ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಜನರಿಗೆ ಹರ್ಷ ತಂದಿದೆ. ಮುಂಗಾರು ಮಳೆಯೂ ಉತ್ತಮವಾಗಿ ಬರುವ ನಿರೀಕ್ಷೆ ಇದೆ. ಬೊಂಬಿನ ಮೇಲಿನ ನಡೆದು ಸಾಗಬೇಕಿರುವ ಜನರಲ್ಲಿ ಆತಂಕ ಉಳಿದುಕೊಂಡಿದೆ.
ಶೃಂಗೇರಿ, ಎನ್.ಆರ್.ಪುರ, ಕೊಪ್ಪ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಮರದ ಬೊಂಬಿನ ಮೇಲೆ ಸಾಗಿ ಮನೆ ತಲುಪಬೇಕಾದ ಜನವಸತಿಗಳು ಇಂದಿಗೂ ಸಾಕಷ್ಟಿವೆ. ಮರದ ದಿಮ್ಮಿ, ಕಟ್ಟಿಗೆ, ಹಲಗೆ, ಬಿದಿರು ಬಳಸಿ ಜನರೇ ಕಾಲುಸಂಕಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಹಳ್ಳ, ತೊರೆ, ಹೊಳೆಗಳು ಉಕ್ಕಿ ಹರಿಯುತ್ತವೆ. ಈ ಮರದ ಸಂಕಗಳು ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆಗಳು ಹೆಚ್ಚು.
ತೀರ್ಥಹಳ್ಳಿ ತಾಲ್ಲೂಕಿನ ಶಾಲಾ ಬಾಲಕಿ ಮತ್ತು ವ್ಯಕ್ತಿಯೊಬ್ಬರು ಕಾಲಸಂಕ ದಾಟುವಾಗ 2006ರಲ್ಲಿ ಹಳ್ಳಕ್ಕೆ ಬಿದ್ದಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಲಾ ಸಂಪರ್ಕ ಸೇತು ಎಂಬ ಯೋಜನೆ ರೂಪಿಸಿ ಹಣವನ್ನೂ ಬಿಡುಗಡೆ ಮಾಡಿದ್ದರು. 2019–20ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದಲ್ಲಿ 1,317 ಕಿರು ಸೇತುವೆಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಈವರೆಗೆ 200ಕ್ಕೂ ಹೆಚ್ಚು ಕಾಲುಸಂಕಗಳು ನಿರ್ಮಾಣವಾಗಿವೆ. ಈ ವರ್ಷವನ್ನೂ 200 ಸಂಕಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಕ್ರಿಯಾ ಯೋಜನೆಯೂ ರೂಪುಗೊಂಡಿದೆ.
ಇನ್ನೂ ಕೆಲವೆಡೆ ಜಾಗದ ಸಮಸ್ಯೆಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಕೆಲವೆಡೆ ಇನ್ನೂ ಕಾಮಗಾರಿಯೇ ಆರಂಭವಾಗಿಲ್ಲ. ಆದ್ದರಿಂದ ಕಾಲು ಸಂಕಗಳನ್ನು ದಾಟಿ ಜೀವನ ನಡೆಸಬೇಕಾದ ಸ್ಥಿತಿ ಮಲೆನಾಡಿನಲ್ಲಿ ಇನ್ನೂ ಇದೆ.
ಪೂರಕ ಮಾಹಿತಿ: ಕೆ.ವಿ.ನಾಗರಾಜ್, ಕೆ.ಎನ್.ರಾಘವೇಂದ್ರ, ರವಿಕುಮಾರ್ ಶೆಟ್ಟಿಹಡ್ಲು, ರವಿ ಕೆಳಂಗಡಿ
ನರಸಿಂಹರಾಜಪುರ: ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು– ದಾವಣ ಮಾರ್ಗದ ಮಧ್ಯ ಹರಿಯುವ ಹಳ್ಳಕ್ಕೆ ಇದುವರೆಗೂ ಕಾಲು ಸಂಕ ನಿರ್ಮಾಣವಾಗಿಲ್ಲ. ಇದರಿಂದಾಗಿ ಮರದ ದಿಮ್ಮಿಯನ್ನು ಆಸರೆಯಾಗಿ ಬಳಸಿಕೊಳ್ಳಲಾಗಿದೆ. ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲೆಕುಡಿಗೆಯಿಂದ ರಾಮನಹಡ್ಲು ಮಧ್ಯೆ ಹರಿಯುವ ಹಳ್ಳಕ್ಕೆ ಈ ಹಿಂದೆ ಮರದಿಂದ ನಿರ್ಮಿಸಲಾಗಿದ್ದ ಕಾಲು ಸಂಕ ಶಿಥಿಲವಾಗಿದೆ. ಇದರಿಂದ ಗ್ರಾಮಸ್ಥರು ಸುತ್ತಿ ಬಳಸಿ ರಸ್ತೆ ಮಾರ್ಗದ ಮೂಲಕ ಗ್ರಾಮಕ್ಕೆ ಹೋಗಬೇಕಾಗಿದೆ. ಕಾಲು ಸಂಕ ನಿರ್ಮಿಸಿದರೆ ಗ್ರಾಮಕ್ಕೆ ಹತ್ತಿರದ ಮಾರ್ಗವಾಗಲಿದೆ.
ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬಿಗುಂಡಿ ಬಳಿ ಕಿಚ್ಚಬ್ಬಿ ಹಳ್ಳಕ್ಕೆ ಕಾಲು ಸಂಕ ನಿರ್ಮಿಸಿದರೆ ಮೇಗರಮಕ್ಕಿ ಮತ್ತು ಆಡುವಳ್ಳಿ ಗ್ರಾಮಕ್ಕೆ ಸಮೀಪದ ಮಾರ್ಗವಾಗಲಿದೆ. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆಗದ್ದೆಯಿಂದ ಹೊಸಕೊಪ್ಪದ ಮಧ್ಯ ಹರಿಯುವ ಹಳ್ಳಕ್ಕೆ ಈವರೆಗೂ ಕಾಲು ಸಂಕ ನಿರ್ಮಾಣವಾಗಿಲ್ಲ. ಹಳ್ಳ ದಾಟಲು ಗ್ರಾಮಸ್ಥರು, ಶಾಲಾ, ಕಾಲೇಜು ಮಕ್ಕಳು ಮರದ ದಿಮ್ಮಿಯನ್ನೇ ಆಶ್ರಯಿಸಿದ್ದಾರೆ.
ತಾಲ್ಲೂಕು ಪಂಚಾಯಿತಿಯಿಂದ ಸಂಗ್ರಹಿಸಿರುವ ಅಂಕಿ– ಅಂಶಗಳ ಪ್ರಕಾರ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಕಡೆ, ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಕಡೆ, ಮಾಗುಂಡಿ ವ್ಯಾಪ್ತಿಯಲ್ಲಿ 1 ಕಡೆ, ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಕಡೆ, ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಕಡೆ, ಕಾನೂರು ಗ್ರಾ.ಪಂ ವ್ಯಾಪ್ತಿಯ 13 ಕಡೆ, ಹೊನ್ನೆಕೂಡಿಗೆ ಗ್ರಾ.ಪಂ.ನಲ್ಲಿ 1 ಕಡೆ, ಬನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ 6 ಕಡೆ, ಸೀತೂರು ಗ್ರಾ.ಪಂ 1 ಕಡೆ, ಗುಬ್ಬಿಗಾ ಗ್ರಾ,ಪಂ 5 ಕಡೆ ಹೊಸದಾಗಿ ಕಾಲು ಸಂಕ ನಿರ್ಮಾಣದ ಅವಶ್ಯಕತೆಯಿದೆ ಎಂದು ಗುರುತಿಸಲಾಗಿದೆ. ಇವುಗಳ ನಿರ್ಮಾಣಕ್ಕೆ ತಗಲುವ ಅಂದಾಜು ವೆಚ್ಚ ₹4.33 ಕೋಟಿ ಎಂದು ಕ್ರಿಯಾಯೋಜನೆ ರೂಪಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಬಿ.ಕಣಬೂರು ಗ್ರಾ.ಪಂ ವ್ಯಾಪ್ತಿಯಲ್ಲಿ 1, ಕಡಹಿನಬೈಲು ಗ್ರಾ,ಪಂ ವ್ಯಾಪ್ತಿಯಲ್ಲಿ 3, ಕರ್ಕೇಶ್ವರ ವ್ಯಾಪ್ತಿಯಲ್ಲಿ 3 ಹಾಗೂ ಸೀತೂರು ಭಾಗದಲ್ಲಿ 1 ಕಾಲು ಸಂಕ ಹಾನಿಗೊಳಗಾಗಿದ್ದು, ಇದರ ದುರಸ್ತಿಗೆ ₹41 ಲಕ್ಷದ ಕ್ರಿಯಾ ಯೋಜನೆ ರೂಪಿಸಲಾಗಿದೆ.
ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಒಂದು ಕಾಲು ಸಂಕ ನಿರ್ಮಿಸಲಾಗಿದೆ ಎಂದು ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಮನಿಷ್ ತಿಳಿಸಿದರು. ರಾಮಹಡ್ಲು– ಎಲೆಕುಡಿಗೆ ಮಧ್ಯೆ ಹರಿಯುವ ಹಳ್ಳಕ್ಕೆ ಕಾಲು ಸಂಕ ನಿರ್ಮಿಸಿದರೆ ಜನರಿಗೆ ಹತ್ತಿರದ ಮಾರ್ಗವಾಗಲಿದೆ ಎಂದು ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ತಿಳಿಸಿದರು.
ಕೊಪ್ಪ: ತಾಲ್ಲೂಕಿನ ಗಡಿ ಭಾಗವಾದ ಕೆಸುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದರಮಠದ ಸಮೀಪ ಮಾತ್ಗಾರ್ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಬಾಂದ್ ಹಡ್ಲು ಎಂಬಲ್ಲಿ ಅಡ್ಡಲಾಗಿ ಹರಿಯುವ ಬ್ರಾಹ್ಮಿ ನದಿಗೆ ಕಿರು ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಎರಡು ಊರುಗಳ ಸಂಪರ್ಕಕ್ಕೆ ಪ್ರಸ್ತುತ ಸ್ಥಳೀಯರು ಮರದ ದಿಮ್ಮಿ ಬಳಸಿ ನಿರ್ಮಿಸಿದ ಕಾಲು ಸಂಕವೇ ಆಧಾರ. 8-9 ಮನೆಗಳಿರುವ ಇಲ್ಲಿನ ಜನರು ಕಾಲು ಸಂಕವನ್ನು ಪ್ರತಿ ಬಾರಿ ಮಳೆಗಾಲದಲ್ಲಿ ದುರಸ್ಥಿ ಮಾಡುತ್ತಾರೆ.
ಸೊಪ್ಪು ಕಟ್ಟಿಗೆ ಸಾಗಿಸಲು ಈ ಕಾಲು ಸಂಕವನ್ನು ಆಶ್ರಯಿಸಿದ್ದಾರೆ. ಎರಡು ವರ್ಷಗಳ ಹಿಂದೆ ಕಿರು ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದ್ದು ಕೇವಲ ಪಿಲ್ಲರ್ ಹಾಕಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಆದಷ್ಟು ಬೇಗ ಗಾಮಗಾರಿ ಆರಂಭಿಸಿ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಶೃಂಗೇರಿ: ತಾಲ್ಲೂಕಿನ ಹಲವು ಕಡೆ ಗ್ರಾಮಸ್ಥರಿಗೆ ಪಟ್ಟಣಕ್ಕೆ ಬರಲು ಸಂಪರ್ಕವಿರುವುದು ಕಾಲುಸಂಕ ಮಾತ್ರ. ಕಾಲುಸಂಕದಲ್ಲಿ ಜನರು ದಾಟಲು ಹರಸಹಾಸ ಪಡುತ್ತಿದ್ದಾರೆ.
