ADVERTISEMENT

ಚಿಕ್ಕಮಗಳೂರು: 1,300ಕ್ಕೂ ಹೆಚ್ಚು ಸಣ್ಣ ಸಣ್ಣ ಕೆರೆಗಳಲ್ಲಿ ಬತ್ತದ ಜೀವಕಳೆ

ವಿಜಯಕುಮಾರ್ ಎಸ್.ಕೆ.
Published 2 ಮಾರ್ಚ್ 2026, 4:22 IST
Last Updated 2 ಮಾರ್ಚ್ 2026, 4:22 IST
<div class="paragraphs"><p>ಕಡೂರು ತಾಲ್ಲೂಕಿನ ಮದಗದ ಕೆರೆಯಲ್ಲಿ ನೀರು ತುಂಬಿರುವುದು</p></div>

ಕಡೂರು ತಾಲ್ಲೂಕಿನ ಮದಗದ ಕೆರೆಯಲ್ಲಿ ನೀರು ತುಂಬಿರುವುದು

   

ಚಿಕ್ಕಮಗಳೂರು: ಮುಂಗಾರಿನಲ್ಲಿ ಭರ್ಜರಿಯಾಗಿ ಮಳೆ ಸುರಿದಿದ್ದರಿಂದ ಎರಡು ಮೂರು ಬಾರಿ ತುಂಬಿದ್ದ ಕೆರೆಗಳಲ್ಲಿ ಜೀವಕಳೆ ಇನ್ನೂ ಉಳಿದಿದೆ.

2025ರಲ್ಲಿ ಮಾರ್ಚ್‌ ತಿಂಗಳಿನಲ್ಲೇ ಆರಂಭವಾದ ಮಳೆ ನವೆಂಬರ್ ತನಕವೂ ಬಿಟ್ಟು ಬಿಡದೆ ಸುರಿಯಿತು. ಮುಂಗಾರು ಮತ್ತು ಹಿಂಗಾರಿನಲ್ಲೂ ಮಳೆಗಳ ಅಬ್ಬರ ಕಡಿಮೆಯಾಗಲಿಲ್ಲ. ಇದರಿಂದ ಜಿಲ್ಲೆಯ ಜಲಾಶಯ ಸೇರಿ ಕೆರೆಕಟ್ಟೆಗಳೆಲ್ಲವೂ ತುಂಬಿಕೊಂಡಿದ್ದವು.

ADVERTISEMENT

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 124 ಕೆರೆಗಳಿವೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲೂ 1,300ಕ್ಕೂ ಹೆಚ್ಚು ಸಣ್ಣ ಸಣ್ಣ ಕೆರೆಗಳಿವೆ. ಬಹುತೇಕ ಎಲ್ಲಾ ಕೆರೆಗಳಲ್ಲಿ ಅರ್ಧಕ್ಕೂ ಹೆಚ್ಚು ನೀರಿದೆ. ಚಿಕ್ಕಮಗಳೂರು ನಗರಕ್ಕೆ ನೀರುಣಿಸುವ ಹಿರೇಕೊಳಲೆ ಕೆರೆ, ಕಡೂರು ತಾಲ್ಲೂಕಿನ ಅಯ್ಯನಕೆರೆ, ಮದಗದಕೆರೆ, ವಿಷ್ಣುಸಮುದ್ರ ಕೆರೆ, ಅಜ್ಜಂಪುರ ತಾಲ್ಲೂಕಿನ ಬುಕ್ಕಂಬುಧಿ ಕೆರೆಗಳಲ್ಲಿ ನೀರು ಇನ್ನೂ ಉಳಿದಿದೆ.

ಈ ವರ್ಷದ ಮಳೆ ಆದಾಗಲೇ ಅಲ್ಲಲ್ಲಿ ಬಿದ್ದಿದ್ದು, ಕೆರೆಗಳ ನೀರು ಬರಿದಾಗುವ ಲಕ್ಷಣಗಳು ಎಲ್ಲಿಗೂ ಕಾಣಿಸುತ್ತಿಲ್ಲ. ಜನ ಜಾನುವಾರುಗಳಿಗೆ ನೀರಿನ ಸಮಸ್ಯೆಗಳು ಕಾಣಿಸುತ್ತಿಲ್ಲ. ಕೆರೆಗಳಲ್ಲಿ ನೀರು ಇರುವುದರಿಂದ ಅಂತರ್ಜಲ ಕೂಡ ಕಡಿಮೆಯಾಗಿಲ್ಲ. ಬಯಲು ಸೀಮೆಯ ಅಡಿಕೆ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ.

