ADVERTISEMENT

ಚಿಕ್ಕಮಗಳೂರು | ಹೋಂಸ್ಟೇ: ಸುರಕ್ಷತೆಯೇ ಸವಾಲು

ಜಿಲ್ಲೆಯಲ್ಲಿ 607 ಹೋಂಸ್ಟೇಗಳಿಗೆ ಮಾತ್ರ ಅನುಮತಿ

ವಿಜಯಕುಮಾರ್ ಎಸ್.ಕೆ.
Published 17 ಮಾರ್ಚ್ 2025, 6:37 IST
Last Updated 17 ಮಾರ್ಚ್ 2025, 6:37 IST
<div class="paragraphs"><p>ಹೋಂಸ್ಟೇ</p></div>

ಹೋಂಸ್ಟೇ

   

(ಪ್ರಾತಿನಿಧಿಕ ಚಿತ್ರ)

ಚಿಕ್ಕಮಗಳೂರು: ಕೊಪ್ಪಳ ಜಿಲ್ಲೆಯ ಗಂಗಾವತಿಯ ಆನೆಗುಂದಿಯಲ್ಲಿ ಹೋಂಸ್ಟೇನಲ್ಲಿ ತಂಗಿದ್ದ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ನಂತರ ಸುರಕ್ಷತೆ ಎಷ್ಟಿದೆ ಎಂಬ ಪ್ರಶ್ನೆ ಎದುರಾಗಿದೆ. ಯಾರ ಹಿಡಿತಕ್ಕೂ ಸಿಗದ ಪ್ರವಾಸಿಗರನ್ನು ನಿಯಂತ್ರಿಸುವುದು ಹೋಂಸ್ಟೇ ಮಾಲೀಕರು ಮತ್ತು ಪೊಲೀಸರಿಗೂ ಇದು ಸವಾಲಾಗಿ ಪರಿಣಮಿಸಿದೆ.

ADVERTISEMENT

ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ತಲೆ ಎತ್ತಿದ್ದರೂ 607 ಹೋಂಸ್ಟೇಗಳು ಮಾತ್ರ ಅನುಮತಿ ಪಡೆದುಕೊಂಡಿವೆ. ಉಳಿದ ಹೋಂಸ್ಟೇಗಳಿಗೆ ಅನುಮತಿ ಇಲ್ಲ. ಅನುಮತಿ ಪಡೆಯುವ ಪ್ರಯತ್ನದಲ್ಲಿ 250ಕ್ಕೂ ಹೆಚ್ಚು ಹೋಂಸ್ಟೇಗಳಿವೆ. ಆದರೆ, ದಾಖಲೆ ಒದಗಿಸುವುದು, ಪೊಲೀಸ್ ಮತ್ತು ಅರಣ್ಯ ಇಲಾಖೆ ಎನ್‌ಒಸಿ ಪಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿವೆ.

ಮಲೆನಾಡಿನ ಪರಿಸರ ಸೌಂದರ್ಯ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮನೆಯಲ್ಲೇ ಆತಿಥ್ಯ ನೀಡಿ ಕೃಷಿಯೊಂದಿಗೆ ಉಪ ಆದಾಯ ಗಳಿಸುವ ಉದ್ದೇಶದಿಂದ ಹೋಂಸ್ಟೇಗಳು ಜಿಲ್ಲೆಯಲ್ಲಿ ಹುಟ್ಟಿಕೊಂಡವು. ಈಗ ಅವು ವಾಣಿಜ್ಯ ಸ್ವರೂಪ ಪಡೆದುಕೊಂಡಿವೆ. 

ಅನಧಿಕೃತ ಹೋಂಸ್ಟೇಗಳಲ್ಲಿ ಬಹುತೇಕರು ಪ್ರವಾಸೋದ್ಯಮ ಇಲಾಖೆ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಬೇರೆ ಇಲಾಖೆಗಳಿಂದ ಎನ್‌ಒಸಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಭೂಪರಿವರ್ತನೆ ಮಾಡಿಕೊಳ್ಳಬೇಕು. ಸ್ವಂತ ಜಾಗವಾದರೆ ಇದಕ್ಕೆ ತೊಡಕಿಲ್ಲ. ಆದರೆ, ಒತ್ತುವರಿ ಜಾಗದಲ್ಲಿ ಹೋಂಸ್ಟೇ ನಿರ್ಮಾಣವಾಗಿದ್ದರೆ ಭೂಪರಿವರ್ತನೆ ಕಷ್ಟ. ಇದರಿಂದಾಗಿಯೇ ಬಹುತೇಕ ಅರ್ಜಿಗಳು ಹಾಗೇ ಉಳಿದುಕೊಂಡಿವೆ.

