ADVERTISEMENT

ಚಿಕ್ಕಮಗಳೂರು | ಶಾಲಾ ಕಟ್ಟಡ ಫಿಟ್‌ನೆಸ್: ವರದಿ ಕೇಳಿದ ಸಿಇಒ

ಶಾಲೆಗಳ ದುರಸ್ತಿ ಬಗ್ಗೆ ಆದ್ಯತಾ ಪಟ್ಟಿ ಸಿದ್ಧಪಡಿಸಲು ಶಿಕ್ಷಣ ಇಲಾಖೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:09 IST
Last Updated 18 ಜುಲೈ 2025, 6:09 IST
ಎಚ್.ಎಸ್.ಕೀರ್ತನಾ
ಎಚ್.ಎಸ್.ಕೀರ್ತನಾ   

ಚಿಕ್ಕಮಗಳೂರು: ಶಿಥಿಲಗೊಂಡ ಗೋಡೆಗಳು, ಸೋರುವ ಚಾವಣಿ, ಕೂರಲು ಸಾಧ್ಯವಾಗದ ನೆಲಹಾಸು ಒಳಗೊಂಡ ಶಾಲೆಗಳ ಕುರಿತು ‘ಪ್ರಜಾವಾಣಿ’ ಪ್ರಕಟಿಸಿದ ಸರಣಿ ವರದಿಗಳನ್ನು ಆಧರಿಸಿ ಜಿಲ್ಲೆಯಲ್ಲಿ ಶಾಲೆಯ ಕಟ್ಟಡಗಳ ಕ್ಷಮತೆ ಬಗ್ಗೆ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರದಿ ಕೇಳಿದ್ದಾರೆ.

ಜಿಲ್ಲೆಯಲ್ಲಿ 1,800 ಅಂಗನವಾಡಿ, 1,400ಕ್ಕೂ ಹೆಚ್ಚು ಶಾಲೆಗಳಿದ್ದು, ಅವುಗಳ ಸ್ಥಿತಿಗತಿ ಹೇಗಿದೆ ಎಂಬುದರ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಪ್ರತಿ ಕಟ್ಟಡಗಳ ಬಗ್ಗೆಯೇ ಫಿಟ್‌ ಅಥವಾ ಅನ್‌ಫಿಟ್ ಸರ್ಟಿಫಿಕೇಟ್ ನೀಡುವಂತೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ದುರಸ್ತಿ ಅಗತ್ಯ ಇರುವ ಶಾಲೆಗಳ ಪಟ್ಟಿ ಸಿದ್ಧಪಡಿಸಲು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದ್ದಾರೆ. 

ಶಾಲೆಯಲ್ಲಿನ ಮಕ್ಕಳ ಸಂಖ್ಯೆ, ಕೊಠಡಿ, ಶಿಥಿಲತೆಯ ಆಧಾರದಲ್ಲಿ ಆದ್ಯತಾ ಪಟ್ಟಿಯನ್ನು ರೂಪಿಸಲು ತಿಳಿಸಿಲಾಗಿದೆ. ಹೆಚ್ಚು ಹಾಳಾಗಿರುವ ಮತ್ತು ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯಿಂದ ₹2 ಕೋಟಿ ಅನುದಾನ ಇದೆ. ಶಿಕ್ಷಣ ಇಲಾಖೆಗೆ ಈಗ ₹4 ಕೋಟಿ ಬಂದಿದೆ. ಇದಲ್ಲದೇ ಪ್ರಕೃತಿ ವಿಕೋಪ ನಿಧಿಯಿಂದ ಜಿಲ್ಲಾಧಿಕಾರಿ ಕೂಡ ಅನುದಾನ ನೀಡುತ್ತಿದ್ದಾರೆ. ಇದಲ್ಲದೇ ಗ್ರಾಮ ಪಂಚಾಯಿತಿಯಲ್ಲಿ ಶಿಕ್ಷಣ ಸೆಸ್ ಸಂಗ್ರಹವಾಗುತ್ತದೆ. ಆ ಹಣವನ್ನೂ ಸ್ಥಳೀಯ ಶಾಲೆಗಳ ದುರಸ್ತಿಗೆ ಬಳಸಿಕೊಳ್ಳಲು ಅವಕಾಶ ಇದೆ. ಇದೆಲ್ಲವನ್ನೂ ತ್ವರಿತವಾಗಿ ಮಾಡಲಾಗುವುದು ಎಂದರು.

