ADVERTISEMENT

ಚಿಕ್ಕಮಗಳೂರು | ನಗರಸಭೆ: ಗದ್ಧಲ, ಪ್ರತಿಭಟನೆ, ಸಭಾತ್ಯಾಗ

ಶೀಲಾ ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 4:59 IST
Last Updated 5 ಆಗಸ್ಟ್ 2025, 4:59 IST
ಚಿಕ್ಕಮಗಳೂರು ನಗರಸಭೆ ಸಾಮಾನ್ಯ ಸಭೆಇಂದ ಹೊರ ನಡೆಯುತ್ತಿರುವ ಕಾಂಗ್ರೆಸ್ ಸದಸ್ಯರು
ಚಿಕ್ಕಮಗಳೂರು ನಗರಸಭೆ ಸಾಮಾನ್ಯ ಸಭೆಇಂದ ಹೊರ ನಡೆಯುತ್ತಿರುವ ಕಾಂಗ್ರೆಸ್ ಸದಸ್ಯರು   

ಚಿಕ್ಕಮಗಳೂರು: ಸದಸ್ಯರು ಕುಳಿತುಕೊಳ್ಳಲು ನಗರಸಭೆ ಕಟ್ಟಡದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವ ವಿಷಯ ಸಾಮಾನ್ಯಸಭೆಯಲ್ಲಿ ಚರ್ಚೆಯಾಗಿ ಗದ್ದಲ, ಪ್ರತಿಭಟನೆ, ಸಭಾತ್ಯಾಗಕ್ಕೆ ಕಾರಣವಾಯಿತು.

ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್‌ ಅವರು ನಡೆಸಿದ ಮೊದಲ ಸಭೆಯಲ್ಲಿ ಹಲವು ಪ್ರತಿಭಟನೆಗಳನ್ನು ಎದುರಿಸಿದರು.

‘ನಗರಸಭೆಯಲ್ಲಿ ಅಧ್ಯಕ್ಷ, ‌‌ಉಪಾಧ್ಯಕ್ಷರಿಗೆ ಮಾತ್ರ ಪ್ರತ್ಯೇಕ ಕೊಠಡಿ ಇವೆ. ಕಚೇರಿ ಕಡೆ ಬಂದರೆ ಸದಸ್ಯರು ಕಚೇರಿಯ ಹೊರಗೆ ನಿಲ್ಲಬೇಕಾದ ಸ್ಥಿತಿ ಇದೆ. ಸದಸ್ಯರು ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿ ತೆರೆಯಬೇಕು ಎಂದು ಹಿಂದಿನ ಸಭೆಯಲ್ಲಿ ನಿರ್ಣಯಿಸಲಾಗಿದೆ. ಆದರೂ, ಈವರೆಗೆ ಕ್ರಮ ಕೈಗೊಂಡಿಲ್ಲ’ ಎಂದು ಕಾಂಗ್ರೆಸ್ ಸದಸ್ಯರು ದೂರಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಸದಸ್ಯ ಎ.ಸಿ.ಕುಮಾರಗೌಡ, ‘ಸದಸ್ಯರು ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿ ನಿರ್ಮಿಸಿಸಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದರು. ಇದರಿಂದ ಸಿಡಿಮಿಡಿಗೊಂಡ ಕಾಂಗ್ರೆಸ್ ಸದಸ್ಯರು, ‘ಅಧ್ಯಕ್ಷರು ನಿಮ್ಮ ಪಕ್ಷದವರು ಎಂಬ ಕಾರಣಕ್ಕೆ ಹೀಗೆ ಮಾತನಾಡುವುದು ಸರಿಯಲ್ಲ. ನೀವು ಅಧ್ಯಕ್ಷರ ಕೊಠಡಿಯಲ್ಲಿ ಕೂರಿತ್ತೀರಿ, ನಾವು ಎಲ್ಲಿ ಕೂರಬೇಕು’ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು. ಬಿಜೆಪಿಯಿಂದ ಅಮಾನತುಗೊಂಡಿರುವ ವರಸಿದ್ಧಿ ವೇಣುಗೋಪಾಲ್ ಸೇರಿ ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರ ಬಂದು ಘೋಷಣೆ ಕೂಗಿದರು.

‘ನಗರಸಭೆಗೆ ಮೂವರು ಅಧ್ಯಕ್ಷರಿದ್ದಾರೆ. ಶೀಲಾ ದಿನೇಶ್ ಅವರು ಹೆಸರಿಗಷ್ಟೇ ಇದ್ದರೆ, ವಿಧಾನ ಪರಿಷತ್ ಎಸ್.ಎಲ್.ಭೋಜೇಗೌಡ ಮತ್ತು ಸದಸ್ಯ ಎ.ಸಿ.ಕುಮಾರಗೌಡ ಅವರೇ ಅಧ್ಯಕ್ಷರಂತೆ ವರ್ತಿಸುತ್ತಿದ್ದಾರೆ. ನಗರಸಭೆಗೆ ಮೂವರು ಅಧ್ಯಕ್ಷರು ಬೇಕಿಲ್ಲ. ಒಬ್ಬರೇ ಸಾಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯ ಟಿ.ರಾಜಶೇಖರ್‌ ಹೊರ ಬಂದು ಕಾಂಗ್ರೆಸ್ ಸದಸ್ಯರ ಮನವೊಲಿಸಲು ಯತ್ನಿಸಿದರು. ಒಪ್ಪದೇ ಪ್ರತಿಭಟನೆ ಮುಂದುವರಿಸಿದರು. ಬಳಿಕ ಶೀಲಾ ದಿನೇಶ್ ಅವರನ್ನೇ ಕರೆತಂದ ರಾಜಶೇಖರ್ ಅವರು, ಮನವೊಲಿಸುವಲ್ಲಿ ಯಶಸ್ವಿಯಾದರು.