ಇನ್ನು ಅರಣ್ಯ ಜಾಗ ಒತ್ತುವರಿ ಪ್ರದೇಶದಲ್ಲೂ ಹೋಂಸ್ಟೇಗಳು ನಿರ್ಮಾಣವಾಗಿವೆ. ಇಂತಹ ಜಾಗಕ್ಕೆ ಅರಣ್ಯ ಇಲಾಖೆ ಎನ್ಒಸಿ ನೀಡುವುದಿಲ್ಲ. ಇದರಿಂದಾಗಿಯೇ ಬಹುತೇಕ ಅರ್ಜಿಗಳು ಪ್ರವಾಸೋದ್ಯಮ ಇಲಾಖೆ ಮುಂದೆ ಬಾಕಿ ಉಳಿದಿವೆ.

ಪರವಾನಗಿ ಪಡೆದಿರುವ ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆ ಮೂಲಕ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ನಿಯಂತ್ರಣ ಸಾಧಿಸುತ್ತಿದೆ. ಆದರೆ, ಅನುಮತಿ ಪಡೆಯದ ಅನಧಿಕೃತ ಹೋಂಸ್ಟೇಗಳು ಯಾರ ಹಿಡಿತಕ್ಕೂ ಸಿಗುತ್ತಿಲ್ಲ. ಅಲ್ಲಿ ಸುರಕ್ಷತೆ ಇದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಲು ಕೂಡ ಅವಕಾಶ ಇಲ್ಲದಾಗಿದೆ.

ಕೃಷಿಯೊಂದಿಗೆ ಉಪಕಸುಬಾಗಿ ಹೋಂಸ್ಟೇ ನಿರ್ವಹಣೆ ಮಾಡುತ್ತಿರುವ ರೈತರು ಕಟ್ಟುನಿಟ್ಟಾಗಿ ನಿರ್ವಹಿಸುತ್ತಿದ್ದಾರೆ. ಆದರೆ, ವಾಣಿಜ್ಯ ರೂಪ ಪಡೆದುಕೊಂಡಿರುವ, ಹೊರ ರಾಜ್ಯಗಳಿಂದ ಬಂದಿರುವ ಉದ್ಯಮಿಗಳು ಹಿಡಿತಕ್ಕೆ ಸಿಗುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಕೊಪ್ಪಳದ ಘಟನೆ ಬಳಿಕ ಪೊಲೀಸರು ಎಲ್ಲೆಡೆ ಹೋಂಸ್ಟೇ ಮಾಲೀಕರ ಸಭೆ ನಡೆಸುತ್ತಿದ್ದಾರೆ. ನಿರಂತರವಾಗಿ ಇವುಗಳ ಮೇಲೆ ನಿಗಾ ವಹಿಸಬೇಕಿದೆ ಎಂಬುದು ಜನರ ಮನವಿ.

ಹೋಂಸ್ಟೇಗಳಿಗೆ ಬರುವ ಅತಿಥಿಗಳ ಜವಾಬ್ದಾರಿ ಮಾಲೀಕರದ್ದು ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ಯಾರ ಹಿಡಿತಕ್ಕೂ ಸಿಗದ ಪ್ರವಾಸಿಗರನ್ನು ನಾವು ನಿಯಂತ್ರಿಸಲು ಸಾಧ್ಯವೇ ಎಂಬುದು ಹೋಂಸ್ಟೇ ಮಾಲೀಕರ ಪ್ರಶ್ನೆ.

ಪೊಲೀಸರ ಮಾರ್ಗಸೂಚಿ ಏನು?

  • ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆ ಸಂಬಂಧ ಕ್ರಮಕೈಗೊಳ್ಳವುದು ಕಡ್ಡಾಯ.

  • ಹೊರ ವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚೆ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಬೇಕು.

