
ಚಿಕ್ಕಮಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಜ.26ರಿಂದ ಮೂರು ದಿನ ಸುಭಾಷ್ ಚಂದ್ರಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಚೈತ್ರೋತ್ಸವ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ.26ರಂದು ಬೆಳಿಗ್ಗೆ 10 ಗಂಟೆಗೆ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟನೆ ಮಾಡಲಿದ್ದಾರೆ. ಪ್ರದರ್ಶನದಲ್ಲಿ ಭದ್ರಬಾಲ್ಯ ಯೋಜನೆ, ನಾದಲೋಕ ಸೇರಿ ಇತರ ಪುಷ್ಪ ಕಲಾಕೃತಿಗಳ ಪ್ರದರ್ಶನ ಇರಲಿದೆ. ಸಿರಿಧಾನ್ಯಗಳಿಂದ ಶಾರದಾಂಬೆ ಮೂರ್ತಿ, ಸಾಲುಮರದ ತಿಮ್ಮಕ್ಕ ಹಾಗೂ ಕರ್ನಾಟಕ ನಕ್ಷೆ ಅನಾವರಣಗೊಳ್ಳಲಿದೆ. ಪುರಾತನ ಕಾಲದಲ್ಲಿ ಬಳಸಿದ ಕರಾವಳಿ ಭಾಗದ ಸಾಮಾಗ್ರಿಗಳ ಪ್ರದರ್ಶನ ಇರಲಿದೆ ಎಂದು ವಿವರಿಸಿದರು.
ವಿವಿಧ ಬಣ್ಣಗಳ ಸುಮಾರು 8 ಸಾವಿರ ಹೂಕುಂಡಗಳ ಜೋಡಣೆ, ಇಕೇಬಾನ ಮಾದರಿಯ ಹೂವಿನ ಜೋಡಣೆ, ಪ್ರಸಿದ್ಧ ಕಲಾವಿದರಿಂದ ತರಕಾರಿಗಳಲ್ಲಿ ಪ್ರಾಣಿ-ಪಕ್ಷಿಗಳ ಕೆತ್ತನೆಯ ಕಲಾಕೃತಿಗಳು, ತೆಂಗಿನ ಗರಿಗಳನ್ನು ಬಳಕೆ ಮಾಡಿ ಜಾನೂರು ಆರ್ಟ್ ಹಾಗೂ ಕಾಫಿ ಗಿಡಗಳನ್ನು ಬಳಕೆ ಮಾಡಿಕೊಂಡು ಅಲಂಕೃತ ದ್ವಾರ ನಿರ್ಮಾಣ ಮಾಡಲಾಗುವುದು ಎಂದರು.
ಫಲಪುಷ್ಪ ಪ್ರದರ್ಶನದಲ್ಲಿ ಅಪರೂಪದ ವಿದೇಶಿ ಹಣ್ಣು, ತರಕಾರಿಗಳು, ವಿವಿಧ ಖಾದ್ಯಗಳು, ಇಳಕಲ್, ಮೊಳಕಾಲ್ಮೂರು, ಕಂಚಿಯ ಸೀರೆ ಹಾಗೂ ಇತರೆ ವಸ್ತುಗಳ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಎಸ್ಟೇಟ್ ಹಾಗೂ ನಗರವಾಸಿಗಳಿಗೆ ಉತ್ತಮ ಉದ್ಯಾನ ನಿರ್ವಹಣೆ ಸ್ಪರ್ಧೆ, ಹಣ್ಣುಗಳಿಂದ ತಯಾರಿಸಿದ ಖಾದ್ಯಗಳ ಫಲಪಾಕ ಸ್ಪರ್ಧೆ ಆಯೋಜಿಸಲಾಗಿದೆ. ಜತೆಗೆ ಮೀನುಗಾರಿಕೆ ಇಲಾಖೆಯಿಂದ ಅಲಂಕಾರಿಕ ಮೀನುಗಳ ಪ್ರದರ್ಶನ ಹಾಗೂ ಮಾರಾಟ, ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳುವಿನ ಜೀವನ ಚಕ್ರದ ಪ್ರಾತ್ಯಕ್ಷಿಕೆ, ಪಶುಸಂಗೋಪನೆ ಇಲಾಖೆಯಿಂದ ಜ.27ರಂದು ಮಧ್ಯಾಹ್ನ 12.30ಕ್ಕೆ ಶ್ವಾನ ಮತ್ತು ಜಾನುವಾರು ಪ್ರದರ್ಶನ, ಪ್ರವಾಸೋದ್ಯಮ ಇಲಾಖೆಯಿಂದ ದೇವಿರಮ್ಮ ದೇವಾಲಯದ ಮಂಟಪದ ಹೂವಿನ ಕಲಾಕೃತಿ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಜನವರಿ 26ರಂದು ಸಂಜೆ 6 ಗಂಟೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಜ.28ರಂದು ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಇದೇ ವೇಳೆ ಫಲಪುಷ್ಪ ಪ್ರದರ್ಶನದ ಲಾಂಛನವನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ಹಾಜರಿದ್ದರು.
ವಾಹನ ನಿಲುಗಡೆಗೆ ವ್ಯವಸ್ಥೆ
ಕಳೆದ ಬಾರಿ ವಾಹನ ನಿಲುಗಡೆಗೆ ಕಷ್ಟವಾಗಿತ್ತು. ಹಾಗಾಗಿ ಈ ವರ್ಷ ವ್ಯವಸ್ಥಿತವಾಗಿ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಎಸ್.ಕೀರ್ತನಾ ಹೇಳಿದರು. ‘ಜಿಲ್ಲಾಧಿಕಾರಿ ಕಚೇರಿಯಿಂದ ಆಫೀಸರ್ ಕ್ಲಬ್ ತನಕ ಇರುವ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿಸಿ ದ್ವಿಚಕ್ರ ವಾಹನ ನಿಲುಗಡೆಗೆ ಬಳಸಲಾಗುವುದು. ಕ್ರೀಡಾಂಗಣದ ಸುತ್ತ ಇರುವ ರಸ್ತೆ ಬದಿ ಮತ್ತು ಬೋಳರಾಮೇಶ್ವರ ದೇಗುಲದ ಬಳಿ ಕಾರುಗಳ ನಿಲುಗಡೆಗೆ ಅವಕಾಶ ಮಾಡಲಾಗುವುದು ಎಂದರು. ಕಳೆದ ಬಾರಿ ಚೈತ್ರೋತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿಯೂ ಸಹ ಮತ್ತಷ್ಟು ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.