ADVERTISEMENT

ಚಿಕ್ಕಮಗಳೂರು| ಅಪರಿಚಿತವಾಗಿ ಉಳಿದ ತಾಣಗಳು: ಸಂಪರ್ಕವಿಲ್ಲದೆ ಪ್ರವಾಸಿಗರಿಂದ ದೂರ

ವಿಜಯಕುಮಾರ್ ಎಸ್.ಕೆ.
Published 13 ಅಕ್ಟೋಬರ್ 2025, 4:17 IST
Last Updated 13 ಅಕ್ಟೋಬರ್ 2025, 4:17 IST
ಕಳಸ ತಾಲ್ಲೂಕಿನ ಸಂಸೆ ಗ್ರಾಮದ ಅಜ್ಜಿಗುಡ್ಡೆ ಪ್ರದೇಶ
ಕಳಸ ತಾಲ್ಲೂಕಿನ ಸಂಸೆ ಗ್ರಾಮದ ಅಜ್ಜಿಗುಡ್ಡೆ ಪ್ರದೇಶ   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇರುವ ಪ್ರಸಿದ್ಧ ಪ್ರವಾಸಿ ತಾಣಗಳ ಜತೆಗೆ ಬೆಳಕಿಗೆ ಬಾರದ ಪ್ರವಾಸಿ ತಾಣಗಳೂ ಸಾಕಷ್ಟಿವೆ. ಆದರೆ, ಅವುಗಳಿಗೆ ದಾರಿ ಸೇರಿ ಮೂಲ ಸೌಕರ್ಯ ಇಲ್ಲದೆ ಜನರಿಂದ ದೂರವಾಗಿವೆ. 

ಚಿಕ್ಕಮಗಳೂರು ಎಂದ ಕೂಡಲೇ ಮುಳ್ಳಯ್ಯನಗಿರಿ ಒಂದೇ ಪ್ರವಾಸಿ ತಾಣ ಎಂಬಂತಾಗಿದೆ. ಇಡೀ ಜಿಲ್ಲೆಯೇ ಪ್ರವಾಸಿ ತಾಣದಂತಿದ್ದು, ಹಲವು ಸ್ಥಳಗಳು ಜನರಿಂದ ದೂರ ಉಳಿದಿವೆ.

ಜಿಲ್ಲಾ ಕೇಂದ್ರದಿಂದ 24 ಕಿಲೋ ಮೀಟರ್ ದೂರದಲ್ಲಿ ಕಾಮೇನಹಳ್ಳಿ ಜಲಪಾತ ಇದೆ. ಮಲ್ಲೇನಹಳ್ಳಿ ಅಥವಾ ಸಖರಾಯಪಟ್ಟಣ ಮಾರ್ಗವಾಗಿ ತಲುಪಬಹುದು. ಪ್ರಕೃತಿ ಪ್ರಿಯರಿಗೆ ಮತ್ತು ಚಾರಣ ಪ್ರಿಯರಿಗೆ ಉತ್ತಮ ತಾಣ. ಇದು ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಮಳೆ ಬಂದಾಗ ತುಂಬಿ ಹರಿಯುತ್ತದೆ.

ADVERTISEMENT

ವಜ್ರಾಕಾರದ ಬಂಡೆಗಳ ಮೇಲೆ ಜಲಧಾರೆ ಹರಿಯುವುದರಿಂದ ಡೈಮಂಡ್ ಫಾಲ್ಸ್ ಎಂದೂ ಕರೆಯಲಾಗುತ್ತದೆ. ಕಾಡಿನ ನಡುವೆ ಕೊಂಚ ನಡೆದು ಸಾಗಬೇಕಿದೆ. ಅಷ್ಟೇನು ಜನಪ್ರಿಯವಾಗಿಲ್ಲ, ರಸ್ತೆ ಸೇರಿ ಯಾವುದೇ ಸೌಕರ್ಯ ಇಲ್ಲ.

