ADVERTISEMENT

ಚಿಕ್ಕಮಗಳೂರು: ದಶಕಗಳಿಂದ ಬತ್ತಿದ್ದ ಕೆರೆಗೆ ಭರಪೂರ ನೀರು

ಚಿಕ್ಕಮಗಳೂರು: ಸಖರಾಯಪಟ್ಟಣದ ಎಸ್‌.ಬಿದರೆ ಕೆರೆ l ಗ್ರಾಮಸ್ಥರ ಸಾಂಘಿಕ ಯತ್ನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 0:30 IST
Last Updated 15 ಡಿಸೆಂಬರ್ 2025, 0:30 IST
 ಕಡೂರು ತಾಲ್ಲೂಕು ಎಸ್‌.ಬಿದರೆಯ ಕೆರೆಗೆ ಪೈಪ್‌ಲೈನ್‌ ಮೂಲಕ ಹರಿದು ಬರುತ್ತಿರುವ ನೀರು
 ಕಡೂರು ತಾಲ್ಲೂಕು ಎಸ್‌.ಬಿದರೆಯ ಕೆರೆಗೆ ಪೈಪ್‌ಲೈನ್‌ ಮೂಲಕ ಹರಿದು ಬರುತ್ತಿರುವ ನೀರು   

ಕಡೂರು (ಚಿಕ್ಕಮಗಳೂರು): ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಎಸ್.ಬಿದರೆ ಗ್ರಾಮದಲ್ಲಿರುವ,  ದಶಕಗಳಿಂದ ಬರಿದಾಗಿದ್ದ ಕೆರೆಗೆ ಗ್ರಾಮಸ್ಥರ ಸಾಂಘಿಕ ಶ್ರಮದಿಂದಾಗಿ ಈಗ ನೀರು ಹರಿದುಬರುತ್ತಿದೆ.

ಹತ್ತಿರದ ಬೆಳವಾಡಿ ಕೆರೆಯು ತುಂಬಿ ಕೋಡಿಯಾಗಿ ಹರಿಯುತ್ತಿದ್ದ ನೀರು, ಮಾಚೇನಹಳ್ಳಿ-ಎಸ್‌.ಬಿದರೆ ಬಳಿ ಹರಿದು, ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಸೇರುತ್ತಿತ್ತು. ಆ ನೀರು ಈಗ ಎಸ್‌.ಬಿದರೆ ಕೆರೆ ಸೇರುತ್ತಿದೆ.

ಸುಮಾರು 65 ಎಕರೆ ವಿಸ್ತೀರ್ಣದ ಎಸ್‌.ಬಿದರೆ ಕೆರೆ  ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದೆ. ಕೆರೆಗೆ ಮಳೆ ನೀರೇ ಮೂಲವಾಗಿತ್ತು. ಕೆರೆ ತುಂಬುವಷ್ಟು ಮಳೆ ಇರಲಿಲ್ಲ. ಸಮಸ್ಯೆಗೆ ಪರಿಹಾರವಾಗಿ, ಇನ್ನೊಂದು ಕೆರೆ ಕೋಡಿಯಾಗಿ ಹರಿದುಹೋಗುತ್ತಿದ್ದ ನೀರನ್ನೇ ಕೆರೆ ತುಂಬಿಸಲು ಗ್ರಾಮಸ್ಥರು ಒತ್ತು ನೀಡಿದರು.

ADVERTISEMENT

ಎತ್ತಿನಹೊಳೆ ಯೋಜನೆ ಮೂಲಕ ಹಳೇಬೀಡು ಕೆರೆಗೆ 2 ವರ್ಷದ ಹಿಂದೆ ನೀರು ಬಂದಿತ್ತು. ಹಳೇಬೀಡಿನಿಂದ ಬೆಳವಾಡಿ ಕೆರೆಗೆ ಹರಿದನೀರು, ಬಳಿಕ ವಾಣಿವಿಲಾಸ ಸಾಗರ ಸೇರುತ್ತಿತ್ತು. ವಾಣಿವಿಲಾಸ ಸಾಗರ ತುಂಬಿದ್ದರಿಂದ ಎಸ್‌.ಬಿದರೆ ಗ್ರಾಮಸ್ಥರು, ನೀರನ್ನು ಕೆರೆಗೆ ಅಭಿಮುಖವಾಗಿ ಹರಿಸಿ ಸಮಸ್ಯೆ ನೀಗಿಸಲು ಮುಂದಾದರು.