  • ಪೊಲೀಸ್ ಹಾಗೂ ಅರಣ್ಯ ಇಲಾಖೆ ಅನುಮತಿ ಪಡೆಯದೆ ಅರಣ್ಯ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ದರೆ  ದುಷ್ಕರ್ಮಿಗಳಿಂದ ಅಥವಾ ಕಾಡುಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಹೋಂಸ್ಟೇ, ರೆಸಾರ್ಟ್ ಅಥವಾ ಲಾಡ್ಜ್ ಮಾಲೀಕರೇ ಹೊಣೆ.

  • ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು.

  • ಡ್ರಗ್ಸ್ ಮತ್ತು ಮಾದಕ ವಸ್ತುಗಳ ಬಳಕೆ, ಮಾರಾಟ, ಸಂಗ್ರಹಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಎಲ್ಲಾ ಅತಿಥಿಗಳಿಗೆ ಗೋಚರಿಸುವಂತೆ ಪ್ರಮುಖ ಸ್ಥಳದಲ್ಲಿ ಈ ಫಲಕ ಪ್ರದರ್ಶಿಸಬೇಕು.

  • ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡಬಾರದು ಮತ್ತು ಸೇವನೆಗೆ ಅನುಮತಿಸಬಾರದು.

  • ವಿದೇಶಿ ಪ್ರಜೆಗಳು ಬಂದರೆ ತಕ್ಷಣ ಮಾಹಿತಿ ನೀಡಬೇಕು. ಫಾರ್ಮ್-ಸಿ ಅಡಿಯಲ್ಲಿ ಮಾಹಿತಿಯನ್ನು ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಕಳುಹಿಸಬೇಕು.

  • ನೌಕರರ ಪೂರ್ವಾಪರ ಪರಿಶೀಲನೆಯನ್ನು ಪೊಲೀಸ್ ಇಲಾಖೆಯ ಮೂಲಕ ಮಾಡಿಸಬೇಕು.

  • ಆವರಣದ ಮುಖ್ಯ ದ್ವಾರ, ಒಳಗೆ ಮತ್ತು ಹೊರಗೆ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ. ಸಿಸಿ ಟಿ.ವಿ ದೃಶ್ಯಾವಳಿಗಳನ್ನು ಕನಿಷ್ಠ ಮೂರು ತಿಂಗಳವರೆಗೆ ಸಂಗ್ರಹಿಸಿಡಬೇಕು.

  • ಸುತ್ತಮುತ್ತಲಿನ ಸಾರ್ವಜನಿಕ ಶಾಂತಿಗೆ ಭಂಗವಾಗದಂತೆ ನೋಡಿಕೊಳ್ಳಬೇಕು. ಪೊಲೀಸ್ ಇಲಾಖೆಯ ಪೂರ್ವಾನುಮತಿಯಿಲ್ಲದೆ ಡಿ.ಜೆ, ಧ್ವನಿವರ್ಧಕ, ಸಂಗೀತ ವ್ಯವಸ್ಥೆ ಮಾಡುವಂತಿಲ್ಲ.

  • ವಾಹನಗಳ ವಿವರ ಸೇರಿ ಎಲ್ಲಾ ಅತಿಥಿಗಳ ಚೆಕ್-ಇನ್ ಮತ್ತು ಚೆಕ್-ಔಟ್ ಸಂಪೂರ್ಣ ಮಾಹಿತಿಯನ್ನು ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಸಂಗ್ರಹಿಸಬೇಕು. ಪೊಲೀಸ್ ಭೇಟಿಯ ಸಮಯದಲ್ಲಿ ಅದನ್ನು ಹಾಜರುಪಡಿಸಬೇಕು.

  • ಯಾವುದೇ ಕಾರ್ಯಕ್ರಮ ಆಯೋಜಿಸಿದರೆ, ಅದನ್ನು ಮುಂಚಿತವಾಗಿ ಪೊಲೀಸ್ ಇಲಾಖೆಗೆ ಲಿಖಿತವಾಗಿ ತಿಳಿಸಬೇಕು ಮತ್ತು ಅಗತ್ಯ ಅನುಮತಿ ಪಡೆಯಬೇಕು.

  • ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ವಾಹನ ನಿಲುಗಡೆಗೆ ಸ್ಥಳಾವಕಾಶ ಒದಗಿಸಬೇಕು.