ಇನ್ನು ಅಯ್ಯನಕೆರೆ ಸಮೀಪದ ಶಕುನಗಿರಿ ಗುಡ್ಡ ಚಾರಣಿಗರ ಅಚ್ಚುಮೆಚ್ಚಿನ ತಾಣ. ಜಿಲ್ಲಾ ಕೇಂದ್ರದಿಂದ 27 ಕಿಲೋ ಮೀಟರ್ ದೂರದಲ್ಲಿದೆ. ದೊಡ್ಡ ಕೋನಾಕಾರದ ಬೆಟ್ಟ ಇದಾಗಿದೆ. ಮೇಲೆ ಹತ್ತಿದರೆ ಸುತ್ತಮುತ್ತಲ ಇಡೀ ಬಯಲು ಸೀಮೆಯಯನ್ನು ಎತ್ತರಿಂದ ನೋಡಬಹುದಾಗಿದೆ. ಪರಿಸರ ಆಸಕ್ತರು ಮಾತ್ರ ಚಾರಣ ತೆರಳುತ್ತಿದ್ದು, ಹೆಚ್ಚಿನ ಪ್ರಚಾರ ದೊರೆತಿಲ್ಲ. 

ಪೂರಕ ಮಾಹಿತಿ: ಎನ್.ಸೋಮಶೇಖರ್, ಕೆ.ವಿ.ನಾಗರಾಜ್, ರವಿ ಕೆಳಂಗಡಿ, ಕೆ.ನಾಗರಾಜ್.

ಹೊರನಾಡು-ಕವನಳ್ಳ ರಸ್ತೆಯ ಹೊಸನೆಲದ ಬಳಿ ಅನಾಮಿಕ ಜಲಪಾತ
ತರೀಕೆರೆ ತಾಲ್ಲೂಕಿನ ಜಂಬದಹಳ್ಳ ಜಲಾಶಯ

ಮೂಡಿಗೆರೆ: ತೆರೆಮರೆಯ ತಾಣ ಸಂತೋಷ್ ಫಾಲ್ಸ್

ತಾಲ್ಲೂಕು ಪ್ರಾಕೃತಿಕ ತಾಣಗಳ ತೊಟ್ಟಿಲಾಗಿದ್ದು ಹಲವಾರು ಆಕರ್ಷಕ ತಾಣಗಳು ಪ್ರವಾಸಿಗರ ಅರಿವಿಗೆ ಬರದೇ ದೂರ ಉಳಿದಿವೆ. ಅಂತಹ ತಾಣಗಳಲ್ಲಿ ಸಂತೋಷ ಫಾಲ್ಸ್ ಕೂಡ ಒಂದಾಗಿದೆ. ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಲೇಮನೆ ಗ್ರಾಮದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಜಲಪಾತಕ್ಕೆ ರಸ್ತೆ ಇಲ್ಲ. ಕಾಲು ದಾರಿಯಲ್ಲಿ ನಡೆದು ಅಥವಾ ಬೈಕ್ ಮೂಲಕ ಸಾಗಬಹುದು. ಆಲ್ದೂರು ಗ್ರಾಮದಿಂದಲೂ ತೆರಳಲು ಮಾರ್ಗವಿದ್ದು ಸತ್ತೀಹಳ್ಳಿ ಗ್ರಾಮದ ಗುಪ್ತಶೆಟ್ಟಿಹಳ್ಳಿ ಮೂಲಕ ತಲುಪಬಹುದಾಗಿದೆ. ಕಡಿದಾದ ಮಾರ್ಗದಲ್ಲಿ ಸಾಗುವ ತಿರುವು ರಸ್ತೆಗಳು ಹಸಿರನ್ನು ಹೊದ್ದ ಬೆಟ್ಟಗುಡ್ಡಗಳು ಮನಸ್ಸಿಗೆ ಹಿತ ಎನಿಸಲಿವೆ. ಅದರಲ್ಲೂ ಮಳೆಗಾಲದಲ್ಲಿ ಸುತ್ತಲೂ ಹರಿಯುವ ಸಣ್ಣಪುಟ್ಟ ಝರಿಗಳು ಇನ್ನಷ್ಟು ಮುದ ನೀಡುತ್ತವೆ. ಚಾರಣ ಪ್ರಿಯರಿಗೆ ಸಂತೋಷ್ ಫಾಲ್ಸ್ ಸೂಕ್ತ ತಾಣವಾಗಿದ್ದು ಇಲ್ಲಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ಕಂಚಿಕಲ್ ಗುಡ್ಡಕ್ಕೂ ಇಲ್ಲಿಂದ ಚಾರಣ ಹೋಗಬಹುದು. ಚಾರಣ ಮಾರ್ಗದ ಕೆಲ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ. ಅರಣ್ಯ ಇಲಾಖೆ ಅನುಮತಿಯೊಂದಿಗೆ ಚಾರಣ ಮಾರ್ಗ ಆರಂಭಿಸಲು ಅವಕಾಶ ಇದೆ. ತಾಲ್ಲೂಕಿನ ಗಡಿ ಗ್ರಾಮವಾದ ಮರಗುಂದದ ಬಳಿಯಿರುವ ಬೆಟ್ಟದ ಭೈರವೇಶ್ವರ ದೇವಾಲಯವೂ ಧಾರ್ಮಿಕ ಪ್ರವಾಸಿ ತಾಣ ಪ್ರವಾಸಿಗರಿಂದ ದೂರ ಉಳಿದಿದೆ. ವಾರಾಂತ್ಯದಲ್ಲಿ ಸ್ಥಳೀಯ ಹೋಂಸ್ಟೇಗಳಿಗೆ ಬರುವ ಕೆಲ ಪ್ರವಾಸಿಗರು ಭೇಟಿ ನೀಡುತ್ತಾರೆ. ಒಂದು ದಿನದ ಪ್ರವಾಸದಲ್ಲಿ ಬೆಟ್ಟದ ಭೈರವೇಶ್ವರ ಎತ್ತಿನಭುಜ ನಾಣ್ಯಭೈರವೇಶ್ವರ ದೇವಾಲಯಗಳಿಗೆ ಭೇಟಿ ನೀಡಲು ಕೂಡ ಅವಕಾಶ ಇದೆ.