ಮಾಚೇನಹಳ್ಳಿಯಿಂದ ಎಸ್‌.ಬಿದರೆ ಕೆರೆಗೆ 2 ಕಿ.ಮೀ ಅಂತರವಿದ್ದು, ಪೈಪ್‌, ಟಿ.ಸಿ. ಅಳವಡಿಸಿ, ಪಂಪ್‌ಸೆಟ್‌ ನೆರವಿನಿಂದ ನೀರು ಹರಿಸಲು ನಿರ್ಧರಿಸಿದರು. ವಿದ್ಯುದೀಕರಣವನ್ನು ಗ್ರಾಮದಲ್ಲಿ ರೀವೈಂಡಿಂಗ್‌ ಕೆಲಸ ಮಾಡುವ ಯುವಕರು, ಪೈಪ್‌ಲೈನ್‌ ಅಳವಡಿಸಲು ಪ್ಲಂಬರ್‌ಗಳು ಸಿದ್ಧರಾದರು. ಕೂಲಿ ಕಾರ್ಮಿಕರು, ಸರ್ಕಾರಿ ನೌಕರರು, ಸುತ್ತಮುತ್ತಲ ಗ್ರಾಮಸ್ಥರೂ ಹಣ ಸಹಾಯ ಮಾಡಿದರು.

ಕಳಸಾಪುರ ಎಂಯುಎಸ್‌ಎಸ್‌ನಿಂದ ಬಂದ ವಿದ್ಯುತ್‌ ಲೈನ್‌ ಮಾಚೇನಹಳ್ಳಿ ಬಳಿ ಇತ್ತು. ಅಲ್ಲಿಯೇ ಟಿ.ಸಿ ಅಳವಡಿಸಲು ಮುಂದಾದರು. ಅದಕ್ಕಾಗಿ ₹2.50 ಲಕ್ಷ ಹಾಗೂ ಪಂಪ್‌ಸೆಟ್‌ಗೆ ₹2.10 ಲಕ್ಷ ವೆಚ್ಚವಾಯಿತು. ನೀರೆತ್ತಲು 25 ಅಶ್ವಶಕ್ತಿಯ ಪಂಪ್‌ಸೆಟ್‌ ಸಿದ್ಧವಾದವು.

‘ನಮ್ಮ ಕೆರೆಗೆ ನೀರು ತುಂಬಿಸುವ ಯೋಜನೆಗೆ ಎಲ್ಲರ ನೆರವೂ ಇದೆ. ಟಿ.ಸಿ ಅಳವಡಿಸಲು ಶಾಸಕ ಎಚ್‌.ಡಿ.ತಮ್ಮಯ್ಯ ಅವರ ಸಹಕಾರವೂ ಇದೆ. ಈ ಯೋಜನೆಗೆ ಇದುವರೆಗೆ ಸುಮಾರು ₹25 ಲಕ್ಷ ವೆಚ್ಚವಾಗಿದೆ’ ಎಂದು ಗ್ರಾಮದ ಹಿರಿಯ ಶಂಕರ ಲಿಂಗೇಗೌಡ ತಿಳಿಸಿದರು.

ಇದೇ ರೀತಿ ಸಮೀಪದ ಸಿಂದಿಗೆರೆ, ನಾಗರಾಳು ಗ್ರಾಮಸ್ಥರು ಕೆರೆ ತುಂಬಿಸಲು ಮುಂದಾಗಿದ್ದಾರೆ.

 ಕಡೂರು ತಾಲ್ಲೂಕು ಎಸ್‌.ಬಿದರೆಯ ಕೆರೆಗೆ ರೈತರು ಸ್ವಂತ ಹಣ ವೆಚ್ಚ ಮಾಡಿ ನೀರು ತುಂಬಿಸುತ್ತಿರುವುದು
 ಕಡೂರು ತಾಲ್ಲೂಕು ಎಸ್‌.ಬಿದರೆಯ ಕೆರೆಗೆ ರೈತರು ಸ್ವಂತ ಹಣ ವೆಚ್ಚ ಮಾಡಿ ನೀರು ತುಂಬಿಸುತ್ತಿರುವುದು
ಎಸ್.ಬಿದರೆ ಗ್ರಾಮಸ್ಥರು ಕೆರೆಗೆ ನೀರು ತುಂಬಿಸಲು ಮೆಸ್ಕಾಂನಿಂದ ಸಹಕಾರ ಕೊಡಿಸಿದ್ದೇನೆ. ಶಾಶ್ವತ ನೀರಾವರಿಗೆ ಭದ್ರಾ ಉಪ ಕಣಿವೆ ಯೋಜನೆ ಮತ್ತು ರಣಘಟ್ಟ ಯೋಜನೆಗಳು ಜಾರಿ ಆಗಲಿವೆ
ಎಚ್.ಡಿ.ತಮ್ಮಯ್ಯ ಶಾಸಕ ಚಿಕ್ಕಮಗಳೂರು
ಸದ್ಯಕ್ಕೆ ಕೆರೆಯನ್ನು ಶೇ 40ರಷ್ಟು ತುಂಬಿಸಲು ನಿರ್ಧರಿಸಿದ್ದೇವೆ. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳ ಸಲಹೆ ಪಡೆದು ಪೂರ್ಣ ತುಂಬಿಸಲಾಗುವುದು
ಶಂಕರ ಲಿಂಗೇಗೌಡ ಗ್ರಾಮದ ಹಿರಿಯ ಎಸ್‌.ಬಿದರೆ

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.