  • ಪರವಾನಗಿ ಪಡೆದ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರವಾಸಿಗರಿಗೆ ವಸತಿ ಸೌಕರ್ಯ ಒದಗಿಸಬಾರದು.

  • ಪ್ರಾಣಿಗಳು, ವನ್ಯಜೀವಿಗಳಿಗೆ ಹಾನಿ ಉಂಟು ಮಾಡುವ ಅಥವಾ ಪರಿಸರಕ್ಕೆ ಹಾನಿ ಉಂಟು ಮಾಡುವ ಚಟುವಟಿಕೆಗಳಿಗೆ ಅನುಮತಿಸಬಾರದು.

  • ಕಸ ಅಥವಾ ತ್ಯಾಜ್ಯ ವಸ್ತುಗಳನ್ನು ಚೆಲ್ಲುವ ಮೂಲಕ ಸುತ್ತಮುತ್ತಲಿನ ಪರಿಸರ ಕಲುಷಿತಗೊಳಿಸಬಾರದು. ಸುಸ್ಥಿರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಅಳವಡಿಸಿಕೊಳ್ಳಬೇಕು.

  • ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಫಲಕ ಅಳವಡಿಸಬೇಕು.

  • ನೀರಾವರಿ ಉದ್ದೇಶಕ್ಕಾಗಿ ಅಥವಾ ನೈಸರ್ಗಿಕವಾಗಿ ಹರಿಯುವ ನೀರಿನ ಹೊಳೆಯನ್ನು ಹೋಂಸ್ಟೇ ಅಥವಾ ರೆಸಾರ್ಟ್‌ ಬಳಕೆಗೆ ತಿರುಗಿಸಬಾರದು.

  • ಪರವಾನಗಿ ಪ್ರತಿಯನ್ನು ಸಾರ್ವಜನಿಕರಿಗೆ ಪ್ರದರ್ಶಿಸಬೇಕು.

  • ಹೋಂಸ್ಟೇ, ರೆಸಾರ್ಟ್ ಆಸ್ತಿಯನ್ನು ಯಾವುದೇ ಸಿವಿಲ್ ವ್ಯಾಜ್ಯ ಅಥವಾ ವಿವಾದಕ್ಕೆ ಒಳಪಡಿಸಬಾರದು.

  • ಸುಂಕ ದರಗಳನ್ನು ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸಬೇಕು. ಅದು ಎಲ್ಲಾ ಅತಿಥಿಗಳಿಗೆ ಗೋಚರಿಸಬೇಕು.

  • ಪರವಾನಗಿ ಹೊಂದಿದ ವ್ಯಕ್ತಿಯೇ ಹೋಂಸ್ಟೇಗಳನ್ನು ನಿರ್ವಹಿಸಬೇಕು. ಅದನ್ನು ನಡೆಸಲು ಇತರರಿಗೆ ಬಾಡಿಗೆಗೆ ಅಥವಾ ಗುತ್ತಿಗೆಗೆ ನೀಡಬಾರದು.

  • ಭದ್ರತೆಗಾಗಿ ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು.

ಕ್ರಮ ಹೋಂಸ್ಟೇ ಎಂಬ ಗೊಂದಲದ ಗೂಡು:

ಕಳಸ ತಾಲ್ಲೂಕಿನಲ್ಲಿ ನೂರಕ್ಕೂ ಹೆಚ್ಚು ಹೋಂಸ್ಟೇಗಳು ಇದ್ದರೂ ಅವುಗಳ ಪೈಕಿ ಪ್ರವಾಸೋದ್ಯಮ ಇಲಾಖೆಯ ಮಾನ್ಯತೆ ಇರುವುದು ಕೆಲವೇ ಕೆಲವು ಆಸ್ತಿಗಳಿಗೆ ಮಾತ್ರ. ಉಳಿದವು ಸರ್ಕಾರದ ಇಲಾಖೆಗಳ ಪಾಲಿಗೆ ಅಕ್ರಮ, ಆದರೆ ಪ್ರವಾಸಿಗರ ಪಾಲಿಗೆ ಅವು ಅಚ್ಚುಮೆಚ್ಚಿನ ತಾಣಗಳು.