ನರಸಿಂಹರಾಜಪುರ: ಜನಸಂಪರ್ಕದಿಂದ ದೂರ ಉಳಿದ ಅಬ್ಬಿಗುಂಡಿ

ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಮಕ್ಕಿ ಗ್ರಾಮದ ಸಮೀಪದ ಅಬ್ಬಿಗುಂಡಿ ಜಲಪಾತ ಜನರನ್ನು ಆಕರ್ಷಿಸುತ್ತಿದ್ದು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಅಬ್ಬಿಗುಂಡಿ ಜಲಪಾತದಲ್ಲಿ ಜೂನ್‌ನಿಂದ ಫೆಬ್ರುವರಿ ತನಕ ದುಮ್ಮುಕ್ಕಿ ಹರಿಯುತ್ತದೆ. ಮಳೆ ಹೆಚ್ಚಿರುವ ಜುಲೈನಿಂದ ಸೆಪ್ಟೆಂಬರ್ ತನಕ ನೀರು ಬೋರ್ಗರೆದು ಹರಿಯುತ್ತದೆ. ಈ ಜಲಪಾಲತದಿಂದ ಹಾಲಿನ ನೊರೆಯಂತೆ ನೀರು ಬಂಡೆಗಳ ಮೇಲೆ ಹರಿದು ಹೋಗುವ ದೃಶ್ಯ ನೋಡುಗರ ಮೈ ರೋಮಾಂಚನಗೊಳಿಸುತ್ತದೆ. ಎಚ್.ಜಿ. ಗೋವಿಂದೇಗೌಡ ಅವರು ಸಚಿವರಾಗಿದ್ದ ಅವಧಿಯಲ್ಲಿ 50 ವರ್ಷಗಳ ಹಿಂದೆ ಈ ಜಲಪಾತ ನಿರ್ಮಾಣವಾಯಿತು. ಕುದುರೆಗುಂಡಿಯಿಂದ ಹರಿದು ಬರುತ್ತಿದ್ದ ಕಪಿಲಾ ಹಳ್ಳಕ್ಕೆ ಅಬ್ಬಿಗುಂಡಿಯಲ್ಲಿ ಸಣ್ಣ ಅಣೆಕಟ್ಟು ನಿರ್ಮಿಸಲಾಯಿತು. ಕಾಲುವೆಗಳ ಮೂಲಕ ಹಲವು ಗ್ರಾಮಗಳ ಜಮೀನಿಗೆ ನೀರು ಒದಗಿಸುವುದು ಈ ಜಲಾಶಯದ ಉದ್ದೇಶ. ಕಿರು ಅಣೆಕಟ್ಟೆ ನಿರ್ಮಾಣವಾದ ಬಳಿಕ ಜಲಪಾತ ನಿರ್ಮಾಣವಾಯಿತು. ಅಬ್ಬಿಗುಂಡಿ ಜಲಪಾತ ವೀಕ್ಷಣೆಗೆ ಹೋಗುವ ಮಾರ್ಗ ಕೆಸರುಮಯವಾಗಿದೆ. ಕಾಂಕ್ರೀಟ್ ಅಥವಾ ಡಾಂಬರ್ ರಸ್ತೆ ನಿರ್ಮಿಸಿ ತಿರುವುಗಳಲ್ಲಿ ನಾಮಫಲಕ ಅಳವಡಿಸಿದರೆ ಪ್ರವಾಸಿಗರಿಗೆ ಹತ್ತಿರವಾಗಲಿದೆ. ಎತ್ತರದಲ್ಲಿ ಬಂಡೆಯ ಮೇಲೆ ನಿಂತು ಜಲಪಾತದ ಸೌಂದರ್ಯ ಸವಿಯಲು ರಕ್ಷಣಾ ಬೇಲಿ ನಿರ್ಮಿಸಿ ಉತ್ತಮ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಅವಕಾಶವಿದೆ. ಬಾಳೆಹೊನ್ನೂರಿನಿಂದ ನರಸಿಂಹರಾಜಪುರಕ್ಕೆ ಬರುವ ಮಾರ್ಗದಲ್ಲಿ ಬಿ.ಎಚ್. ಕೈಮರದಿಂದ ಕೊಪ್ಪಕ್ಕೆ ಹೋಗುವ ಮಾರ್ಗಕ್ಕೆ ತಿರುಗಿ ಕುದುರೆಗುಂಡಿ ಗ್ರಾಮದಿಂದ 2 ಕಿ.ಮೀ ಚಲಿಸಿದರೆ ನಾಗರಮಕ್ಕಿ ಗ್ರಾಮ ಸಿಗುತ್ತದೆ. ಇಲ್ಲಿಂದ 2 ಕಿ.ಮೀ ಮುಂದೆ ಸಾಗಿದರೆ ಈ ಜಲಪಾತ ತಲುಪಬಹುದು ಅಥವಾ ಬಿ.ಎಚ್.ಕೈಮರ ಹಳ್ಳಿ ಬೈಲು ನಾಗರಮಕ್ಕಿ ಮೂಲಕವೂ ಈ ಜಲಪಾತಕ್ಕೆತೆರಳಬಹುದು. ಜಿಲ್ಲಾ ಕೇಂದ್ರದಿಂದ ಸುಮಾರು 112 ಕಿ.ಮೀ ಮತ್ತು ನರಸಿಂಹರಾಜಪುರ ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿ ಈ ಜಲಪಾತವಿದೆ.