ನರಸಿಂಹರಾಜಪುರ ತಾಲ್ಲೂಕು ನಾಗಲಾಪುರ ಗ್ರಾಮದ ಬಳಿ ಇರುವ ತಾಲ್ಲೂಕಿನ ಅತಿದೊಡ್ಡ ಹೆಗ್ಗೆರಿ ಕೆರೆಯಲ್ಲಿ ನೀರು ಇರುವುದು

ಅಯ್ಯನಕೆರೆ ಮದಗದ ಕೆರೆಯಲ್ಲಿ ಭರ್ತಿ ನೀರು

ಕಡೂರು: ತಾಲ್ಲೂಕಿನಲ್ಲಿ ಮದಗದಕೆರೆ ಮತ್ತು ಅಯ್ಯನಕೆರೆಗಳು ಕೃಷಿಕರ ಜನ-ಜಾನುವಾರುಗಳ ಜಲಮೂಲವಾಗಿವೆ. ಮದಗದಕೆರೆಯಿಂದ ಸರಣಿ ಕೆರೆಗಳಿಗೆ ನೀರು ಹರಿಯುವ ವ್ಯವಸ್ಥೆ ಇದೆ. ಸದ್ಯ ಮದಗದಕೆರೆ ಹಾಗೂ ಅಯ್ಯನಕೆರೆಗಳಲ್ಲಿ ಬಹುತೇಕ ಭರ್ತಿ ನೀರು ಇದೆ. ಆದರೆ ಮದಗದಕೆರೆಯ ಸರಣಿ ಕೆರೆಗಳಲ್ಲಿ ಕೆಲವು ಕಡೆ ಕೃಷಿಕರು ಬೇಸಿಗೆ ಹಂಗಾಮಿಗೆ ತೋಟಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಬೇಸಿಗೆಯಲ್ಲಿ ಕೆರೆಗಳಲ್ಲಿ ಶೇ 50ರಷ್ಟು ನೀರು ಉಳಿಸಿಕೊಳ್ಳಲೇಬೇಕು. ಇದರಲ್ಲಿ ಶೇ 20ರಷ್ಟು ನೀರನ್ನು ವಾತಾವರಣ ಹೀರಿಕೊಂಡರೂ ಶೇ 30ರಷ್ಟು ನೀರು ಉಳಿಯಲೇಬೇಕು. ಆದರೆ ಮದಗದಕೆರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಮಾರ್ಚ್‌ನಲ್ಲಿ ನೀರು ಖಾಲಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟು ಕಡೂರು ತಾಲ್ಲೂಕಿನ 29 ಕೆರೆಗಳಲ್ಲಿ 2332.23 ಎಂಸಿಎಫ್‌ಟಿ ನೀರು ಸಂಗ್ರಹಣಾ ಸಾಮರ್ಥ್ಯವಿದೆ. ಫೆಬ್ರುವರಿ ಅಂತ್ಯಕ್ಕೆ 2 ಕೆರೆಗಳಲ್ಲಿ 0.0019 ಟಿಎಂಸಿ ನೀರು ಇದ್ದರೆ ಇನ್ನುಳಿದ 27 ಕೆರೆಗಳಲ್ಲಿ 1.74 ಟಿಎಂಸಿ ನೀರಿನ ಸಂಗ್ರಹವಿದೆ. ಜನ-ಜಾನುವಾರುಗಳು ಮತ್ತು ತುರ್ತು ಸಂದರ್ಭಕ್ಕಾಗಿ ಕೆರೆಗಳಲ್ಲಿ ಕನಿಷ್ಠ ಶೇ 30ರಷ್ಟು ನೀರು ಇರುವಂತೆ ಕ್ರಮ ವಹಿಸಲಾಗುವುದು. ಬೇಸಿಗೆ ಹಂಗಾಮಿಗೆ ಕೃಷಿ ಉದ್ದೇಶಕ್ಕೆ ಕೆರೆಯಿಂದ ನೀರು ಹಾಯಿಸಲು ಶಾಸಕರು ಮತ್ತು ತರೀಕೆರೆ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಇನ್ನಷ್ಟೇ ಸಭೆ ನಡೆಸಬೇಕಿದೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಎಇಇ ದಕ್ಷಿಣಮೂರ್ತಿ. ಕಡೂರು ತಾಲ್ಲೂಕಿನ ಚೌಳಹಿರಿಯೂರು ಬಳಿ ಕಲ್ಕೆರೆಯ ಕುಕ್ಕಸಮುದ್ರ ಕೆರೆಯಿಂದ ಈಗಾಗಲೇ ರೈತರ ಬಳಕೆಗೆ ನೀರು ಹರಿಸಿದ್ದು ಅಲ್ಲಿ ಮಾತ್ರ ಶೇ 30ರ ಆಸುಪಾಸಿನಲ್ಲಿ ನೀರು ಇರುವುದರಿಂದ ಸದ್ಯಕ್ಕೆ ಕಾಲುವೆ ಮೂಲಕ ನೀರು ಹಾಯಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನೀರಿನ ಸಮಸ್ಯೆ ದೂರ