ವಿಚಿತ್ರ ಎಂದರೆ ವರ್ಷದಲ್ಲಿ ಹಲವಾರು ಬಾರಿ ಸಾಲು ಸಾಲು ರಜೆಗಳು ಬಂದಾಗ ತಾಲ್ಲೂಕಿಗೆ ಸಾವಿರಾರು ಪ್ರವಾಸಿಗರು ಲಗ್ಗೆ ಇಡುತ್ತಾರೆ. ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು, ಮನಸ್ಸು ಹಗುರ ಮಾಡಿಕೊಳ್ಳಲು ನಗರವಾಸಿಗಳು ಇಷ್ಟ ಪಡುತ್ತಾರೆ. ಆದರೆ ಅವರಿಗೆ ಇಲ್ಲಿನ ಅಕ್ರಮ ಅಥವಾ ಅನಧಿಕೃತ ಹೋಂಸ್ಟೇ ಎಂಬ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಗೂಗಲ್ ಬಳಸಿ ಹುಡುಕಾಟ ನಡೆಸಿದಾಗ ಉತ್ತಮ ಸೇವೆ ನೀಡುವ, ಉತ್ತಮ ಸೌಲಭ್ಯ ಇರುವ ಹಲವಾರು ಹೋಂಸ್ಟೇಗಳ ಪಟ್ಟಿ ಸಿಗುತ್ತದೆ. ಆ ಪೈಕಿ ಪ್ರವಾಸಿಗರು ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳುತ್ತಾರೆ ಅಷ್ಟೇ. ಇನ್ನು ಸರ್ಕಾರವೇ ಹೇಳುವಂತೆ ಅಕ್ರಮ ಹೋಂಸ್ಟೇಗಳು ಕಾರ್ಯನಿರ್ವಹಿಸಬಾರದು ಎಂದಾದರೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರವಾಸಿಗರಿಗೆ ಸರ್ಕಾರದ ಯಾವುದೇ ಪರ್ಯಾಯ ವಸತಿ ವ್ಯವಸ್ಥೆ ಇಲ್ಲಿಲ್ಲ.

ಕನಿಷ್ಠ ಪ್ರವಾಸಿ ಮಾಹಿತಿ ಕೇಂದ್ರವೂ ಇಲ್ಲ. ಹಾಗಾದರೆ ಹೋಂಸ್ಟೇಗಳು ಯಾಕೆ ಇನ್ನೂ ಅಕ್ರಮವಾಗಿಯೇ ಉಳಿದಿವೆ ಎಂಬ ಪ್ರಶ್ನೆಗೆ ಕುತೂಹಲಕಾರಿ ಉತ್ತರವೂ ಇದೆ. ಮೊದಲಿಗೆ ಅತ್ಯಂತ ಸುವ್ಯವಸ್ಥಿತ ಹೋಂಸ್ಟೇಗಳಿಗೂ ಈವರೆಗೆ ಪ್ರವಾಸೋದ್ಯಮ ಇಲಾಖೆ ಮಾನ್ಯತೆ ಯಾಕೆ ಸಿಕ್ಕಿಲ್ಲ ಎಂಬುದೇ ಪ್ರಮುಖ ಪ್ರಶ್ನೆ. ‘ಮೂರು ವರ್ಷಗಳ ಹಿಂದೆಯೇ ನಾವು ಅರ್ಜಿ ಸಲ್ಲಿಸಿದ್ದರೂ ನಮ್ಮ ಹೋಂಸ್ಟೇಗೆ ಮಾನ್ಯತೆ ಕೊಟ್ಟಿಲ್ಲ’ ಎಂದು ಸಂಸೆ ಗ್ರಾಮ ವ್ಯಾಪ್ತಿಯ ಅನೇಕ ಹೋಂಸ್ಟೇ ಮಾಲೀಕರು ದೂರುತ್ತಾರೆ.

