ADVERTISEMENT

ಚಿಕ್ಕಮಗಳೂರು: ಗಣೇಶ ಹಬ್ಬಕ್ಕೆ ಮಲೆನಾಡಿನ ಜನ ಸಜ್ಜು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 3:51 IST
Last Updated 27 ಆಗಸ್ಟ್ 2025, 3:51 IST
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ಗಣಪತಿಗೆ ಕಲಾವಿದ ಚೇತನ್ ಅಂತಿಮ ಹಂತದ ರೂಪ ನೀಡುತ್ತಿರುವುದು
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ಗಣಪತಿಗೆ ಕಲಾವಿದ ಚೇತನ್ ಅಂತಿಮ ಹಂತದ ರೂಪ ನೀಡುತ್ತಿರುವುದು   

ಚಿಕ್ಕಮಗಳೂರು: ಗೌರಿ ಹಬ್ಬದ ಸಂಭ್ರಮದಲ್ಲಿ ಮಂಗಳವಾರ ಕಳೆದ ಜನ, ಬುಧವಾರ ಗಣಪತಿ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.

ಬೆಳಿಗ್ಗೆಯಿಂದಲೇ ಗೌರಿ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿತ್ತು. ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆದವು. ಬುಧವಾರ ಗಣೇಶ ಹಬ್ಬವಿದ್ದು, ಮೂರ್ತಿ ಪ್ರತಿಷ್ಠಾಪನೆಗೆ ಗಲ್ಲಿ ಗಲ್ಲಿಗಳಲ್ಲಿ ಯುವಕರ ಪಡೆ ಸಜ್ಜಾಗಿದೆ. ಕೊನೆಯ ಹಂತದ ಸಿದ್ಧತೆಗಳು ಭರದಿಂದ ಸಾಗಿದವು.

ನಗರದ ಆಜಾದ್ ಪಾರ್ಕ್ ಸಾರ್ವಜನಿಕ ಗಣಪತಿ, ಹಿಂದೂಮಹಾ ಗಣಪತಿ, ವಿಜಯಪುರ ಗಣಪತಿ, ಕೋಟೆ, ರಾಮನಹಳ್ಳಿ, ದಂಟರಮಕ್ಕಿ, ಜಯನಗರ, ಹೊಸಮನೆ ಬಡಾವಣೆ, ಉಂಡೇದಾಸರಹಳ್ಳಿ, ಕೆಂಪನಹಳ್ಳಿ ಸೇರಿದಂತೆ ಹಲವೆಡೆ ಪೆಂಡಾಲ್‌ಗಳು ನಿರ್ಮಾಣವಾಗಿವೆ. ನಗರದ ಬಸವನಹಳ್ಳಿ ರಸ್ತೆಯಲ್ಲಿ ದೀಪಾಲಂಕಾರ ಜಗಮಗಿಸುತ್ತಿದ್ದು, ಎಲ್ಲಾ ಬೀದಿಗಳು ಸಿಂಗಾರಗೊಂಡಿವೆ.

ADVERTISEMENT

ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರ ಓಂಕಾರೇಶ್ವರ ದೇವಸ್ಥಾನದ ಆವರಣ, ಹನುಮಂತಪ್ಪ ವೃತ್ತ, ಬಸವನಹಳ್ಳಿ ರಸ್ತೆ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿವೆ.ಬೋಳರಾಮೇಶ್ವರ ದೇವಾಲಯವೂ ವಿವಿಧ ಬಗೆಯ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿತು. 

ಮಂಗಳವಾರ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿತ್ತು. ಹೂವಿನ ದರ ಇನ್ನಷ್ಟು ಏರಿಕೆಯಾಗಿತ್ತು. ಆದರೂ, ಹಬ್ಬದ ಸಂಭ್ರಮದಲ್ಲಿರುವ ಜನ ಖರೀದಿಸಿದರು.

ನಗರದಲ್ಲಿ ಪ್ರತಿಷ್ಠಾಪಿಸುವ ಗಣೇಶ ವಿಗ್ರಹಗಳನ್ನು ನಗರಸಭೆ ನಿಗದಿಪಡಿಸಿದ ಕೆರೆ ಅಥವಾ ಸ್ಥಳದಲ್ಲೇ ವಿಸರ್ಜಿಸಬೇಕು ಎಂದು ಸೂಚನೆ ನೀಡಲಾಗಿದೆ. ಅಲ್ಲದೇ ಸಂಚಾರಿ ಟ್ಯಾಂಟ್‌ಗಳನ್ನು ನಗರದ ಅಲ್ಲಲ್ಲಿ ಸ್ಥಾಪಿಸಿದ್ದು, ಮನೆಯಲ್ಲಿನ ಗಣೇಶ ಮತ್ತಿತರೆ ಸಣ್ಣ ಮೂರ್ತಿಗಳನ್ನು ಅಲ್ಲಿ ವಿಸರ್ಜಿಸಬಹುದು. ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಈ ಬಾರಿ ಒಟ್ಟೊಟ್ಟಿಗೆ ಬಂದಿರುವುದರಿಂದ ಪೊಲೀಸರು ಎರಡು ಬಾರಿ ನಗರದಲ್ಲಿ ಪಥ ಸಂಚಲನ ನಡೆಸಿದ್ದಾರೆ.

