ADVERTISEMENT

ಶೃಂಗೇರಿ ಶಾರದೆಗೆ ಬ್ರಾಹ್ಮೀ ಅಲಂಕಾರ

ಶರನ್ನವರಾತ್ರಿಯ ಪ್ರಯುಕ್ತ ವಿಧುಶೇಖರಭಾರತೀ ಶ್ರೀಗಳಿಂದ ತುಂಗಾನದಿಗೆ ಪೂಜೆ 

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 5:20 IST
Last Updated 24 ಸೆಪ್ಟೆಂಬರ್ 2025, 5:20 IST
ಶರನ್ನವರಾತ್ರಿ ಪ್ರಯುಕ್ತ ಶಾರದಾ ದೇವಿಯ ಬೀದಿ ಉತ್ಸವದಲ್ಲಿ ಶಾಸಕ ಟಿ.ಡಿ ರಾಜೇಗೌಡ ಭಾಗಿಯಾದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ ರಮೇಶ್ ಭಟ್ ಭಾಗವಹಿಸಿದ್ದರು
ಶರನ್ನವರಾತ್ರಿ ಪ್ರಯುಕ್ತ ಶಾರದಾ ದೇವಿಯ ಬೀದಿ ಉತ್ಸವದಲ್ಲಿ ಶಾಸಕ ಟಿ.ಡಿ ರಾಜೇಗೌಡ ಭಾಗಿಯಾದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ ರಮೇಶ್ ಭಟ್ ಭಾಗವಹಿಸಿದ್ದರು   

ಶೃಂಗೇರಿ: ಕೈಯಲ್ಲಿ ಕಮಂಡಲು, ಅಕ್ಷರಮಾಲೆ, ಪುಸ್ತಕ, ಪಾಶ ಮತ್ತು ಚಿನ್ನದ ಮುದ್ರೆಗಳನ್ನು ಹಾಕಿ ಮಂಗಳವಾರ ಶೃಂಗೇರಿ ಶಾರದಾ ದೇವಿಗೆ ಬ್ರಾಹ್ಮೀ ಅಲಂಕಾರ ಮಾಡಲಾಗಿತ್ತು.

ನವರಾತ್ರಿಯ ಪ್ರಯುಕ್ತ ಬೇರೆ ಬೇರೆ ಕಡೆಯಿಂದ ಭಕ್ತರು ಶಾರದಾ ಮಠಕ್ಕೆ ಬಂದು, ಶಾರದಾ ಪರಮೇಶ್ವರಿಗೆ ವಿಶೇಷಪೂಜೆ ಸಲ್ಲಿಸಿದರು. ಸೂಕ್ತ ಜಪ, ಭುವನೇಶ್ವರಿ ಜಪ, ದುರ್ಗಾ ಜಪಗಳ ಬಳಿಕ ಶಾರದೆಯ ಆವಾಸಸ್ಥಾನವೆಂದು ಶಾಸ್ತ್ರದಲ್ಲಿ ಹೇಳಿದಂತೆ ಶ್ರೀಚಕ್ರಕ್ಕೆ ನವಾಹರಣ ಪೂಜೆ, ಮಧ್ಯಾಹ್ನ ಕುಮಾರೀಪೂಜೆ, ಸುಹಾಸಿನೀ ಪೂಜೆ, ಭಕ್ತಾದಿಗಳಿಂದ ವಿಶೇಷ ಪೂಜೆ ನಡೆಯಿತು.

ಸಂಜೆ ಬೀದಿ ಉತ್ಸವಕ್ಕೆ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿ ಚಾಲನೆ ನೀಡಿದರು. ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು ಮತ್ತು ವಿವಿಧ ಸಂಘ–ಸಂಸ್ಥೆಗಳು ಬೀದಿ ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ADVERTISEMENT

ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಚೆನ್ನೈನ ಸವಿತಾ ಶ್ರೀರಾಮ್ ಮತ್ತು ವೃಂದದಿಂದ ಸಂಜೆ 6 ಗಂಟೆಗೆ ಮಠದ ಚಂದ್ರಶೇಖರಭಾರತೀ ಸಭಾಂಗಣದಲ್ಲಿ ನಾಮ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. 

ಮಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ ಶಾರದಾಮ್ಮನವರ ದೇವಾಲಯದಲ್ಲಿ ದರ್ಬಾರು ನಡೆಸಿದರು.

ಶಾರದೆಯ ಉತ್ಸವ ಮೂರ್ತಿಯನ್ನು ಬಂಗಾರದ ರಥದಲ್ಲಿ ಕುಳ್ಳಿರಿಸಲಾಯಿತು. ವೇದ, ವಾದ್ಯ ಘೋಷಗಳೊಂದಿಗೆ, ಛತ್ರ-ಛಾಮರಗಳೊಂದಿಗೆ ಒಳಪ್ರಾಂಗಣದಲ್ಲಿ ದೇವಾಲಯಕ್ಕೆ ಮೂರು ಸುತ್ತು ಉತ್ಸವ ನೆಡೆದು ಸಾಗಿತು. ಉತ್ಸವದ ಬಳಿಕ ಗುರುಗಳು ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಆಸೀನರಾದರು. ಸಪ್ತಶತಿ ಪಾರಾಯಣದ ಅಧ್ಯಯನ, ಅಮ್ಮನವರಿಗೆ ಮಂಗಳಾರತಿ, ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ ಸೇವೆ ನೆರವೇರಿತು. ಪ್ರಸಾದ ವಿನಿಯೋಗದ ಬಳಿಕ ಉತ್ತರನೀರಾಜನದೊಂದಿಗೆ ದರ್ಬಾರು ಮುಕ್ತಾಯಗೊಂಡಿತು.

ಶರನ್ನವರಾತ್ರಿಯ ಪ್ರಯುಕ್ತ ಮಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ತುಂಗಾನದಿಗೆ ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.