ಕೆಲ ಹೋಂಸ್ಟೇಗಳು ಅರಣ್ಯ ಅಥವಾ ಕಂದಾಯ ಭೂಮಿಯ ಒತ್ತುವರಿ ಪ್ರದೇಶದಲ್ಲಿ ಇರುವುದರಿಂದ ಅಂತಹ ಹೋಂಸ್ಟೇಗಳು ಅಗತ್ಯ ದಾಖಲಾತಿಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ. ಅಂತಹ ಹೋಂಸ್ಟೇಗಳು ಸಹಜವಾಗಿ ಅಕ್ರಮ ಪಟ್ಟಿಯಲ್ಲಿ ಇವೆ. ಆದರೆ, ಅಕ್ರಮ ಎನ್ನಲಾಗುವ ಉಳಿದ ಅನೇಕ ಹೋಂಸ್ಟೇಗಳು ನಿಜವಾಗಿ ಹೋಂಸ್ಟೇ ಸ್ವರೂಪದಲ್ಲೇ ನಡೆಯುತ್ತಿವೆ. ಪ್ರವಾಸಿಗರನ್ನು ತಮ್ಮ ಮನೆಯ ಒಂದು ಭಾಗದಲ್ಲೇ ಮನೆ ಮಾಲೀಕರು ಉಳಿಸಿಕೊಂಡು ಆತಿಥ್ಯ ನೀಡುತ್ತಾರೆ. ಆದರೆ, ವರ್ಷದಲ್ಲಿ ಕೇವಲ 3-4 ತಿಂಗಳು ಮಾತ್ರ ಇವರಿಗೆ ಪ್ರವಾಸಿಗರ ಬುಕಿಂಗ್ ಸಿಗುತ್ತದೆ. ಇಂತಹ ಹೋಂಸ್ಟೇ ಮಾಲೀಕರು ಕೂಡ ದಾಖಲೆಗಳನ್ನು ಒದಗಿಸಿ ಮಾನ್ಯತೆ ಪಡೆಯುವ ಸ್ಥಿತಿಯಲ್ಲಿ ಇಲ್ಲ.

ಪ್ರವಾಸೋದ್ಯಮ ಇಲಾಖೆಯು ಎಲ್ಲ ಹೋಂಸ್ಟೇಗಳ ಪರಿಶೀಲನೆ ನಡೆಸಿ ಏಕಗವಾಕ್ಷಿ ವ್ಯವಸ್ಥೆಯಲ್ಲಿ ಮಾನ್ಯತೆ ಕೊಡುವ ಅಥವಾ ನಿರಾಕರಿಸುವ ತುರ್ತು ಕೆಲಸ ಮಾಡಿದರೆ ಎಲ್ಲ ಗೊಂದಲ ಪರಿಹಾರ ಆಗುತ್ತದೆ. ನಿಯಮಾವಳಿ ಪಾಲಿಸದ ಅಥವಾ ಅಗತ್ಯ ಮೂಲಸೌಕರ್ಯ ಇಲ್ಲದೆ ಅರ್ಜಿ ತಿರಸ್ಕಾರ ಆದ ಹೋಂಸ್ಟೇಗಳ ಪಟ್ಟಿಯನ್ನು ಪ್ರಕಟಿಸಿ ಅವುಗಳನ್ನು ಅಕ್ರಮ ಎಂದು ಘೋಷಣೆ ಮಾಡಬೇಕಿದೆ. ನಮ್ಮ ಜಿಲ್ಲೆಯ ಪ್ರವಾಸೋದ್ಯಮ ನೀತಿ ಮಾರ್ಪಾಡು ಆಗಬೇಕು ಎಂದು ತಾಲ್ಲೂಕಿನ ಬಹುತೇಕ ಹೋಂಸ್ಟೇ ಮಾಲೀಕರು ಆಗ್ರಹಿಸುತ್ತಾರೆ. ವಾರಾಂತ್ಯದಲ್ಲಿ ಪ್ರವಾಸಿಗರನ್ನು ದೃಷ್ಟಿ ಯಲ್ಲಿ ಇಟ್ಟುಕೊಂಡೇ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿರುವ ನೂರಾರು ಜನರು ಇಲ್ಲಿದ್ದಾರೆ. ಎಲ್ಲೋ ನಡೆದ ಅನಾಹುತಕ್ಕೆ ಎಲ್ಲ ಹೋಂಸ್ಟೇಗಳು ಅನೈತಿಕ ತಾಣ ಎಂದು ಬಿಂಬಿಸುವ ಯತ್ನವೂ ನಡೆಯಬಾರದು ಎಂಬುದು ಹೋಂಸ್ಟೇ ಮಾಲೀಕರು ಒತ್ತಾಯ.