ಮೂಡಿಗೆರೆ: ತಾಲ್ಲೂಕಿನಲ್ಲಿ ವರ್ಷದ ಪ್ರಾರಂಭದಲ್ಲೇ ಉತ್ತಮ ಮಳೆಯಾಗಿರುವುದರಿಂದ ನೀರಿನ ಕೊರತೆಯ ಸಮಸ್ಯೆ ದೂರವಾಗಿದ್ದು ಜನ ಜಾನುವಾರುಗಳಿಗೆ ನೀರಿನ ಸಂಕಷ್ಟ ಇಲ್ಲದಂತಾಗಿದೆ. ಪ್ರತಿ ವರ್ಷವು ವರ್ಷದ ಮೊದಲ ಮಳೆಯು ಮಾರ್ಚ್ ಮಧ್ಯ ವಾರದಲ್ಲಿ ಬರುತ್ತಿತ್ತು. ಆದರೆ ಈ ಬಾರಿ ಜನವರಿ ಹಾಗೂ ಫೆಬ್ರವರಿಯಲ್ಲೇ ಮಳೆಯಾಗಿರುವುದರಿಂದ ಕಾಫಿ ತೋಟಗಳಿಗೆ ನೀರಾಯಿಸುವ ಕಾರ್ಯ ಸ್ಥಗಿತವಾಗಿರುವುದರಿಂದ ನದಿಗಳಲ್ಲಿ ನೀರು ಇಳಿಮುಖವಾಗದೇ ಹರಿಯುವಂತಾಗಿದೆ. ಹೇಮಾವತಿ ಜಪಾವತಿ ಸುಣ್ಣದಹಳ್ಳ ಸುಂಡೆಕೆರೆ ಸೇರಿದಂತೆ ಎಲ್ಲಾ ಹಳ್ಳಗಳಲ್ಲೂ ನೀರು ಹರಿಯುತ್ತಿದ್ದು ಮಳೆಗಾಲ ಪ್ರಾರಂಭವಾಗುವ ತನಕ ನೀರಿನ ಕೊರತೆ ಉದ್ಭವಿಸುವ ಸಂಕಷ್ಟ ಇಲ್ಲದಂತಾಗಿದೆ.