ಕೂಗೋಡು, ಮೀನಗರಡಿ, ವಾಮನಸರಳು, ವಂದಗದ್ದೆ, ಮಲಂದೂರು, ಅವುಂಟು, ಶೀರ್ಲು, ದೋಣುರೂ, ತಾರೋಳ್ಳಿಕೊಡಿಗೆ, ಬೆಳಗೋಡುಕೊಡಿಗೆ, ಅಸನುಬಾಳು, ಕೋಟೆ, ಹಾರುಗೋಪ್ಪ, ಕಲಿಗೆ, ತಲವಂತಿ ಕೊಡಿಗೆ, ದೇವಾಲೆಕೊಪ್ಪದ ಗ್ರಾಮಗಳಲ್ಲಿ ವಾಸಿಸುವ ಜನರು ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಕಾಲು ಸಂಕಗಳ ಮೂಲಕ ಜನ ಓಡಾಡುತ್ತಿದ್ದಾರೆ. ಈ ಊರಿನಲ್ಲಿರುವ ಎಲ್ಲಾ ಕಾಲು ಸಂಕಗಳು ಅಪಾಯದ ಹಂತದಲ್ಲಿವೆ. ಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಗ್ರಾಮ ನಕ್ಸಲ್ ಪೀಡಿತ ಪ್ರದೇಶ. ಇಲ್ಲಿರುವ ಮೀನಗರಡಿ, ವಂದಗದ್ದೆ, ಹಾರುಗೋಪ್ಪಯ ಕಾಲು ಸಂಕಗಳು ಇಂದಿಗೂ ಅಪಾಯಕಾರಿ ಸಂಕಗಳು. ಮಳೆಗಾಲದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಡಿತದಿಂದ ಇಲ್ಲಿನ ಜನರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಹಿರಿಯರು ಬಿಟ್ಟು ಹೋದ ಅಲ್ಪಸ್ವಲ್ಪ ಆಸ್ತಿಗಳನ್ನು ನೋಡಿಕೊಳ್ಳುತ್ತಾ ಕೂಲಿ ಮಾಡುವ ಇಲ್ಲಿನ ಶೇ85ರಷ್ಟು ಜನ ಗಿರಿಜನರು. ಮಕ್ಕಳು ಶಾಲೆಗೆ ಬರಲು, ವೈದ್ಯಕೀಯ ಸೌಲಭ್ಯ ಹಾಗೂ ದಿನಬಳಕೆ ವಸ್ತುಗಳನ್ನು ಪಡೆಯಲು ಪಟ್ಟಣಕ್ಕೆ ಬರಲು ಕಾಲು ಸಂಕವನ್ನು ದಾಟಿ ಬರಬೇಕು.
ಕೆಲವಡೆ ಗ್ರಾಮಸ್ಥರು ಹರಿಯುವ ಹಳ್ಳಗಳ ರಭಸಕ್ಕೆ ಕಾಲು ಸಂಕವನ್ನು ತಾವೇ ನಿರ್ಮಿಸಿಕೊಂಡಿದ್ದಾರೆ. ಏಕೆಂದರೆ ರಾಜಕಾರಣಿಗಳು ಚುನಾವಣೆ ಸಮಯದಲ್ಲಿ ನೀಡುವ ಭರವಸೆ ಮರೀಚಿಕೆಯಾಗಿ ಉಳಿದಿದೆ.
ಗ್ರಾಮಸ್ಥರು ಹಳ್ಳಗಳ ಅಸುಪಾಸಿನಲ್ಲಿರುವ ಮರಗಳಿಗೆ ಪ್ಲಾಸ್ಟಿಕ್ ಹಗ್ಗ ಕಟ್ಟಿ ಸಂಕವನ್ನು ನಿರ್ಮಿಸಿಕೊಳ್ಳುತ್ತಾರೆ. ಆರೋಗ್ಯದಲ್ಲಿ ಏರುಪೇರು ಉಂಟಾದರೆ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಲು ಪರದಾಡುವ ಸ್ಥಿತಿಯಿದೆ. ಗ್ರಾಮೀಣ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡು ಕೃಷಿ ಕಾಯಕದಲ್ಲಿ ನಿರತರಾಗಿರುವ ಬಡಜನರ ಗೋಳು ಕೇಳುವರು ಯಾರು ಎಂದು ಗ್ರಾಮಸ್ಥರಾದ ಚಂದ್ರೇಗೌಡ, ಸುಮಿತ್ರಾ, ಲಲಿತಾ ಪ್ರಶ್ನಿಸುತ್ತಾರೆ. ಗ್ರಾಮೀಣ ಜನರ ಆರೋಗ್ಯ ರಕ್ಷಣೆಗಾಗಿ ತಾಲ್ಲೂಕಿನಲ್ಲಿ ಕಾಲು ಸಂಕಗಳು ಸೇತುವೆಯಾಗಿ ನಿರ್ಮಾಣ ಮಾಡುವುದಕ್ಕೆ ಸಂಬಂಧಪಟ್ಟ ಇಲಾಖೆಗಳು ಅನುದಾನ ಬಿಡುಗಡೆ ಮಾಡಬೇಕು ಎಂದು ನೆಮ್ಮಾ ರ್ ದಿನೇಶ್ ಹೆಗ್ಡೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.