ಅನಧಿಕೃತ ಹೋಂಸ್ಟೇ: ಆಟಕ್ಕುಂಟು ಲೆಕ್ಕಕ್ಕಿಲ್ಲ

ಮೂಡಿಗೆರೆ: ತಾಲ್ಲೂಕಿನಲ್ಲಿ ಅನಧಿಕೃತ ಹೋಂ ಸ್ಟೇಗಳಿಗೆ ಸಂಪೂರ್ಣವಾಗಿ ಕಡಿವಾಣ ಬಿದ್ದಿಲ್ಲ. ಇದರಿಂದ ಕೆಲವು ಅನಧಿಕೃತ ಹೋಂಸ್ಟೇಗಳು ಆಟಕ್ಕುಂಟು‌ ಲೆಕ್ಕಕ್ಕಿಲ್ಲ ಎಂಬಂತೆ ಪ್ರವಾಸೋದ್ಯಮದಲ್ಲಿ‌ ತೊಡಗಿಸಿಕೊಂಡಿವೆ.

ಅನಧಿಕೃತ ಹೋಂಸ್ಟೇಗಳು ಯಾವುದೇ ನಾಮಫಲಕಗಳನ್ನು ಹಾಕದೇ, ಎಲ್ಲಿಯೂ ಜಾಹಿರಾತು ನೀಡದಿದ್ದರೂ, ಅವರದ್ದೇ ಆದ ಜಾಲಗಳ ಮೂಲಕ ಪ್ರವಾಸಿಗರನ್ನು ಸೆಳೆದು ಶುಲ್ಕ ಪಡೆದು ಆತಿಥ್ಯ ನೀಡುತ್ತಿವೆ.

ತಾಲ್ಲೂಕಿನಲ್ಲಿ ಹೋಂಸ್ಟೇ ಬುಕಿಂಗ್‌ಗೂ ಮಧ್ಯವರ್ತಿಗಳಿದ್ದು, ಅವರು ಅನಧಿಕೃತ ಹೋಂಸ್ಟೇಗಳಿಗೆ ಪ್ರವಾಸಿಗರನ್ನು ಕಳುಹಿಸುವ ಪಾಲಕರಾಗಿದ್ದಾರೆ.

ಕೆಲವು ಅಧೀಕೃತ ಹೋಂಸ್ಟೇಗಳಲ್ಲಿ ಪ್ರವಾಸಿಗರನ್ನು ಬುಕ್ ಮಾಡಿಕೊಳ್ಳಲು ಮಾತಿನ ಕೌಶಲ ಇಲ್ಲದಿರಿವುದರಿಂದ ತಮ್ಮ ದೂರವಾಣಿಯೊಂದಿಗೆ ಮಧ್ಯವರ್ತಿಗಳ ಮೊಬೈಲ್ ಸಂಖ್ಯೆಯನ್ನು ನೀಡಿರುತ್ತಾರೆ. ಪ್ರವಾಸಿಗರು ಮಾಲೀಕರಿಗೆ ಕರೆ ಮಾಡಿದರೆ ಜಾಲತಾಣದಲ್ಲಿರುವ ಮತ್ತೊಂದು ಸಂಖ್ಯೆಗೆ ಕರೆ ಮಾಡುವಂತೆ ತಿಳಿಸುತ್ತಾರೆ.

ಅದು ಮಧ್ಯವರ್ತಿಯ ಸಂಖ್ಯೆಯಾಗಿದ್ದು, ಬಾಡಿಗೆ, ಊಟ, ವಸತಿ ವ್ಯವಸ್ಥೆಯಲ್ಲಿ ಪ್ರವಾಸಿಗರು ಕೇಳುವ ಬೇಡಿಕೆಗೆ ಅನುಗುಣವಾಗಿ ಮಧ್ಯವರ್ತಿಗಳು ಅನಧಿಕೃತ ಹೋಂಸ್ಟೇಗೂ ಬುಕ್ ಮಾಡಿಕೊಡುತ್ತಾರೆ.

ಹೀಗೆ ಒಮ್ಮೆ ಬಂದ ಪ್ರವಾಸಿಗರು ಅಲ್ಲಿ ನೀಡುವ ಆತಿಥ್ಯಕ್ಕೆ ಅನುಸಾರವಾಗಿ ತಮ್ಮ ಸ್ನೇಹಿತರ ವಲಯದಲ್ಲಿ‌ ಅನಧಿಕೃತ ಹೋಂಸ್ಟೇ ಪರಿಚಯ ಮಾಡಿಕೊಡುತ್ತಾರೆ. ಹೀಗೆ ಗ್ರಾಹಕರು ಅನಧಿಕೃತ ಹೋಂ‌ಸ್ಟೇಗೆ ಬಂದು ಹೋಗುತ್ತಾರೆ.

