
ವಿಜಯಕುಮಾರ್ ಎಸ್.ಕೆ.
ಚಿಕ್ಕಮಗಳೂರು: ನಗರದಲ್ಲಿ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣದ ಹಲವು ವರ್ಷಗಳ ಕನಸು ಕೊನೆಗೂ ಸಾಕಾರಗೊಳ್ಳುವ ಹಂತಕ್ಕೆ ಬಂದಿದ್ದು, ಒಂದೂವರೆ ವರ್ಷದಲ್ಲಿ ಹೈಟೆಕ್ ಟರ್ಮಿನಲ್ ನಿರ್ಮಾಣಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧತೆ ಮಾಡಿಕೊಂಡಿದೆ.
ಹಳೇ ಜೈಲಿನ ಜಾಗದಲ್ಲಿ ಈಗ ಗ್ರಾಮಾಂತರ ಬಸ್‌ಗಳ ನಿಲುಗಡೆ ತಾಣವಾಗಿ ತಾತ್ಕಾಲಿಕವಾಗಿ ಬಳಕೆ ಮಾಡಲಾಗುತ್ತಿದೆ. ಒಂದೂವರೆ ಎಕರೆ ವಿಸ್ತೀರ್ಣದ ಈ ಜಾಗದಲ್ಲಿ ಹೊಸ ನಿಲ್ದಾಣ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದ್ದು, ಮಂಗಳವಾರ ಶಂಕುಸ್ಥಾಪನೆ ನೆರವೇರಲಿದೆ.
ಗ್ರಾಮೀಣ ವಿಭಾಗದ ಬಸ್ ನಿಲ್ದಾಣ ಸಂಪೂರ್ಣವಾಗಿ ಹಾಳಾಗಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಿಲ್ದಾಣದ ಆವರಣವೇ ಗುಂಡಿ–ಹೊಂಡಗಳಿಂದ ತುಂಬಿಕೊಂಡು ಮಳೆಗಾಲದಲ್ಲಿ ಪ್ರಯಾಣಿಕರು ವಿಪರೀತ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಯಾಣಿಕರು ಕೂರಲು ಆಸನ, ಸೂರು ಸೇರಿ ಯಾವುದೇ ಸಮರ್ಪಕ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ.
ಮಳೆಗಾಲದಲ್ಲಿ ಕೆಸರು ಗುಂಡಿ, ಬೇಸಿಗೆಯಲ್ಲಿ ಧೂಳಿನ ಕಣವಾಗಿ ಮಾರ್ಪಡುತ್ತಿದೆ. ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿದ್ದ ನಿಲ್ದಾಣದಲ್ಲಿ ಭೀಮ್ ಆರ್ಮಿ, ಕನ್ನಡಸೇನೆ ಹಾಗೂ ದಲಿತ ಸಂಘಟನೆಗಳ ಮುಖಂಡರು ಭತ್ತದ ಸಸಿ ನೆಟ್ಟು, ಎತ್ತುಗಳಿಂದ ಬೇಸಾಯ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು. ಈ ಜಾಗದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ₹19.87 ಕೋಟಿ ಅನುದಾನ ನೀಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಂಗಳವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನೆಲಮಾಳಿಗೆಯಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ನಿಲುಗಡೆ ತಾಣ, ನೆಲಮಹಡಿಯಲ್ಲಿ ಸಂಚಾರ ನಿಯಂತ್ರಕರ ಕೊಠಡಿ, ಪ್ರಯಾಣಿಕ ನಿರೀಕ್ಷಣ ಅಂಕಣ, ಮೊದಲನೇ ಮಹಡಿಯಲ್ಲಿ ಸುಸಜ್ಜಿತ ವಿಭಾಗೀಯ ಕಚೇರಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದ್ದು, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕಾಲಾವಕಾಶ ನೀಡಲಾಗಿದೆ. ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.