ಬಳಿಕ ಮಾತನಾಡಿದ ಟಿ.ರಾಜಶೇಖರ್, ‘ಶೀಲಾ ದಿನೇಶ್ ಅವರು ಅಧ್ಯಕ್ಷರಾದಾಗ ಮೂರು ಪಕ್ಷಗಳು ನಮ್ಮ ಅಧ್ಯಕ್ಷರು ಎಂದು ಹೇಳಿಕೊಂಡಿದ್ದೇವೆ. ಈಗ ಅವರ ವಿರುದ್ಧ ಘೋಷಣೆ ಕೂಗುವುದು ಸರಿಯಲ್ಲ. ಸದಸ್ಯರು ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿಯ ಅವಶ್ಯಕತೆ ಇದೆ. ಕಡಿಮೆ ಖರ್ಚಿನಲ್ಲಿ ಸೂಕ್ತವಾದ ಜಾಗದಲ್ಲಿ ವ್ಯವಸ್ಥೆ ಆಗಬೇಕು’ ಎಂದು ಸಲಹೆ ನೀಡಿದರು.

ಆಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ‘ಕೊಠಡಿ ವ್ಯವಸ್ಥೆಯನ್ನು ಶೀಘ್ರವೇ ಮಾಡಲಾಗುವುದು. ಆ.15ರ ಸ್ವಾತಂತ್ರ್ಯೋತ್ಸವದ ದಿನವೇ ಆ ಕೊಠಡಿಯ ಉದ್ಘಾಟನೆಯನ್ನೂ ಮಾಡೋಣ’ ಎಂದು ತಿಳಿಸಿದರು.

ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ:

ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸಲು ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೀದಿ ಬದಿ ವ್ಯಾಪಾರಿಗಳು ನಗರಸಭೆ ಬಳಿ ಪ್ರತಿಭಟನೆ ನಡೆಸಿದರು. ಸಭೆ ಆರಂಭದಲ್ಲಿ ಸಭಾಂಗಣದ ದ್ವಾರದಲ್ಲಿ ನಿಂತಿದ್ದ 15ಕ್ಕೂ ಹೆಚ್ಚು ವ್ಯಾಪಾರಿಗಳು ನಗರಸಭೆ ವಿರುದ್ಧ ಘೋಷಣೆ ಹಾಕಿದರು. ಸಭಾಂಗಣದ ಬಾಗಿಲು ತೆರೆದು ಒಳ ನುಗ್ಗಲು ಯತ್ನಿಸಿದರು. ಸಿಬ್ಬಂದಿ ತಡೆದು ಹೊರಗೆ ಕಳುಹಿಸಿದರು. ಬಳಿಕ ಹೊರ ಭಾಗದಲ್ಲಿ ಪ್ರತಿಭಟನೆ ಮುಂದುವರೆಸಿದರು. ‘ಬಳಿಕ ಈ ವಿಷಯ ಸಭೆಯಲ್ಲೂ ಚರ್ಚೆಯಾಯಿತು. ವ್ಯಾಪಾರಿಗಳಿಗೆ ವಿನಾಕಾರಣ ತೊಂದರೆ ನೀಡಬಾರದು. ಅವರೂ ಸುಂಕ ನೀಡುತ್ತಿದ್ದಾರೆ. ತೊಂದರೆ ಕೊಟ್ಟರೆ ಅವರು ಎಲ್ಲಿಗೆ ಹೋಗಬೇಕು’ ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದರು.   

ನಾಲ್ಕನೇ ಬಾರಿ ಟೆಂಡರ್:

‘ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಹಿಡಿದು ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲು ನಾಲ್ಕನೇ ಬಾರಿ ಟೆಂಡರ್ ಕರೆಯಲಾಗಿದೆ’ ಎಂದು ಆಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು. ಈ ಸಂಬಂಧ ಮೂರು ಬಾರಿ ಟೆಂಡರ್‌ ಕರೆಯಾಗಿತ್ತು. ಯಾರೂ ಅರ್ಜಿ ಸಲ್ಲಿಸಲಿಲ್ಲ.  ಈಗ ಸಂಸ್ಥೆಯನ್ನು ಸಂಪರ್ಕಿಸಿ ಮಾತನಾಡಿದ್ದೇವೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.