ಅಧಿಕೃತ ಹೋಂಸ್ಟೇಗಳಿಗೆ ಪ್ರವಾಸಿಗರನ್ನು ಬುಕ್ ಮಾಡಿ ಕೊಟ್ಟರೆ ಮಧ್ಯವರ್ತಿಗಳಿಗೆ ತಲೆಗೆ ₹200 ನೀಡಲಾಗುತ್ತದೆ. ಅದೇ ಅನಧಿಕೃತ ಹೋಂಸ್ಟೇಗೆ ಬುಕ್ ಮಾಡಿದರೆ ₹250ರಿಂದ ₹300 ಪಡೆಯಲಾಗುತ್ತದೆ.

ಇದರಿಂದ ಮಧ್ಯವರ್ತಿಗಳ ಒಲವು ಅಧಿಕೃತ ಹೋಂಸ್ಟೇಗಳಿಗಿಂತಲೂ ಅನಧಿಕೃತ ಹೋಂಸ್ಟೆಗಳತ್ತ ಇರುತ್ತದೆ. ವಾರಾಂತ್ಯ, ರಜೆ ದಿನಗಳು, ವರ್ಷಾಂತ್ಯಗಳಲ್ಲಿ ಅಧಿಕೃತ ಹೋಂಸ್ಟೇಗಳು‌ ಭರ್ತಿಯಾಗುವುದರಿಂದ ಅನಧಿಕೃತ ಹೋಂಸ್ಟೇಗಳಲ್ಲೂ ಬೆಲೆ ದುಬಾರಿಯಾಗುತ್ತದೆ.

ಅನಧಿಕೃತ ಹೋಂಸ್ಟೇಗಳಲ್ಲಿ ನಾಮಫಲಕ ಹಾಕದಿರುವುದರಿಂದ ಸ್ಥಳೀಯ ಆಡಳಿತಕ್ಕೂ ಹೋಂಸ್ಟೇ ಇರುವ ಬಗ್ಗೆ ಮಾಹಿತಿ ಇರುವುದಿಲ್ಲ. ಒಂದು ವೇಳೆ ಇದ್ದರೂ ಸ್ಥಳೀಯ ರಾಜಕೀಯ ಒತ್ತಡವು ನಮಗ್ಯಾಕೆ ಎನ್ನುವಂತೆ ಮಾಡುತ್ತದೆ ಎಂಬುದು ಅಧಿಕಾರಿಯೊಬ್ಬರ ಅಸಹಾಯಕತೆ.

ಅನಧಿಕೃತ ಹೋಂಸ್ಟೇಗಳನ್ನು ಅಧಿಕೃತ ಮಾಡಿಕೊಳ್ಳಬೇಕು ಎಂಬ ಉದ್ದೇಶ ಮಾಲೀಕರಿಗಿದ್ದರೂ, ಭೂ ದಾಖಲೆಗಳು ಸಮರ್ಪಕವಾಗಿಲ್ಲದಿರುವುದು, ಅಗತ್ಯ ದಾಖಲೆಗಳನ್ನು ಒದಗಿಸಲು‌ ಸಾಧ್ಯ ಆಗದಿರುವುದು ಅನಧಿಕೃತವಾಗಿಯೇ ಮುಂದುವರೆಯಲು ಕಾರಣವಾಗಿದೆ.

ಮಲೆನಾಡಿನಲ್ಲಿ ಒಂದು ಬಾರಿ ಅನಧಿಕೃತ ಹೋಂಸ್ಟೇಗಳನ್ನು ಅಧಿಕೃತಗೊಳಿಸಲು ನಿಯಮಗಳನ್ನು ಸರಳೀಕರಿಸಿ ಅವಕಾಶ ಕೊಟ್ಟರೆ ಉಪಯೋಗವಾಗುತ್ತದೆ ಎಂಬುದು ಮಾಲೀಕರೊಬ್ಬರ ಅಭಿಪ್ರಾಯ.

ಪೂರಕ ಮಾಹಿತಿ: ರವಿ ಕೆಳಂಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.