ಸದ್ಯ ವೇಗಧೂತ ಬಸ್‌ಗಳ ಕಾರ್ಯಾಚರಣೆ ಮಾಡುತ್ತಿರುವ ಈಗಿನ ನಿಲ್ದಾಣ ಕೂಡ ಹಾಗೇ ಉಳಿಯಲಿದೆ. ಮುಂದಿನ ದಿನಗಳಲ್ಲಿ ಗ್ರಾಮಾಂತರ ವಿಭಾಗದ ಬಸ್‌ಗಳ ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಜಗದೀಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
Highlights - ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶ ಈಗ ಕಾರ್ಯಾಚರಣೆಯಲ್ಲಿರುವ ನಿಲ್ದಾಣ ಹಾಗೇ ಉಳಿಸಲು ನಿರ್ಧಾರ ಖಾಸಗಿ ವಾಹನಗಳ ನಿಲುಗಡೆಗೆ ನೆಲಮಾಳಿಗೆಯಲ್ಲಿ ಅವಕಾಶ
ವಸತಿ ಗೃಹ ನಿರ್ಮಾಣ
ನಗರದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೂ ಮಂಗಳವಾರ ಶಂಕುಸ್ಥಾಪನೆ ನೆರವೇರಲಿದೆ. ₹1.10 ಕೋಟಿ ವೆಚ್ಚದಲ್ಲಿ 12 ವಸತಿ ಗೃಹಗಳು ನಿರ್ಮಾಣವಾಗಲಿವೆ. ಒಂದು ಬಿಎಚ್‌ಕೆ ಅಳತೆಯ ವಸತಿ ಗೃಹಗಳು ನಿರ್ಮಾಣವಾಗಲಿವೆ. ಸಂಪ್ ಟ್ಯಾಂಕ್ ಕೊಳವೆಬಾವಿ ಸೆಪ್ಟಿಕ್ ಟ್ಯಾಂಕ್ ಒಳಚರಂಡಿ ಸಂಪರ್ಕ ಸೌರಶಕ್ತಿ ಆಧಾರಿತ ಬಿಸಿ ನೀರಿನ ಸೌಲಭ್ಯಗಳನ್ನು ವಸತಿ ಗೃಹಗಳು ಹೊಂದಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನಿಲ್ದಾಣದಲ್ಲಿ ಬರಲಿರುವ ಸೌಲಭ್ಯ
ನೆಲಮಾಳಿಗೆಯಲ್ಲಿ ವಾಹನ ನಿಲುಗಡೆ ತಾಣ
* ನೆಲಮಹಡಿಯಲ್ಲಿ ಸಂಚಾರ ನಿಯಂತ್ರಕರ ಕೊಠಡಿ
* ಪ್ರಯಾಣಿಕರ ನಿರೀಕ್ಷಣಾ ಅಂಕಣ ಲಿಫ್ಟ್
* ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಗೃಹ
* ಮಹಿಳಾ ಪ್ರಯಾಣಿಕರ ವಿಶ್ರಾಂತಿ ಕೊಠಡಿ ಮತ್ತು ತಾಯಿ ಮಡಿಲು ಕೊಠಡಿ
* ಶುದ್ಧ ಕುಡಿಯುವ ನೀರಿನ ಸೌಲಭ್ಯ
* ಉಪಹಾರ ಗೃಹ ಮತ್ತು ವಾಣಿಜ್ಯ ಮಳಿಗೆ
* ಪುರುಷ ಮಹಿಳೆಯರು ಅಂಗವಿಕಲರಿಗಾಗಿ ಹೈಟೆಕ್ ಶೌಚಾಲಯ
* ಬುಕ್ಕಿಂಗ್ ಕೌಂಟರ್ ಮತ್ತು ಪೊಲೀಸ್ ಚೌಕಿ
* ಅಂಗವಿಕಲರಿಗಾಗಿ ಇಳಿಜಾರು ರ್‍ಯಾಂಪ್
*ಮೊದಲ ಮಹಿಡಿಯಲ್ಲಿ ಸುಸಜ್ಜಿತ ವಿಭಾಗೀಯ ಕಚೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.