ಕೆರೆಗಳ ನೀರಿನ ಮಟ್ಟ ಇಳಿಕೆ

ಕೊಪ್ಪ: ತಾಲ್ಲೂಕಿನಲ್ಲಿ ಈ ಬಾರಿ ದಾಖಲೆ ಮಟ್ಟದಲ್ಲಿ ಮಳೆಯಾಗಿದ್ದರಿಂದ ಹಳ್ಳ ಕೊಳ್ಳಗಳು ನದಿ ತುಂಬಿ ಹರಿದಿದ್ದವು. ಕೆರೆಗಳ ಕೋಡಿ ಹರಿದಿತ್ತು. ಆದರೆ ಜನವರಿ ಕೊನೆ ವಾರದಿಂದಲೇ ಬಿಸಿಲಿನ ತಾಪ ಹೆಚ್ಚಾಗಿದ್ದು ಹಳ್ಳಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಕೆರೆಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಕಾಡು ಪ್ರಾಣಿಗಳು ಜಾನುವಾರುಗಳು ದಾಹ ತೀರಿಸಿಕೊಳ್ಳಲು ಹಳ್ಳ ಕೆರೆಗಳನ್ನು ಅವಲಂಬಿಸಿವೆ. ಕಾಡಿನ ಮಧ್ಯೆ ಹರಿಯುವ ಝರಿ ಸಣ್ಣ ತೊರೆಗಳಲ್ಲಿ ಈಗಾಗಲೇ ನೀರು ಬತ್ತಿದೆ. ಇನ್ನಷ್ಟು ಬಿಸಿಲಿನ ತಾಪ ಹೆಚ್ಚಾದಂತೆ ಅಗತ್ಯವಾಗಿ ಬೇಕಾಗುವಷ್ಟು ನೀರು ಸಿಗದೇ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಲಿವೆ. ಪ್ರತಿವರ್ಷ ಬಯಲು ಸೀಮೆಯಿಂದ ಮಲೆನಾಡು ಕಡೆಗೆ ಕುರಿಗಾಹಿಗಳು ಮೇವು ಮತ್ತು ನೀರಿಗಾಗಿ ಕುರಿಗಳನ್ನು ಕರೆತರುತ್ತಾರೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಮತ್ತು ನೀರು ಎರಡೂ ಕೊರತೆಯಾಗುತ್ತದೆ. ಕೃಷಿ ಚಟುವಟಿಕೆಗೆ ನೀರನ್ನು ಹೆಚ್ಚು ಬಳಸುವುದರಿಂದ ಕೆರೆ-ಕಟ್ಟೆಗಳಲ್ಲಿ ನೀರಿನ ಅಭಾವ ತಲೆದೋರುವ ಸಾಧ್ಯತೆ ಇದೆ.

ಬೇಸಿಗೆ ಎದುರಿಸಲು ಇಲ್ಲ ಸಮಸ್ಯೆ

ತರೀಕೆರೆ: ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ತಾಲ್ಲೂಕಿನ ವ್ತಾಪ್ತಿಯಲ್ಲಿ ಕೆರೆ-ಕಟ್ಟೆಗಳು ತುಂಬಿರುವುದರಿಂದ ಈ ಬಾರಿಯ ಬೇಸಿಗೆಯಲ್ಲಿ ನೀರಿನ ಕೊರತೆ ಆಗಲಾರದು. ಲಕ್ಕವಳ್ಳಿಯಲ್ಲಿರುವ ಭದ್ರಾ ಅಣೆಕಟ್ಟೆಯೂ ಸಹ ಎರಡು ಬಾರಿ ತುಂಬಿರುವುದರಿಂದ ನೀರಿನ ಕೊರತೆಯಾಗುವುದಿಲ್ಲ. ಇದರಿಂದಾಗಿ ಈ ಹೋಬಳಿಯಲ್ಲಿರುವ ಗ್ರಾಮಗಳಿಗೆ ಕುಡಿಯುವ ನೀರಾಗಲಿ ಕೃಷಿ ಮತ್ತಿತರೆ ಚಟುವಟಿಕೆಗಳಿಗೆ ನೀರಿನ ತೊಂದರೆ ಆಗುವುದಿಲ್ಲ ಎನ್ನುತ್ತಾರೆ ರೈತರು. ಅಮೃತಾಪುರ ಹೋಬಳಿ ವ್ಯಾಪ್ತಿಯಲ್ಲಿರುವ ಕೆರೆ-ಕಟ್ಟೆಗಳು ಮಳೆಗಾಲದಲ್ಲಿ ಭಾಗಶಃ ತುಂಬಿದ್ದವು. ಬೇಸಿಗೆ ಸಂದರ್ಭದಲ್ಲಿ ಕೆರೆಗಳಲ್ಲಿ ನೀರು ಕಡಿಮೆಯಾದರೂ ಉಬ್ರಾಣಿ ಏತ ನೀರಾವರಿ ಮತ್ತು ಭದ್ರಾ ಮೇಲ್ದಂಡೆ ನಾಲೆಯ ಮೂಲಕ ಕೆರೆಗಳಿಗೆ ನೀರು ತುಂಬಿಸುಲಾಗಿದೆ. ಇದರಿಂದಾಗಿ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ನೀರಿನ ಅಭಾವ ತಲೆದೋರದು. ಲಿಂಗದಹಳ್ಳಿ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿರುವ ಕೆರೆಕಟ್ಟೆಗಳು ಮಳೆಗಾಲದಲ್ಲಿ ತುಂಬಿದ್ದವು. ಆದರೆ ಬೇಸಿಗೆ ಕಾಲದಲ್ಲಿ ಬತ್ತುವ ಸೂಚನೆಗಳು ಇವೆ. ಈ ಭಾಗದ ಕೆರೆಗಳಿಗೆ ನೀರು ತುಂಬಿಸಲು ದೋರನಾಳು ಸಮೀಪ ನಿರ್ಮಾಣವಾಗುತ್ತಿರುವ ವಿವಿಧ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಘಟಕ ಕಾಮಗಾರಿ ಅಂತಿಮ ಹಂತ ತಲುಪಿಲ್ಲ. ಒಂದು ವೇಳೆ ಈ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಈ ಎರಡೂ ಹೊಬಳಿಯ ಜನ-ಜಾನುವಾರುಗಳಿಗೆ ನೀರಿನ ಕೊರತೆ ಅನುಭವಿಸಬೇಕಾಗುತ್ತದೆ. ಈಗಾಗಲೇ ಕೆಲವು ಭಾಗದಲ್ಲಿ ಅಂತರ್ಜಲ ಕುಸಿತದಿಂದ ಕೆಲ ಕೊಳವೆ ಬಾವಿಗಳಲ್ಲಿ ನೀರಿನ ಕೊರೆತೆಯಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ.