ಕಳಸ: ಅಜ್ಜಿಗುಡ್ಡೆ ಎಂಬ ರಮಣೀಯ ಗುಡ್ಡ

ತಾಲ್ಲೂಕಿನ ಸಂಸೆ ಗ್ರಾಮದ ಅಜ್ಜಿಗುಡ್ಡೆ ಪ್ರದೇಶವು ಸಮುದ್ರಮಟ್ಟದಿಂದ ಸುಮಾರು 3700 ಅಡಿ ಎತ್ತರದಲ್ಲಿದೆ. ಎಸ್.ಕೆ. ಮೇಗಲ್ ರಸ್ತೆಯಿಂದ ಒಂದೂವರೆ ಕಿ.ಮೀ ಚಾರಣ ನಡೆಸಿದರೆ ಈ ರಮಣೀಯ ತಾಣ ತಲುಪಬಹುದು. ಈ ಗುಡ್ಡ ಈವರೆಗೂ ಅಪರಿಚತವಾಗಿಯೇ ಇದ್ದು ಅಪರೂಪಕ್ಕೆ ಯುವಜನರು ಚಾರಣ ಕೈಗೊಳ್ಳುತ್ತಾರೆ. ಸುತ್ತಲೂ ಹುಲ್ಲುಗಾವಲು ಶೋಲಾ ಕಾಡು ಮತ್ತು ಅರಣ್ಯ ಪ್ರದೇಶ ಕಣ್ಮನ ಸೆಳೆಯುತ್ತದೆ. ಹೊರನಾಡು-ಕವನಳ್ಳ ರಸ್ತೆಯ ಹೊಸನೆಲದ ಬಳಿ ಅನಾಮಿಕ ಜಲಪಾತವೊಂದು ಧುಮ್ಮಿಕ್ಕುತ್ತಿದೆ. ಮೇರುತಿ ಗುಡ್ಡದ ಒಂದು ಬದಿಯಿಂದ ಹರಿದು ಬರುವ ಹಳ್ಳ ಇಲ್ಲಿ ಜಲಪಾತದ ರೂಪ ಪಡೆಯುತ್ತದೆ. ಬಂಡೆಗಳ ನಡುವೆ ವಯ್ಯಾರದಿಂದ ಬಳುಕುತ್ತಾ ಇಳಿಯುವ ನೀರು ಹಾಲ್ನೊರೆಯನ್ನು ಸೃಷ್ಟಿಸುತ್ತದೆ. ಜನವರಿವರೆಗೂ ಈ ಜಲಪಾತದಲ್ಲಿ ಬಹಳಷ್ಟು ನೀರು ಹರಿಯುತ್ತದೆ.  

