ADVERTISEMENT

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮತ್ತೆ ಆರಂಭವಾದ ಮಳೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 3:13 IST
Last Updated 29 ಆಗಸ್ಟ್ 2025, 3:13 IST
ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಕೊಡೆ ಹಿಡಿದು ಸಾಗುತ್ತಿರುವ ಜನ
ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಕೊಡೆ ಹಿಡಿದು ಸಾಗುತ್ತಿರುವ ಜನ   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.

ಮೂಡಿಗೆರೆ, ಕೊಟ್ಟಿಗೆಹಾರ, ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಕಳಸ ಭಾಗದಲ್ಲಿ ಬುಧವಾರ ರಾತ್ರಿಯಿಂದ ಮಳೆ ಆರಂಭವಾಗಿತ್ತು. ಚಿಕ್ಕಮಗಳೂರು ನಗರದಲ್ಲಿ ಗುರುವಾರ ಬೆಳಿಗ್ಗೆಯೇ ಧಾರಾಕಾರವಾಗಿ ಮಳೆ ಸುರಿಯಿತು.‌

ಮಧ್ಯಾಹ್ನದ ತನಕ ಕೊಂಚ ಬಿಡುವು ನೀಡಿದ್ದ ಮಳೆ ಸಂಜೆ ವೇಳೆಗೆ ಮತ್ತೆ ಆರಂಭವಾಗಿ ಆರ್ಭಟಿಸಿತು. ಕಾಫಿ ಕೊಳೆ ರೋಗದ ಭೀತಿಯಲ್ಲಿ ಬೆಳೆಗಾರರಿದ್ದು, ಮತ್ತೆ ಮಳೆ ಆರಂಭವಾಗಿರುವುದು ಆತಂಕ ತರಿಸಿದೆ. ತರೀಕೆರೆ, ಅಜ್ಜಂಪುರ ತಾಲ್ಲೂಕಿನಲ್ಲಿ ಮಳೆ ಬಿರುಸುಗೊಂಡಿದ್ದು. ಅಡಿಕೆ ಕೊಯ್ಲಿಗೆ ತೊಂದರೆಯಾಗಿದೆ. ಈರುಳ್ಳಿ, ಆಲೋಗೆಡ್ಡೆ ಬೆಳೆದ ರೈತರು ಕೂಡ ಆರಂಕದಲ್ಲಿದ್ದಾರೆ.

ADVERTISEMENT
ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮದ ಧರಣೇಶ ಎಂಬುವರ ಮನೆಯ ಗೋಡೆ ಕುಸಿದು ಹಾನಿಯಾಗಿರುವುದು

ಎರಡು ದಿನಗಳಿಂದ ಉತ್ತಮ ಮಳೆ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿದೆ. ನಿರಂತರವಾಗಿ ಸುರಿದ ಮಳೆಗೆ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮದ ಧರಣೇಶ ಎಂಬುವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಸೋಮವಾರ ಬಿಸಿಲಿನ ವಾತಾವರಣವಿತ್ತು. ಮಂಗಳವಾರ ಬೆಳಿಗ್ಗೆಯಿಂದ ಆರಂಭವಾದ ಮಳೆ ಆಗಾಗ ಬಿಡುವು ನೀಡಿ ಸುರಿಯುತ್ತಿದೆ.

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆ ತನಕ ಉತ್ತಮ ಮಳೆಯಾಗಿತ್ತು. ಕೊಂಚ ಬಿಡುವು ನೀಡಿ ಮಧ್ಯಾಹ್ನದಿಂದ ನಿರಂತರವಾಗಿ ಮಳೆ ಸುರಿಯಿತು. ಗುರುವಾರ ಬೆಳಿಗ್ಗೆ ಕೊಂಚ ಬಿಡುವು ನೀಡಿದ್ದ ಮಳೆ ಮಧ್ಯಾಹ್ನ ಹಾಗೂ ಸಂಜೆ 6ರ ವೇಳೆಗೆ ಜೋರಾಗಿ ಸುರಿಯಿತು. ನಂತರವೂ ಮಳೆ ಮುಂದುವರಿದಿತ್ತು.

