ಹಳೆಯ ಹಾಗೂ ಅನುಪಯುಕ್ತ ಟೈರ್ ವಸ್ತುಗಳಿಂದ ಕಸದಿಂದ ಆಕರ್ಷಕ ಕಲಾಕೃತಿಗಳನ್ನು ನಿರ್ಮಾಣ ಮಾಡಿ ಜನರಲ್ಲಿ ಅನುಪಯುಕ್ತ ವಸ್ತುಗಳ ಮರು ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಕಲಾಕೃತಿ ನಿರ್ಮಾಣ ಮಾಡುವ ಕಲಾವಿದರಿಂದ ಈ ಚೈತ್ರೋತ್ಸವ ಫಲಪುಷ್ಪ ಪ್ರದರ್ಶನ ಕಲಾಕೃತಿಗಳು ನಿರ್ಮಾಣ ಮಾಡಲಾಗುತ್ತಿದೆ.
ಭದ್ರಬಾಲ್ಯ ಯೋಜನೆ, ನಾದಲೋಕ ಸೇರಿದಂತೆ ಇತರ ಕಲಾಕೃತಿಗಳ ಅನಾವರಣಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಪ್ರವಾಸಿಗರು ಪ್ರತಿ ವರ್ಷದಂತೆ ಈ ಬಾರಿಯೂ ಬಣ್ಣಬಣ್ಣದ ಹೂವು, ತರಕಾರಿಗಳ ಕಲಾಕೃತಿಗಳನ್ನು ಕಣ್ಣತುಂಬಿಕೊಂಡು ಸಂಭ್ರಮಿಸಬೇಕು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಕಿ ಮಂಗಳ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.