ರಾಮೇಶ್ವರ ನಗರದ ಕಲಾವಿದರಾದ ಎಂ.ಆರ್. ಗಣೇಶ್ ಆಚಾರ್ಯ ಅವರು ನಿರ್ಮಿಸಿರುವ ಸುಮಾರು 8.5 ಅಡಿ ಎತ್ತರದ ಗಣಪತಿ ಮೂರ್ತಿ
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಗಣೇಶೋತ್ಸವದ ಅಂಗವಾಗಿ  ಹಿಂದೂ ಮಹಾಸಭಾದಿಂದ ಧರ್ಮಸ್ಥಳ ಮಹಾದ್ವಾರ ನಿರ್ಮಿಸಿರುವುದು

ಭೀಮನ ಅವತಾರದ ಗಣಪ:

ರಾಮೇಶ್ವರ ನಗರದ ಕಲಾವಿದ ಎಂ.ಆರ್.ಗಣೇಶ್ ಆಚಾರ್ಯ ಅವರು ಸುಮಾರು 8.5 ಅಡಿ ಎತ್ತರದ ಗಣಪತಿಯ ವಿಗ್ರಹ ನಿರ್ಮಿಸಿದ್ದಾರೆ. ಭೀಮನ ಅವತಾರ ಶೈಲಿಯ ಗಣ‍ಪತಿಗೆ ಅವರು ಮಂಗಳವಾರ ಅಂತಿಮ ಸ್ಪರ್ಶ ನೀಡಿದರು. ಈ ಗಣೇಶ ಮೂರ್ತಿ ಲಕ್ಷ್ಮಿನಗರದ ಬಡಾವಣೆಯಲ್ಲಿ ಟೀಮ್ ಎಸ್.ಜಿ.ಎಸ್ ಅವರ ನೇತೃತ್ವದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಇವರ ತಂದೆ ಎಂ.ಎನ್.ರಾಜಾಚಾರ್ ಹಾಗೂ ಕುಟುಂಬ 45 ವರ್ಷಗಳಿಂದ ಜಿಲ್ಲೆಯ ಹಲವಾರ ಭಾಗಗಳಿಗೆ ಗಣಪತಿ ವಿಗ್ರಹಗಳನ್ನು ನಿರ್ಮಿಸಿಕೊಟ್ಟಿದೆ. ಪರಿಸರ ಸ್ನೇಹಿಯಾಗಿರುವ ಈ ಗಣಪತಿ ವಿಭಿನ್ನ ರೀತಿಯ ಆಭರಣ ಹಾಗೂ ಸ್ಟೋನ್ ವರ್ಕ್‌ಗಳಿಂದ ವಿನ್ಯಾಸ ಮಾಡಲಾಗಿದೆ ಎಂದು ಗಣೇಶ್ ಆಚಾರ್ಯ ತಿಳಿಸಿದರು.

7 ಅತಿಸೂಕ್ಷ್ಮ 157 ಸೂಕ್ಷ್ಮ ಗಣೇಶ:

ಜಿಲ್ಲೆಯಲ್ಲಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಆಚರಣೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದರು. 1730 ಕಡೆ ಗಣೇಶೋತ್ಸವ ಆಚರಿಸಲಾಗುತ್ತಿದೆ. 7 ಅತಿಸೂಕ್ಷ್ಮ ಗಣೇಶ 157 ಸೂಕ್ಷ್ಮ ಗಣೇಶ ಎಂದು ಗುರುಸಿಸಲಾಗಿದೆ. ಜಿಲ್ಲೆಯಲ್ಲಿ 27 ಕಡೆ ಈದ್ ಮೀಲಾದ್ ಆಚರಿಸಲಾಗುತ್ತಿದೆ. ಮೂ 3 ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. ಯಾವುದೇ ಆಚರಣೆಗೂ ಪೊಲೀಸ್ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದರು. ಡಿ.ಜೆ.ಹಾಕುವುದನ್ನು ನಿಷೇಧಿಸಲಾಗಿದ್ದು ಸ್ಪೀಕರ್ ಹಾಕಿಕೊಳ್ಳಲು ಅವಕಾಶ ಇದೆ. ಹೆಚ್ಚಿನ ಶಬ್ಧ ಬಾರದಂತೆ ನೋಡಿಕೊಳ್ಳಲು ಸೌಂಡ್ ಆಪರೇಟರ್‌ಗಳ ಸಭೆ ಕರೆದು ತಿಳಿಸಲಾಗಿದೆ ಎಂದು ತಿಳಿಸಿದರು. 16 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. 25 ಸೂಕ್ಷ್ಮ ಸ್ಥಳಗಳನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ವಹಿಸಲು ತಂಡ ರಚಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.