
ಚಿಕ್ಕಮಗಳೂರು: 25 ವರ್ಷ ಪೂರೈಸಿರುವ ಚಿಕ್ಕಮಗಳೂರು ಗಾಲ್ಫ್ ಕ್ಲಬ್ (ಸಿಜಿಸಿ) ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಮೊದಲ ದಿನದ ಕಾರ್ಯಕ್ರಮದಲ್ಲಿ ಕಾಫಿ ಟೇಬಲ್ ಬುಕ್ ಬಿಡುಗಡೆ ಮಾಡಲಾಯಿತು.
ಪುಸ್ತಕ ಬಿಡುಗಡೆ ಮಾಡಿದ ಉದ್ಯಮಿ, ಎನ್ಆರ್‌ಐ ರೊನಾಲ್ಡ್ ಕುಲಾಸೊ ಮಾತನಾಡಿ, ‘ಯಾವುದೇ ಕೆಲಸಕ್ಕೂ ದೇವರ ಅನುಗ್ರಹ ಇರಬೇಕು, ಇಲ್ಲದಿದ್ದರೆ ಏನು ನಡೆಯುವುದಿಲ್ಲ. ಕಳಸ ಹೋಬಳಿ ಹಿರೇಬೈಲು ಗ್ರಾಮದ ನನಗೆ ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆತಿರುವುದು ಪುಣ್ಯದ ಕೆಲಸ’ ಎಂದರು.
82 ಎಕರೆ ಜಾಗದಲ್ಲಿ ಗಾಲ್ಫ್ ಕ್ಲಬ್ ನಿರ್ಮಾಣ ಮಾಡಿರುವುದು ಅತ್ಯಂತ ದೊಡ್ಡ ಕೆಲಸ. ಭೂಮಿ ಪಡೆಯಲು ಏನೆಲ್ಲಾ ಕಷ್ಟಗಳಿವೆ ಎಂಬುದು ಬಿಲ್ಡರ್ ಆಗಿರುವ ನನಗೆ ಗೊತ್ತಿದೆ. ಕಾಫಿ ತೋಟಗಳು, ಗುಡ್ಡಗಾಡುಗಳ ನಡುವೆ ಗಾಲ್ಫ್ ಕ್ಲಬ್ ಕಟ್ಟಿರುವ ಸುದರ್ಶನ್ ಮತ್ತು ತಂಡದ ಕೆಲಸ ಸಾರ್ಥಕವಾದದ್ದು ಎಂದು ಬಣ್ಣಿಸಿದರು.
ಕ್ಲಬ್ ಈಗ 25 ವರ್ಷ ಪೂರ್ಣಗೊಂಡಿದ್ದು, ಇದರ ಹಿಂದಿನ ಶ್ರಮಕ್ಕೆ ಸುದರ್ಶನ್ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಿದರೂ ಕಡಿಮೆ. ಸುದರ್ಶನ್ ಅವರ ಕುಟುಂಬ ಇಂತಹ ಸಮಾಜ ಸೇವೆಯಲ್ಲಿ ಸದಾ ಮುಂದಿದೆ. ಅರಳುಗುಪ್ಪೆ ಕುಟುಂಬ ಚಿಕ್ಕಮಗಳೂರಿನಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ದಾಖಲಿಸಿದೆ. ಸುದರ್ಶನ್ ಅವರ ಪೂರ್ವಜರ ದೇಹ ಇಲ್ಲವಾಗಿರಬಹುದು. ಅರುಳುಗುಪ್ಪೆ ಕುಟುಂಬದವರ ಹೆಸರು ಜೀವಂತ ಇದೆ. ಶಾಲೆ, ಆಸ್ಪತ್ರೆ, ಕಾಲೇಜುಗಳು ಅವರ ಹೆಸರು ಹೇಳುತ್ತಿವೆ ಎಂದು ತಿಳಿಸಿದರು.