ಗುರುವಾರ  ಬೆಳಿಗ್ಗೆ ತನಕ ನರಸಿಂಹರಾಜಪುರದಲ್ಲಿ 1.56 ಸೆಂ.ಮೀ ಬಾಳೆಹೊನ್ನೂರಿನಲ್ಲಿ 2.80 ಸೆಂ.ಮೀ ಹಾಗೂ ಮೇಗರಮಕ್ಕಿ 2 ಸೆಂ.ಮೀ ಮಳೆಯಾಗಿದೆ.

ಅಬ್ಬರದ ಮಳೆ

ಆಲ್ದೂರು: ಗುರುವಾರ ನಸುಕಿನಿಂದ ಪ್ರಾರಂಭವಾದ ಮಳೆ ಹಗಲು ಪೂರ್ತಿ ನಿರಂತರವಾಗಿ ಸುರಿದಿಯಿತು. ಆಲ್ದೂರು ವಸ್ತಾರೆ ಆವತಿ ಹೋಬಳಿಗಳ ಗ್ರಾಮಗಳಲ್ಲಿ ಬನ್ನೂರು ಮಾಗೋಡು ಹೊಸಳ್ಳಿ ಸತ್ತಿಹಳ್ಳಿ ಯಲಗುಡಿಗೆ ಗುಲ್ಲನ್ ಪೇಟೆ ಹಾಂದಿ ಕೂದುವಳ್ಳಿ ಆಲ್ದೂರುಪುರ ತೋರಣ ಮಾವು ಹಂಗರವಳ್ಳಿ ಬೈಗೂರು ಬಿರುಸಿನ ಮಳೆಯಾಗಿದ್ದು ಮಳೆ ಪ್ರಮಾಣ 2 ಇಂಚಿಗೂ ಅಧಿಕಗಿ ದಾಖಲಾಗಿದೆ.

ವಿಪರೀತ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದ್ದು ಕಾಫಿ ಗಿಡಗಳಲ್ಲಿ ಕೊಳೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕಾಳುಮೆಣಸು ಬಳ್ಳಿಗಳು ರೋಗಗಳಿಗೆ ತುತ್ತಾಗುವ ಆತಂಕ ಬೆಳೆಗಾರರನ್ನು ಮತ್ತೆ ಕಾಡುತ್ತಿದೆ ಎಂದು ಕಾಫಿ ಬೆಳೆಗಾರ ರವಿಕುಮಾರ್ ಎಚ್‌.ಎಲ್‌. ತಿಳಿಸಿದರು.

ಆಲ್ದೂರು ಸಮೀಪದ ಮೇಲ್ ಬನ್ನೂರು ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ನೀರು ಹರಿಯುತ್ತಿರುವುದು

ಚುರುಕುಗೊಂಡ ಮಳೆ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಮಳೆ‌ ಚುರುಕಾಗಿದ್ದು ಗುರುವಾರ ಇಡೀ ದಿನ‌ ಜಿಟಿಜಿಟಿಯಾಗಿ ಸುರಿಯಿತು. ನಸುಕಿನಿಂದ ಬಿಡುವು ನೀಡಿದ್ದ ಮಳೆ ಬೆಳಿಗ್ಗೆ 9ರ ಸುಮಾರಿಗೆ ಒಂದು ಗಂಟೆಗೂ ಹೆಚ್ಚುಕಾಲ ಧಾರಾಕಾರವಾಗಿ ಸುರಿದು‌ ಜನಜೀವನ ಅಸ್ತವ್ಯಸ್ತಗೊಳಿಸಿತು. ಶಾಲೆ ಪ್ರಾರಂಭದ ವೇಳೆಯಲ್ಲೇ ಮಳೆ‌ ಹೆಚ್ಚಾಗಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡಿದರು.

ಗೋಣಿಬೀಡು ಗ್ರಾಮದಲ್ಲಿ ವಾರದ ಸಂತೆಗೂ ಮಳೆ‌ ಅಡ್ಡಿಯಾಯಿತು. ಮಳೆಯಿಂದ ಕಾಫಿ ತೋಟಗಳಲ್ಲಿ ಚಟುವಟಿಕೆಗಳು ಸ್ಥಬ್ದವಾಗಿದ್ದರೆ ಭತ್ತದ ಗದ್ದೆಗಳಲ್ಲಿ ಮಳೆಯ ನಡುವೆ ನಾಟಿ ಕಾರ್ಯ ಮುಂದುವರೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.