ಕಡೂರು: ಚಾರಣಕ್ಕಿಲ್ಲಿ ಹಲವು ಅವಕಾಶ

ತಾಲ್ಲೂಕಿನ ಬಯಲುಸೀಮೆ ಎಂದೇ ಹೆಸರಾದರೂ ಬೆಟ್ಟಗುಡ್ಡಗಳಿಂದ ಆವೃತವಾದ ಹಸಿರಿನಿಂದ ತುಂಬಿದ ಚಾರಣಕ್ಕೆ ಹೇಳಿ ಮಾಡಿಸಿದ ಸಾಕಷ್ಟು ಸ್ಥಳಗಳನ್ನು ಹೊಂದಿದೆ. ಬೀರೂರು ಹೋಬಳಿಯಲ್ಲಿರುವ ಹೊಗರೇ ಕಾನುಗಿರಿ ಜೀವವೈವಿಧ್ಯ ತಾಣ ಎಂದು ಘೋಷಿಸಲ್ಪಟ್ಟಿದೆ. ಬೀರೂರಿಂದ ಲಿಂಗದಹಳ್ಳಿ ರಸ್ತೆಯಲ್ಲಿ ಸಾಗಿದರೆ ಆಲದಹಳ್ಳಿ ಗೇಟ್‌ ಸಿಗುತ್ತದೆ. ಅಲ್ಲಿಂದ ಒಂದು ಮೈಲಿ ಸಾಗಿದರೆ ಹೊಗರೆಹಳ್ಳಿ ಗ್ರಾಮ ಸಿಗುತ್ತದೆ. ಅಲ್ಲಿಂದ ಹೊಗರೆಕಾನುಗಿರಿಗೆ ಸುಮಾರು ನಾಲ್ಕು ಕಿಲೋಮೀಟರ್ ಹಳ್ಳಿ ರಸ್ತೆ ಮೂಲಕ ತೆರಳಿ ನಂತರ ಬೆಟ್ಟವನ್ನು ವಾಹನದ ಮೂಲಕ ಹತ್ತಬಹುದು. ಈ ಮೊದಲು ಹೊಗರೆಕಾನುಗಿರಿಯಲ್ಲಿ ಹಲವರು ಗಣಿಗಾರಿಕೆ ನಡೆಸಲು ಯತ್ನಿಸಿ ಗ್ರಾಮಸ್ಥರ ಹೋರಾಟದ ಫಲವಾಗಿ ಅದಕ್ಕೆ ತಡೆ ಬಿದ್ದಿದೆ. ಸುತ್ತಲೂ ಹಸಿರಿನಿಂದ ಕೂಡಿದ ಹೊಗರೆ ಕಾನುಗಿರಿ ಶ್ರೇಣಿಯು ರಮಣೀಯವಾಗಿದ್ದು ಬೆಟ್ಟದ ಒಂದು ಪಾರ್ಶ್ವದಲ್ಲಿ ಸಿದ್ದೇಶ್ವರಸ್ವಾಮಿ ದೇವಾಲಯವು ಇದೆ. ಅಲ್ಲಿಂದ ಮೇಲ್ಭಾಗದಲ್ಲಿ ಚಾರಣಕ್ಕೆ ತೆರಳಬಹುದು. ಇಲ್ಲಿ ಹಲವು ಔಷಧೀಯ ಸಸ್ಯಗಳು ಲಭ್ಯವಿವೆ ಎನ್ನುವ ಮಾತುಗಳೂ ಇವೆ. ಚಿಕ್ಕಮಗಳೂರಿನಿಂದ ಸಂತವೇರಿ ಮಾರ್ಗವಾಗಿ ಲಿಂಗದಹಳ್ಳಿ ತಲುಪಿ  ಕೂಡ ಹೊರಗೆ ಹಳ್ಳಿಗೆ ಬರಬಹುದಾಗಿದೆ. ಕಂಚುಕಲ್ಲು ಗುಡ್ಡವು ಪ್ರಾಕೃತಿಕವಾಗಿ ಹಸಿರಿನಿಂದ ಕೂಡಿದ್ದು ಸಂರಕ್ಷಿತ ಅರಣ್ಯ ಪ್ರದೇಶದ ಮೇಲೆ ಇರುವ ಒಂದು ಬೆಟ್ಟವಾಗಿದೆ. ಕಡೂರಿನಿಂದ ಪಂಚನಹಳ್ಳಿ ಮಾರ್ಗದಲ್ಲಿ ಸಿಂಗಟಗೆರೆ ತಲುಪಿ ಮಾದಾಪುರ ರಸ್ತೆಯಲ್ಲಿ 3 ಕಿ.