ಕೆರೆಗಳಲ್ಲಿದೆ ನೀರು: ಇಲ್ಲ ತೊಂದರೆ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಉತ್ತಮ ಮಳೆ ಆಗಿರುವುದರಿಂದ ಕೆರೆಗಳಲ್ಲಿ ನೀರು ಕಡಿಮೆಯಾಗಿಲ್ಲ. ಸದ್ಯಕ್ಕೆ ಜಾನುವಾರುಗಳಿಗೆ ಸಮಸ್ಯೆಯಿಲ್ಲ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಹುತೇಕರು ಕೃಷಿಗೆ ಕೊಳವೆ ಬಾವಿಗಳನ್ನೂ ಅವಲಂಭಿಸಿದ್ದಾರೆ. ಕೆರೆಯ ನೀರನ್ನು ಬಳಸುವವರ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ತಾಲ್ಲೂಕಿನ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ 451 ಕೆರೆಗಳಿವೆ. ಸದ್ಯ ಕೆರೆಗಳಲ್ಲಿ ಸಾಕಷ್ಟು ನೀರು ಲಭ್ಯತೆಯಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡಿಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಅಲ್ಲದೆ ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಕೊಳವೆ ಬಾವಿಯಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಕುಡಿಯುವ ನೀರಿನ ಸಮಸ್ಯೆ ಉದ್ಭವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ತಾಲ್ಲೂಕಿನ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಕುಡಿಯುವ ನೀರಿನ ಸಮಸ್ಯೆಯಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ. ನವೀನ್ ಕುಮಾರ್ ತಿಳಿಸಿದರು. ಜಾನುವಾರುಗಳಿಗೆ ಇನ್ನೂ 32 ವಾರಗಳಿಗೆ ಸಾಕಾಗುವಷ್ಟು ಮೇವಿನ ಲಭ್ಯತೆಯಿದೆ ಎಂದು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪ್ರೀತಂ ತಿಳಿಸಿದರು. ತಾಲ್ಲೂಕಿನಲ್ಲಿ ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಬಹುತೇಕರು ಕೊಳವೆಬಾವಿಯ ನೀರನ್ನೆ ಅವಲಂಭಿಸಿದ್ದಾರೆ. ಹಾಗಾಗಿ ಕೆರೆ ನೀರನ್ನು ಆಶ್ರಯಿಸಿರುವವರು ಕಡಿಮೆ. ಹಾಗಾಗಿ ಕೆರೆಗಳಲ್ಲಿ ನೀರಿನ ಲಭ್ಯತೆಯಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರೋಹಿತ್ ತಿಳಿಸಿದರು.

ಪೂರಕ ಮಾಹಿತಿ: ಕೆ.ವಿ. ನಾಗರಾಜ್, ಕೆ. ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಎನ್. ಸೋಮಶೇಖರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.