ನರಸಿಂಹರಾಜಪುರ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಗುರುವಾರ ದಿಂದ ಕಾರ್ಯರಂಭ ಮಾಡಿದೆ.
ಕೋವಿಡ್ ಸಂದರ್ಭದಲ್ಲಿ ಕೋವಿಡ್ ಬಾಧಿಸಿದವರಿಗೆ ಆಮ್ಲಜನಕದ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ 2021ರಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆ ಆರಂಭಿಸಿತ್ತು. ಕೇಂದ್ರ ಸರ್ಕಾರದ ₹1ಕೋಟಿ ವೆಚ್ಚದಲ್ಲಿ 500 ಎಲ್‌ಪಿಎಂ ಸಾಮರ್ಥ್ಯದ ಪಿಎಸ್‌ಎ ಉತ್ಪಾದನಾ ಘಟಕ ಹಾಗೂ ರಾಜ್ಯ ಸರ್ಕಾರದ ₹30ಲಕ್ಷ ಅನುದಾನದಲ್ಲಿ ಶುದ್ಧಆಮ್ಲಜನಕ ಉತ್ಪಾದಿಸುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಇದಾಗಿದೆ. ಆಮ್ಲಜನಕ ಉತ್ಪಾದನಾ ಘಟಕಕ್ಕೆ ಬೇಕಾಗುವ 250 ಕೆ.ವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಸದೇ ಇದ್ದುದರಿಂದ ಆಮ್ಲಜನಕ ಉತ್ಪಾದನಾ ಘಟಕ ಆರಂಭಕ್ಕೆ ವಿಳಂಬವಾಗಿತ್ತು.
ಈ ಬಗ್ಗೆ ಪ್ರಜಾವಾಣಿಯ 14 ಮಾರ್ಚ್, 2024ರಂದು ನರಸಿಂಹರಾಜಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ: ವೋಲ್ಟೇಜ್ ಸಮಸ್ಯೆಯೂ ತೀವ್ರ ಆಮ್ಲಜನಕ ಘಟಕ ‘ಆರಂಭ’ ಕ್ಕೆ ವಿಘ್ನ ಎಂಬ ಶೀರ್ಷಿಕೆಯಡಿ ವಿಸ್ತೃತವರದಿ ಪ್ರಕಟಿಸಿತ್ತು.
ಈ ವರದಿಗೆ ಸ್ಪಂದಿಸಿರುವ ಇಲಾಖೆ ವಿದ್ಯುತ್ ಪರಿವರ್ತಕ ಅಳವಡಿಸಿ ಆಮ್ಲಜನಕ ಉತ್ಪಾದನೆಗೆ ಚಾಲನೆ ನೀಡಿದೆ.
ಆಮ್ಲಜನಕ ಉತ್ಪಾದನಾ ಘಟಕಕ್ಕೆ ಗುರುವಾರ ವಿದ್ಯುತ್ ಸಂಪರ್ಕ ನೀಡಿ ಪ್ರಾಯೋಗಿಕವಾಗಿ ಆಮ್ಲಜನಕ ಉತ್ಪಾದನೆ ಮಾಡಲಾಗಿದೆ. ಕೊಳವೆ ಮಾರ್ಗದಲ್ಲಿ ಸಣ್ಣಪುಟ್ಟ ದುರಸ್ತಿಕಾರ್ಯವಿದ್ದು ಇದನ್ನು ದುರಸ್ತಿಪಡಿಸಿ ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು ಎಂದು ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.