ಮೀ ಕ್ರಮಿಸಿದರೆ ಈ ಗುಡ್ಡ ಸಿಗುತ್ತದೆ. ಚಾರಣಕ್ಕೆ ಅನುಕೂಲವಾದ ವಾತಾವರಣವಿದ್ದು ಗುಡ್ಡದ ಮೇಲ್ಭಾಗದಲ್ಲಿ ರಂಗನಾಥಸ್ವಾಮಿ ದೇವಾಲಯ ಇದೆ. ಅಪರೂಪಕ್ಕೆ ಅಲ್ಲಿ ಪೂಜೆಗಳೂ ನಡೆಯುತ್ತವೆ. ಕಡೂರು ಮತ್ತು ಚಿಕ್ಕಮಗಳೂರು ಗಡಿಯಲ್ಲಿರುವ ಸಿಂದಿಗೆರೆ ಗ್ರಾಮದ ಬಳಿ ಇರುವ ಕರಡಿ ಗವಿಮಠ ತಾಲ್ಲೂಕಿನ ಮತ್ತೊಂದು ಪ್ರಾಕೃತಿಕ ಮತ್ತು ಧಾರ್ಮಿಕ ತಾಣ. ಬೆಳಗೆರೆ ಕೃಷ್ಣ ಶಾಸ್ತ್ರಿಗಳು ತಮ್ಮ ‘ಯೇಗ್ದಾಗೆಲ್ಲ ಐತೇ’ ಪುಸ್ತಕದಲ್ಲಿ ಈ ತಾಣದ ಬಗ್ಗೆ ಹಾಗೂ ಇಲ್ಲಿ ಸಾಧನೆ ಮಾಡುತ್ತಿದ್ದ ಕರಡಿ ಗವಿ ಅಜ್ಜಯ್ಯ ಅವರ ಬಗ್ಗೆ ಉಲ್ಲೇಖಿಸಿದ್ದಾರೆ. ಇದೊಂದು ಜಾಗೃತ ತಾಣವೂ ಆಗಿದ್ದು ಗವಿಮಠದ ಕೆಳಭಾಗದಲ್ಲಿ ಅಜ್ಜಯ್ಯನ ಸಮಾಧಿ ಸ್ಥಳವಿದೆ. ಅಲ್ಲಿಂದ ಮೇಲ್ಭಾಗದಲ್ಲಿ ಅವರು ತಪೋ ನಿರತರಾಗಿದ್ದ ಗವಿ ಪ್ರದೇಶವಿದ್ದು ಮೇಲ್ಭಾಗದಲ್ಲಿ ಹುಲ್ಲುಗಾವಲಿನಂತೆ ಗೋಚರಿಸುವ ಗುಡ್ಡಗಾಡು ಕುರುಚಲು ಕಾಡು ಇದೆ. ಕುರುಚಲು ಅರಣ್ಯದಿಂದ ತುಂಬಿ ಸುತ್ತಲೂ ಹಸುರಿನ ವಾತಾವರಣ ಮತ್ತು ಅರಣ್ಯ ಇಲಾಖೆಯ ನೆಡುತೋಪುಗಳನ್ನು ಹೊಂದಿರುವ ಈ ಪ್ರದೇಶ ಚಾರಣಕ್ಕೆ ಯೋಗ್ಯವಾಗಿದೆ. ಕಡೂರಿನಿಂದ ಸಿಂದಿಗೆರೆಗೆ ಬೆರಳೆಣಿಕೆಯಷ್ಟು ಬಸ್ ಇವೆ. ಚಿಕ್ಕಮಗಳೂರು ಕಡೆಯಿಂದಲೂ ಬೆಳವಾಡಿ ಮಾರ್ಗವಾಗಿ ಸಿಂದಿಗೆರೆ ತಲುಪಬಹುದು. ರಸ್ತೆ ಉತ್ತಮವಾಗಿದ್ದು ಖಾಸಗಿ ವಾಹನಗಳಾದರೆ ಮಠದ ಬಾಗಿಲಿಗೆ ಹೋಗಿ ತಲುಪಲು ಅವಕಾಶ ಇದೆ.