ದುರಸ್ತಿ ಅಗತ್ಯ ಇರುವ ಶಾಲೆಗಳ ಆದ್ಯತಾ ಪಟ್ಟಿಯನ್ನು ಶಿಕ್ಷಣ ಇಲಾಖೆಗೆ ಕಳುಹಿಸಿ ಅನುದಾನ ಕೋರಲಾಗುವುದು. ಶಾಸಕರಿಗೆ ಕಳುಹಿಸಿ ಅವರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲೂ ಶಾಲೆಗಳ ದುರಸ್ತಿಗೆ ಅನುದಾನ ನೀಡಲು ಮನವಿ ಮಾಡಲಾಗುವುದು. ಸರ್ಕಾರದಿಂದ ಶಾಸಕರು ಹೆಚ್ಚಿನ ಅನುದಾನ ಕೋರಲು ಈ ಪಟ್ಟಿ ಅನುಕೂಲ ಆಗಲಿದೆ ಎಂದು ಹೇಳಿದರು.

ಈ ಪಟ್ಟಿಯನ್ನು ಇನ್ನೊಂದು ವಾರದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತದ ವೆಬ್‌ಸೈಟ್‌ಗೂ ಅಪ್‌ಲೋಡ್ ಮಾಡಲಾಗುವುದು. ಗ್ರಾಮಸ್ಥರು ತಮ್ಮ ಶಾಲೆಯ ಯಾವ ಆದ್ಯತಾ ಪಟ್ಟಿಯಲ್ಲಿದೆ ಎಂಬುದನ್ನು ನೋಡಿಕೊಂಡು ದುರಸ್ತಿಗೆ ತಮ್ಮ ಕೈಲಾದ ನೆರವು ತರಲು, ಗ್ರಾಮ ಪಂಚಾಯಿತಿ ಅನುದಾನ ಬಳಸಲು, ಸಿಎಸ್‌ಆರ್‌ ಅನುದಾನ ಪಡೆದುಕೊಳ್ಳಲು ಅನುಕೂಲ ಆಗಲಿದೆ ಎಂದರು.

ಮಲೆನಾಡಿನಲ್ಲಿ ಮಳೆ ಜಾಸ್ತಿ ಇರುವುದರಿಂದ ಮೂರು–ನಾಲ್ಕು ವರ್ಷಗಳಲ್ಲೇ ರಿಪೇರಿಗೆ ಬರುತ್ತಿವೆ. ಆದ್ದರಿಂದ ಇಳಿಜಾರು ಮಾದರಿಯ ಮೇಲ್ಚಾವಣಿ ನಿರ್ಮಿಸಲು ಸುತ್ತೋಲೆ ಹೊರಡಿಸಲಾಗಿದೆ. ಹೆಂಚಿನ ಚಾವಣಿಗಳ ಮೇಲೆ ಮತ್ತೊಂದು ಶೀಟ್ ಹೊದಿಕೆ ಹೊದಿಸುವ ಕಾರ್ಯವನ್ನೂ ಆರಂಭಿಸಲಾಗಿದೆ. ಇದರಿಂದ ಚಾವಣಿಗಳ ಬಾಳಿಕೆ ಹೆಚ್ಚಾಗಲಿದೆ ಎಂದು ವಿವರಿಸಿದರು.

ಶಾಲೆಗಳ ಸ್ಥಿತಿ ಬಗ್ಗೆ ವರದಿ ಪ್ರಕಟಿಸಿದ ಪ್ರಜಾವಾಣಿಗೆ ಧನ್ಯವಾದಗಳು. ಮೂರು ವರ್ಷಗಳ ಹಿಂದೆ ರಿಪೇರಿಯಾಗಿ ನಂತರವೂ ಸೋರುತ್ತಿದ್ದರೆ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳದ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.
–ಎಚ್.ಎಸ್.ಕೀರ್ತನಾ ಜಿಪಂ ಸಿಇಒ

‘ಶಾಲೆಗಳ ಪಟ್ಟಿ ಪಡೆಯುತ್ತಿದ್ದೇವೆ’

‘ರಿಪೇರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ ₹2.14 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಹೊಸದಾಗಿ ರಿಪೇರಿಯಾಗಬೇಕಿರುವ ಶಾಲೆಗಳ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಜೆ.ಪುಟ್ಟರಾಜು ಮಾಹಿತಿ ನೀಡಿದರು.

ಪಿಆರ್‌ಇಡಿ (ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ) ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಮೂಲಕ ರಿಪೇರಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ವಿವಿಧ ಹಂತದಲ್ಲಿದ್ದು ಪೂರ್ಣಗೊಂಡ ಬಳಿಕ ಸಮಸ್ಯೆ ಕಡಿಮೆಯಾಗಲಿದೆ ಎಂದರು. ಮಳೆಯಿಂದ ಹೊಸದಾಗಿ ಹಾನಿಯಾಗಿರುವ ಶಾಲೆಗಳ ಪಟ್ಟಿಯನ್ನು ಜಿಲ್ಲಾಧಿಕಾರಿ ಅವರಿಗೂ ನೀಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.