ಸುದರ್ಶನ್ ಅವರ ತಂದೆ ಬಸವೇಗೌಡ ಶಾಸಕರಾಗಿದ್ದರು. ಬಳಿಕ ಅವರ ಮಕ್ಕಳು ರಾಜಕೀಯದಿಂದ ದೂರ ಉಳಿದರು. ತಾಯಿ ಗೌರಮ್ಮ ಅವರು ಮಕ್ಕಳಲ್ಲಿ ಮೌಲ್ಯಗಳನ್ನು ತುಂಬಿದರು. ಅವರ ಹಾದಿಯಲ್ಲೇ ಮಕ್ಕಳು ನಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಗಾಲ್ಫ್ ಕ್ಲಬ್ ಇಂದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಕ್ಲಬ್‌ಗಾಗಿ ಅಂದು ದುಡಿದವರು ಮತ್ತು ಇಂದು ಸಹಕಾರ ನೀಡುತ್ತಿರುವ ಎಲ್ಲರಿಗೂ ಅಭಿನಂದನೆಗಳು ಎಂದರು.
ಕ್ಲಬ್ ಆರಂಭಿಸುವ ವೇಳೆ ಕೆಲ ರಾಜಕಾರಣಿಗಳು ಕಿರಿಕಿರಿ ಮಾಡಿದ್ದರು. ಒಳ್ಳೆಯ ಕೆಲಸಕ್ಕೆ ಯಾರೂ ಅಡ್ಡಿ ಮಾಡಬಾರದು. ಎರಡು ದಿನಗಳ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಾವೆಲ್ಲರೂ ಸೇರಿದ್ದೇವೆ. ಸುವರ್ಣ ಮಹೋತ್ಸವದಲ್ಲೂ ನಾವೆಲ್ಲರೂ ಭಾಗವಹಿಸುವಂತಾಗಲಿ ಎಂದು ಅವರು ಹೇಳಿದರು.
ಇದೇ ವೇಳೆ ಎ.ಬಿ.ಸುದರ್ಶನ್ ಕುಟುಂಬದವರು ಸೇರಿ 51 ಟ್ರಸ್ಟಿಗಳನ್ನು ಇದೇ ವೇಳೆ ಅಭಿನಂದಿಸಲಾಯಿತು.
ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ, ಕೆಎಸ್ ಸಿಎ ಮಾಜಿ ಅಧ್ಯಕ್ಷ ಬ್ರಿಜೇಶ್ ಪಟೇಲ್, ನಿವೃತ್ತ ಐಪಿಎಸ್ ಅಧಿಕಾರಿ ಪರಶಿವಮೂರ್ತಿ, ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಎ.ಬಿ.ಸುದರ್ಶನ್, ಕ್ಯಾಪ್ಟನ್ ಎ.ಬಿ.ರವಿಶಂಕರ್ ಭಾಗವಹಿಸಿದ್ದರು.
ಕ್ಲಬ್‌ಗೆ ನಾನು ಅಧ್ಯಕ್ಷನಾದರೂ ಎಲ್ಲ ಟ್ರಸ್ಟಿಗಳ ಸಹಕಾರ ಮುಖ್ಯವಾಗಿತ್ತು. ಈ ಕಾರಣದಿಂದಲೇ ಕ್ಲಬ್ ಬೆಳ್ಳಿ ಹಬ್ಬ ಆಚರಿಸುತ್ತಿದೆ.– ಎ.ಬಿ.ಸುದರ್ಶನ್, ಚಿಕ್ಕಮಗಳೂರು ಗಾಲ್ಫ್ ಕ್ಲಬ್ ಅಧ್ಯಕ್ಷ
ಇನ್ನೂ ಎರಡು ದಿನ ಕಾರ್ಯಕ್ರಮ
ಕ್ಲಬ್‌ನ ಬೆಳ್ಳಿ ಹಬ್ಬದ ಕಾರ್ಯಕ್ರಮಗಳು ಇನ್ನೂ ಎರಡು ದಿನ ನಡೆಯಲಿವೆ. ಶನಿವಾರ ಸಂಜೆ 6.30ಕ್ಕೆ ನಡೆಯುವ ಬೆಳ್ಳಿ ಹಬ್ಬದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭಾನುವಾರ ಕೂಡ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.