ತರೀಕೆರೆ - ಜಂಬದಹಳ್ಳ ಜಲಾಶಯ

ತಾಲ್ಲೂಕಿನ ಸಿದ್ದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬದಹಳ್ಳ ಜಲಾಶಯವು ಪ್ರಕೃತಿಯಿಂದ ಕೂಡಿದ ಸುಂದರ ನೈಸರ್ಗಿಕ ತಾಣ. ಜಿಲ್ಲಾ ಕೇಂದ್ರದಿಂದ 69 ಕಿಲೋ ಮೀಟರ್ ಮತ್ತು ತರೀಕೆರೆಯಿಂದ 11 ಕಿಲೋ ಮೀಟರ್ ದೂರದಲ್ಲಿದೆ. ಮಳೆಗಾಲದಲ್ಲಿ ಜಲಾಶಯದಿಂದ ಹರಿಯುವ ನೀರು ಜಲಪಾತದಂತೆ ಕಾಣಿಸುತ್ತದೆ. ಬೇಸಿಗೆಯಲ್ಲಿ ಪಕ್ಷಿ ವೀಕ್ಷಕರ ಮೆಚ್ಚಿನ ತಾಣ. ಆದರೆ ಈ ತಾಣ ಅಷ್ಟೇನು ಪರಿಚಿತವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.