ADVERTISEMENT

ಚಿಕ್ಕಮಗಳೂರು: ಗ್ರಾಮೀಣ ತೆರಿಗೆ ಸಂಗ್ರಹದಲ್ಲಿ ದಾಖಲೆ

ಗ್ರಾಮ ಪಂಚಾಯಿತಿಗಳಲ್ಲಿ ₹33.67 ಕೋಟಿ ತೆರಿಗೆ ಸಂಗ್ರಹ

ವಿಜಯಕುಮಾರ್ ಎಸ್.ಕೆ.
Published 10 ಏಪ್ರಿಲ್ 2025, 8:34 IST
Last Updated 10 ಏಪ್ರಿಲ್ 2025, 8:34 IST
ಎಚ್.ಎಸ್.ಕೀರ್ತನಾ
ಎಚ್.ಎಸ್.ಕೀರ್ತನಾ   

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರಿಗೆ ಸಂಗ್ರಹದಲ್ಲಿ ಈ ಬಾರಿ ದಾಖಲೆ ನಿರ್ಮಾಣವಾಗಿದೆ. ಮೊದಲ ಬಾರಿಗೆ ಶೇ 100ಕ್ಕೂ ಹೆಚ್ಚು ಸಾಧನೆಯಾಗಿದ್ದು, ₹33.67 ಕೋಟಿ ಸಂಗ್ರಹವಾಗಿದೆ.

ಕಂದಾಯ ವಸೂಲಿಯಲ್ಲಿ ಹಿಂದೆ ಬಿದ್ದಿದ್ದ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಈ ಬಾರಿ ರಾಜ್ಯದಲ್ಲಿ 3ನೇ ಸ್ಥಾನಕ್ಕೆ ಪುಟಿದಿದೆ. ಜಿಲ್ಲೆಯ 9 ತಾಲ್ಲೂಕುಗಳಲ್ಲಿ ಒಟ್ಟು 226 ಗ್ರಾಮ ಪಂಚಾಯಿತಿಗಳಿವೆ. ₹31.71 ಕೋಟಿ ತೆರಿಗೆ ವಸೂಲಿ ಗುರಿ ಹೊಂದಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ₹33.67 ಕೋಟಿ ಸಂಗ್ರಹವಾಗಿದ್ದು, ಶೇ 106.7ರಷ್ಟು ಸಾಧನೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ.

2022-23ರಲ್ಲಿ ಶೇ 77.52, 2023-24ರಲ್ಲಿ ಶೇ 50.63ರಷ್ಟು ಮಾತ್ರ ಸಾಧನೆಯಾಗಿತ್ತು. ಈ ಬಾರಿ ಸರ್ಕಾರದ ಮಾರ್ಗಸೂಚಿ ಪ್ರಕಾರ ವಿಶೇಷ ಸಭೆಗಳು, ವಿಭಿನ್ನ ಪ್ರಯತ್ನಗಳ ಮೂಲಕ ಗುರಿ ಮೀರಿದ ಸಾಧನೆಯಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ADVERTISEMENT

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೋಂಸ್ಟೇ, ರೆಸಾರ್ಟ್ ಸೇರಿ ಹಲವು ಪ್ರವಾಸಿ ತಾಣಗಳಿವೆ. ಕಟ್ಟಡ, ನಿವೇಶನ, ಅಂಗಡಿ ಮಳಿಗೆಗಳು ಸಹ ಈಗ ಹೆಚ್ಚಾಗುತ್ತಿವೆ. ಕಂದಾಯ ವಸೂಲಿ ಬಗ್ಗೆ ಅಷ್ಟಾಗಿ ಆಸಕ್ತಿ ವಹಿಸದ ಕಾರಣ ಸಂಗ್ರಹ ಕಡಿಮೆಯಾಗಿತ್ತು. ಕಂದಾಯ ಬಾಕಿ ಹಲವು ವರ್ಷಗಳಿಂದ ಮುಂದುವರಿಯುತ್ತಲೇ ಇತ್ತು.

ಈ ಬಾರಿ ಕಂದಾಯ ವಸೂಲಾತಿ ಸಪ್ತಾಹದ ಜತೆಗೆ ತಾಲ್ಲೂಕಿಗೆ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡಲಾಯಿತು. ಆದ್ಯತೆ ಮೇರೆಗೆ ಹೋಂಸ್ಟೇ, ರೆಸಾರ್ಟ್, ಹೊಟೇಲ್, ಅಂಗಡಿ ಸೇರಿದಂತೆ ಸಣ್ಣ ಸಣ್ಣ ಕೈಗಾರಿಕೆಗಳಿರುವ ಪ್ರದೇಶಗಳನ್ನು ಗುರುತಿಸಿ ಅವರಿಂದ ತೆರಿಗೆ ವಸೂಲಿ ಮಾಡಲಾಯಿತು ಎಂದು ಅವರು ವಿವರಿಸಿದರು.

ಮಲೆನಾಡು ಭಾಗದಲ್ಲಿ ತೆರಿಗೆ ಸಂಗ್ರಹ ಉತ್ತಮವಾಗಿತ್ತು. ಆದರೆ, ಈ ಬಾರಿ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕಿನಲ್ಲಿಯೂ ತೆರಿಗೆ ಸಂಗ್ರಹವಾಗಿದೆ. ಸಿಬ್ಬಂದಿಯ ಶ್ರಮ ಮತ್ತು ಜನರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಹೇಳುತ್ತಾರೆ.

ಸ್ಥಳೀಯ ಅಭಿವೃದ್ಧಿಗೆ ಬಳಕೆ

ಈ ಬಾರಿ ದಾಖಲೆ ರೀತಿಯಲ್ಲಿ ಕಂದಾಯ ವಸೂಲಿಯಾಗಿದೆ. ಈ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವುದಿಲ್ಲ. ಆಯಾ ಗ್ರಾಮ ಪಂಚಾಯಿತಿ ಹಣವನ್ನು ಆ ವ್ಯಾಪ್ತಿಯ ಅಭಿವೃದ್ಧಿಗೆ ಬಳಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಹೇಳಿದರು. ‘ವಿದ್ಯುತ್ ದೀಪ ಸಿಬ್ಬಂದಿಗಳ ವೇತನ ಕುಡಿಯುವ ನೀರು ನೈರ್ಮಲ್ಯ ಹಾಗೂ ಕಚೇರಿ ನಿರ್ವಹಣೆ ಜತೆಗೆ ಅಭಿವೃದ್ಧಿ ಕೆಲಸಕ್ಕೆ ಬಳಕೆಯಾಗಲಿದೆ. ಕಂದಾಯ ವಸೂಲಿ ಆಂದೋಲನಕ್ಕೆ ಜಿಲ್ಲೆಯ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಜತೆಗೆ ಅಧ್ಯಕ್ಷರು ಸದಸ್ಯರು ಸಹಕಾರ ನೀಡಿದರು. ಒಟ್ಟಾಗಿ ಕೆಲಸ ಮಾಡಿದ್ದರಿಂದ ಯಶಸ್ಸು ದೊರೆತಿದೆ’ ಎಂದು ‘‍ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.