
ಚಿಕ್ಕಮಗಳೂರು: ಜಿಲ್ಲೆಯಲ್ಲಿ ರಸ್ತೆ ಗುಂಡಿಗಳು ಜನರನ್ನು ಇನ್ನಿಲ್ಲದೆ ಕಾಡುತ್ತಿವೆ. ಈ ನಡುವೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದ್ದು, ವರ್ಷದಲ್ಲಿ 190ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ.
ಪ್ರವಾಸಿಗರನ್ನು ಕೈಬೀಸಿ ಕರೆಯುವ ಆಕರ್ಷಣೆಯನ್ನು ಇಲ್ಲಿನ ಪ್ರಕೃತಿ ಸೌಂದರ್ಯ ಹೊಂದಿದೆ. ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಎತ್ತಿನಭುಜ, ಕ್ಯಾತನಮಕ್ಕಿ, ಕುದುರೆಮುಖ ಗಿರಿಶ್ರೇಣಿಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಜತೆಗೆ ಶೃಂಗೇರಿ ಮತ್ತು ಹೊರನಾಡು ರೀತಿಯ ಧಾರ್ಮಿಕ ಕ್ಷೇತ್ರಗಳನ್ನೂ ಜಿಲ್ಲೆ ಹೊಂದಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ರಸ್ತೆ ಗುಂಡಿಗಳು ಆಹ್ವಾನ ನೀಡುತ್ತಿವೆ.
ಅಪಘಾತಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. 2020ರಲ್ಲಿ 160 ಪ್ರಕರಣ ವರದಿಯಾಗಿದ್ದರೆ, 2021ರಲ್ಲಿ 175, 2022ರಲ್ಲಿ 215 ಪ್ರಕರಣ ವರದಿಯಾಗಿವೆ. 2023ರಲ್ಲಿ 1,011 ಪ್ರಕರಣ ವರದಿಯಾಗಿವೆ. 2024ರಲ್ಲಿ 940 ಪ್ರಕರಣ ದಾಖಲಾಗಿದ್ದವು. 2025ರಲ್ಲಿ ಜನವರಿಯಿಂದ ಈವರೆಗೆ 800ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ. 190ಕ್ಕೂ ಹೆಚ್ಚು ಜನರ ಪ್ರಾಣ ಕೂಡ ಹೋಗಿದೆ.
ಕಡೂರು–ಮೂಡಿಗೆರೆ–ಮಂಗಳೂರು, ತುಮಕೂರು–ಹೊನ್ನಾವರ, ಮಂಗಳೂರು–ಕಾರ್ಕಳ–ಶೃಂಗೇರಿ–ಕೊಪ್ಪ–ಶಿವಮೊಗ್ಗ ಸಂಪರ್ಕಿಸುವ ಮೂರು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯಲ್ಲಿ ಹಾದು ಹೋಗಿವೆ. ಬಹುತೇಕ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲೇ ನಡೆದಿದ್ದು, ಅದರಲ್ಲೂ ಜಿಲ್ಲೆ ವ್ಯಾಪ್ತಿಯ ತುಮಕೂರು–ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲೆ ಅಪಘಾತಗಳು ಹೆಚ್ಚು.
ಸಣ್ಣಪುಟ್ಟ ಗ್ರಾಮೀಣ ರಸ್ತೆಗಳು, ರಾಜ್ಯ ಹೆದ್ದಾರಿಗಳು ಸಹ ಗುಂಡಿ ಬಿದ್ದಿದ್ದು ಅಪಘಾತಗಳ ಸಂಖ್ಯೆ ತೀವ್ರವಾಗಿದೆ. ವಾಹನ ಸವಾರರು ಜೀವ ಬಿಗಿ ಹಿಡಿದು ಸಂಚಾರ ಮಾಡಬೇಕಾದ ಅನಿವಾರ್ಯತೆ ಇದೆ.
ಚಿಕ್ಕಮಗಳೂರು ನಗರದ ಸಂಚಾರ ಠಾಣೆ ವ್ಯಾಪ್ತಿಯಲ್ಲಿ 93 ಅಪಘಾತಗಳು ದಾಖಲಾಗಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ 80ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರೆ, ರಾಜ್ಯ ಹೆದ್ದಾರಿಗಳಲ್ಲಿ 35 ಪ್ರಾಣ ಕಳೆದುಕೊಂಡಿದ್ದಾರೆ. ತುಮಕೂರು–ಹೊನ್ನಾವರ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಅಲ್ಲಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಕಡೂರು ತಾಲ್ಲೂಕಿನ ಲಿಂಗಾಪುರದಿಂದ ತರೀಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ ತನಕ 66 ಕಿಲೋ ಮೀಟರ್ ಕಾಮಗಾರಿ ನಡೆಯುತ್ತಿದೆ. ಹಲವು ಕಡೆಗಳಲ್ಲಿ ಮೇಲ್ಸೇತುವೆ, ಕೆಳ ಸೇತುವೆ ಕಾಮಗಾರಿ ನಡೆಯುತ್ತಿದೆ. ಹಲವು ಕಡೆ ಸೂಚನಾ ಫಲಕಗಳಿಲ್ಲ. ಇದು ಕೂಡ ಅಪಘಾತ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯರು.